ಬೆಂಗಳೂರು: ಶ್ರೀಮಂತರ ಮನೆಗಳನ್ನೇ ಟಾರ್ಗೆಟ್ ಮಾಡಿ ಕದ್ದ ಚಿನ್ನಾಭರಣಗಳನ್ನು ಕೊಳಚೆ ಪ್ರದೇಶದಲ್ಲಿ ಹೂತಿಟ್ಟು ಗೋವಾಕ್ಕೆ ತೆರಳಿ ಕ್ಯಾಸಿನೋ ಆಡುತ್ತಿದ್ದ ಕುಖ್ಯಾತ ಕಳ್ಳ ಕಾರ್ತಿಕ್ ಆಲಿಯಾಸ್ ಎಸ್ಕೇಪ್ ಕಾರ್ತಿಕ್‌ನನ್ನು ಬಂಧಿಸಿರುವ ಗೋವಿಂದರಾಜ ನಗರ ಠಾಣೆ ಪೊಲೀಸರು 1.200 ಕೆ.ಜಿ. ಚಿನ್ನಾ ಭರಣ ಜಪ್ತಿ ಮಾಡಿದ್ದಾರೆ.
ಎಸ್ಕೇಪ್ ಕಾರ್ತಿಕ್ ಬಂಧನದಿಂದ 13ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 70 ಲಕ್ಷ ರೂ. ಮೌಲ್ಯದ 1.200 ಕೆ.ಜಿ. ಚಿನ್ನ ಜಪ್ತಿ ಮಾಡಲಾಗಿದೆ. ಖಾಸಗಿ ಕಂಪನಿ ಉದ್ಯೋಗಿ ಸಂಪತ್ ಅವರು ಸೆ.12ರಂದು ರಾತ್ರಿ ವರ್ಕ್‌ಫ್ರಂ ಹೋಮ್ ಪ್ರಯುಕ್ತ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತಡರಾತ್ರಿ 2 ಗಂಟೆಗೆ ಮನೆಯ ಬಾಗಿಲಿನ ಛಾವಣಿಗೆ ಹೋಗಿ ಸ್ವಲ್ಪಹೊತ್ತು ಇದ್ದು, ಮನೆಯೊಳಗೆ ಬಂದು ಚಿಲಕ ಹಾಕದೇ ನಿದ್ದೆಗೆ ಜಾರಿದ್ದರು.
ಆ ವೇಳೆ ಸಹಚರರ ಜತೆಗೆ ಮನೆಗೆ ಎಂಟ್ರಿ ಕೊಟ್ಟಿದ್ದ ಎಸ್ಕೇಪ್ ಕಾರ್ತಿಕ್ ಎಚ್‌ಪಿ ಕಂಪನಿಯ ಲ್ಯಾಪ್‌ಟಾಪ್, 20 ಸಾವಿರ ನಗದು, ಮೊಬೈಲ್, 8 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಕದ್ದೊಯ್ದಿದ್ದ. ಮುಂಜಾನೆ 3.15ಕ್ಕೆ ಸಂಪತ್‌ಗೆ ಎಚ್ಚರವಾದಾಗ ಮನೆಯಲ್ಲಿದ್ದ ವಸ್ತುಗಳೆಲ್ಲಾ ಕಳ್ಳತನವಾಗಿರುವುದು ಕಂಡು ಬಂದಿತ್ತು. ಈ ಬಗ್ಗೆ ಸಂಪತ್ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಾರ್ಯಾಚರಣೆಗೆ ಇಳಿದ ಖಾಕಿ, ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿ ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಎಸ್ಕೇಪ್ ಕಾರ್ತಿಕ್ ಬಗ್ಗೆ ಸಿಳಿವು ಸಿಕ್ಕಿತ್ತು. ಆತ ಗೋವಾದಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಕೂಡಲೇ ಗೋವಾಕ್ಕೆ ತೆರಳಿದ ಪೊಲೀಸರ ತಂಡ ಗೋವಾದಲ್ಲಿ ಶೋಧ ನಡೆಸಿದಾಗ ಗೆಳತಿಯ ಜೊತೆಗೆ ಕ್ಯಾಸಿನೊದಲ್ಲಿ ಆಟವಾಡುತ್ತಿದ್ದ. ಕೂಡಲೇ ಆತನನ್ನು ಬಂಧಿಸಿದ ಪೊಲೀಸರು