ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್ 19 ರಣಕೇಕೆ ಮುಂದುವರಿದಿದ್ದು, ಗಂಟೆಗೆ ಒಬ್ಬರಂತೆ ಮೃತಪಡುತ್ತಿದ್ದಾರೆ. ನಗರದಲ್ಲಿ ಕಳೆದ 24 ಗಂಟೆಯಲ್ಲಿ 24 ಸೋಂಕಿತರು ಮೃತಪಟ್ಟಿದ್ದು, ರಾಜ್ಯದಲ್ಲಿಯೇ ದಾಖಲೆಯ ಸಾವು ಸಂಭವಿಸಿವೆ. ಒಂದು ವಾರದಿಂದ ಸೋಂಕಿತರ ಸಂಖ್ಯೆ 500 ಗಡಿ ದಾಟುತ್ತಿದ್ದು, ಶನಿವಾರ ಏಕಾಏಕಿ 1172 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 8345 ಏರಿಕೆಯಾದಂತಾಗಿದೆ. 124 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದು, ನಿಗದಿತ ಕೋವಿಡ್ 19 ಆಸ್ಪತ್ರೆ, ಆರೋಗ್ಯ ಕೇಂದ್ರ ಹಾಗೂ ಆರೈಕೆ ಕೇಂದ್ರಗಳಲ್ಲಿ 7,250 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 129 ಜನ ಸೋಂಕಿಗೆ ಬಲಿಯಾಗಿದ್ದು, ಶನಿವಾರ 195 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 1,88,960 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಶನಿವಾರ ದೃಢಪಟ್ಟಿರುವ ಸೋಂಕಿತರಿಗೆ ಹೇಗೆ ಸೋಂಕು ಹರಡಿದೆ ಎಂಬ ಬಗ್ಗೆ ಪಾಲಿಕೆ ಅಧಿಕಾರಿಗಳ ಬಳಿ ಮಾಹಿತಿಯೇ ಇಲ್ಲ. ಇಂತಹ ಸಂದಿಗಟಛಿ ಪರಿಸ್ಥಿತಿಯಲ್ಲಿ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸೋಂಕಿತರನ್ನು ಪತ್ತೆ ಹಚ್ಚುವುದೇ ಸವಾಲಾಗಿ ಪರಿಣಮಿಸಿದೆ.
ಧರ್ಮಗುರು ಬರ್ನಾರ್ಡ್ ಮೊರಸ್‌ಗೆ ಸೋಂಕು ದೃಢ: ಬೆಂಗಳೂರಿನ ವಿಶ್ರಾಂತ ಧರ್ಮಾಧ್ಯಕ್ಷರಾದ ಬರ್ನಾರ್ಡ್ ಮೊರಸ್ ಅವರಿಗೆ ಕೋವಿಡ್ 19 ಪಾಸಿಟಿವ್ ಬಂದ ಹಿನ್ನೆಲೆ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದೆ ಎಂದು ಆರ್ಚ್ ಡಿಯೋಸಿಸ್ ಆಫ್ ಬೆಂಗಳೂರು ಪ್ರಕಟಣೆ ಹೊರಡಿಸಿದೆ. ಬರ್ನಾರ್ಡ್ ಮೊರಸ್ ಅನಾರೋಗ್ಯದ ಹಿನ್ನೆಲೆ ಜು.2 ರಂದು ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಜು.3ರಂದು ಅವರಿಗೆ ಕೋವಿಡ್ ಲಕ್ಷಣ ಕಾಣಿಸಿಕೊಂಡಿದ್ದು ವೈದ್ಯರು ಅವರ ಆರೋಗ್ಯ ಸ್ಥಿತಿ ಸಾಧಾರಣವಾಗಿದೆ ಎಂದಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿಗೆ ಸೋಂಕು: ಪೊಲೀಸ್ ಇಲಾಖೆ ಬಳಿಕ ಈಗ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ರಾಜಾಜಿನಗರ, ನಾಗರಬಾವಿ, ಎಂಎಸ್ ಬಿಲ್ಡಿಂಗ್, ಸುಂಕದ ಕಟ್ಟೆ, ಯಶವಂತಪುರದಲ್ಲಿ ಅಗ್ನಿಶಾಮಕ ದಳದ 14 ಮಂದಿ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಕುಟುಂಬಸ್ಥರು, ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಮಾಗಡಿ ರಸ್ತೆ ಹೊನ್ನಗನಹಟ್ಟಿ ಅಗ್ನಿಶಾಮಕ ಠಾಣೆಯ 34 ವರ್ಷದ ಮಹಿಳಾ ಸಿಬ್ಬಂದಿಗೆ ಪಾಸಿಟಿವ್ ದೃಢಪಟ್ಟಿದೆ. ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪ ನಿವಾಸಿ ಆಗಿದ್ದ ಮಹಿಳಾ ಸಿಬ್ಬಂದಿ ಕಳೆದೆರಡು ದಿನಗಳ ಹಿಂದೆ ರಾಜಾಜಿನಗರದಲ್ಲಿ ಪರೀಕ್ಷೆಗೆ ಒಳಪಟ್ಟಿದ್ದು, ಶನಿವಾರ ವರದಿ ಬಂದಿದೆ. ಸದ್ಯ ಇವರನ್ನು ಬೆಂಗಳೂರಿನ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸಂಜಯಗಾಂಧಿ ಅಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 10 ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆ ಅಧಿಕಾರಿಗಳು ಸೋಂಕು ಇರುವುದನ್ನು ಮರೆಮಾಚಿ ಕೆಲಸಕ್ಕೆ ಬರುವಂತೆ ಸೂಚಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ. ಇನ್ನು, ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಕೆ.ಸಿ. ಜನರಲ್ ಆಸ್ಪತ್ರೆ ಕೋವಿಡ್ ಐಸಿಯುನಲ್ಲಿ ರೋಗಿಗಳ ಆರೈಕೆ ಮಾಡುತ್ತಿದ್ದ 5 ನರ್ಸ್‌ಗಳಿಗೆ ಕೋವಿಡ್ 19 ಪಾಸಿಟಿವ್ ಬಂದಿದ್ದು, ಇವರ ಸಂಪರ್ಕ ದಲ್ಲಿರುವವರನ್ನು ಕ್ವಾರಂಟೈನ್ ಮಾಡಲಾಗಿದೆ.
ಸೋಮವಾರದಿಂದ ಒಪಿಡಿ ಆರಂಭ: ಜಯದೇವ ಆಸ್ಪತ್ರೆ ಸಿಬ್ಬಂದಿಗೆ ಸೋಂಕು ತಗುಲಿದ್ದರಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದ ಆಸ್ಪತ್ರೆ ಹೊರ ರೋಗಿಗಳ ವಿಭಾಗ (ಒಪಿಡಿ) ಸೋಮವಾರ ಆರಂಭವಾಗಲಿದೆ. ಸಾಮಾಜಿಕ ಅಂತರದೊಂದಿಗೆ ದಿನಕ್ಕೆ 400 ರೋಗಿಗಳಿಗೆ ಸೀಮಿತಗೊಳಿಸಲಾಗುವುದು. ತುರ್ತು ಸೇವೆ ದಿನದ 24 ಗಂಟೆಯೂ ಸಿಗಲಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.
ಚಿಕಿತ್ಸೆ ಫಲಿಸದೆ ಸೋಂಕಿತ ಮೃತ: ಕೋವಿಡ್ 19 ವೈರಸ್‌ನಿಂದ ಶಂಕರ ಮಠ ವಾರ್ಡ್‌ನ ಕುರುಬರಹಳ್ಳಿಯ 60ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.