ನಗರಕ್ಕೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಚಿನ್ನ ಹೂತಿಟ್ಟು ಗೋವಾಕ್ಕೆ ಎಸ್ಕೇಪ್: ಬೆಂಗಳೂರಿನ ವಿವಿಧ ಮನೆಗಳಲ್ಲಿ ಕದ್ದಿದ್ದ ಅರ್ಧ ಕೆಜಿ ಚಿನ್ನವನ್ನು ಗೋವಾಕ್ಕೆ ಹೋಗುವ ದಿನವೇ ಅಡವಿಡಲು ಮುಂದಾಗಿದ್ದ. ಆ ವೇಳೆ ಆತನ ಪರಿಚಿತ ಚಿನ್ನದಂಗಡಿ ಬಂದ್ ಆಗಿತ್ತು. ಹೀಗಾಗಿ ಕೈಯಲ್ಲಿರುವ ಚಿನ್ನ ಏನು ಮಾಡಬೇಕೆಂದು ತೋಚಲಿಲ್ಲ. ಸ್ನೇಹಿತೆಯ ಜತೆಗೆ ಸಿಟಿ ರೈಲ್ವೆ ನಿಲ್ದಾಣದಲ್ಲಿ ಗೋವಾ ರೈಲಿಗೆ ಕಾಯುತ್ತಿದ್ದಾಗ ಓಕಳಿಪುರಂನಲ್ಲಿ ರೈಲ್ವೆ ಕಾಲೋನಿಯಲ್ಲಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ. ಅಲ್ಲಿ ಯಾರೂ ಓಡಾಡದ ಕೊಳಚೆ ಜಾಗದಲ್ಲಿ 2 ಅಡಿ ಗುಂಡಿ ತೆಗೆದು ಕದ್ದ ಚಿನ್ನವನ್ನು ಅಲ್ಲಿ ಹೂತಿಟ್ಟು ಗುರುತಿಗಾಗಿ ಗುಂಡಿ ತೆಗೆದ ಜಾಗದ ಮೇಲೆ ಕಲ್ಲಿಟ್ಟು ಗೋವಾ ರೈಲು ಹತ್ತಿದ್ದ. ಇತ್ತ ಕಾರ್ತಿಕ್ ವಿಚಾರಣೆ ವೇಳೆ ಕೊಟ್ಟ ಮಾಹಿತಿ ಆಧರಿಸಿ ಆತ ಹೂತಿಟ್ಟ ಜಾಗಕ್ಕೆ ತೆರಳಿ ಅಗೆದಾಗ ಅಲ್ಲಿ ಅರ್ಧ ಕೆ.ಜಿ. ಚಿನ್ನಾಭರಣ ಕಂಡು ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ.
ಎಸ್ಕೇಪ್ ಕಾರ್ತಿಕ್ ವಿರುದ್ಧ 80ಕ್ಕೂ ಹೆಚ್ಚು ಪ್ರಕರಣ, 18 ಅರೆಸ್ಟ್ ವಾರೆಂಟ್: ಎಸ್ಕೇಪ್ ಕಾರ್ತಿಕ್ ಕಳ್ಳತನದ ಶೈಲಿಯೇ ಭಿನ್ನ. ಆತನ ವಿರುದ್ಧ ಬೆಂಗಳೂರಿನಲ್ಲಿ 80ಕ್ಕೂ ಹೆಚ್ಚು ಮನೆಗಳ್ಳತನ ಕೇಸ್‌ಗಳಿವೆ. ಕದ್ದು ಜೈಲು ಸೇರಿದ ಬಳಿಕ ಜಾಮೀನಿನ ಮೇಲೆ ಹೊರ ಬಂದು ಮತ್ತೆ ಹಳೇ ಚಾಳಿ ಮುಂದುವರಿಸುತ್ತಾನೆ. ಸಾಮಾನ್ಯವಾಗಿ ಒಂಟಿಯಾಗಿ ಬೆಂಗಳೂರು, ಚೆನ್ನೈ, ತಿರುಪತಿ ಸೇರಿದಂತೆ ಬೇರೆ ಬೇರೆ ರಾಜ್ಯದ ಲ್ಲಿಯೂ ಕಳ್ಳತನ ಮಾಡುತ್ತಿದ್ದ. ಹೆಚ್ಚಾಗಿ ಒಂಟಿ ಮನೆ ಹಾಗೂ ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಆದರೆ ಈ ಬಾರಿ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರ ಜೊತೆಗೆ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಆತನ ವಿರುದ್ಧ ನ್ಯಾಯಾಲಯದಿಂದ 18 ಅರೆಸ್ಟ್ ವಾರೆಂಟ್ ಬಾಕಿ ಇತ್ತು.