ಮುಂಬಯಿ: ನಗರದ ಕಮಲಾ ಮಿಲ್ಸ್ ಕಂಪೌಂಡ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡ ಘಟನೆಯ ಹಿನ್ನೆಲೆಯಲ್ಲಿ ಅಕ್ರಮ ಹೊಟೇಲ್, ರೆಸ್ಟೋರೆಂಟ್‌ಗಳ ನಿರ್ಮಾಣದ ವಿರುದ್ಧ ನೆಲಸಮ ಕಾರ್ಯಾಚರಣೆ ನಡೆಯುತ್ತಿರುವುದನ್ನು ಪ್ರತಿಭಟಿಸಿ ಹೊಟೇಲಿಗರು ಉದ್ಯಮಿ, ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿ ನೇತೃತ್ವದಲ್ಲಿ ಬಿಎಂಸಿ ಕಚೇರಿ ಎದುರು ಮೋರ್ಚಾ ನಡೆಸಿದರು.
ಅನಧಿಕೃತ ನಿರ್ಮಾಣದ ನೆಪದಲ್ಲಿ ಬಿಎಂಸಿ ಅಧಿಕಾರಿಗಳು ಹೊಟೇಲ್‌ನ ಕಂಪೌಂಡ್ ಗೋಡೆಯನ್ನು ನೆಲಸಮಗೊಳಿಸುತ್ತಿರುವುದರೊಂದಿಗೆ ಅಲ್ಲಿನ ಕಿಚನ್‌ಗೂ ಬುಲ್ಡೋಜರ್ ನುಗ್ಗಿಸುತ್ತಿರುವುದರ ವಿರುದ್ಧ ಹೊಟೇಲಿಗರು ಆಕ್ರೋಶ ವ್ಯಕ್ತಪಡಿಸಿದರು. ಈ ವಿಷಯದಲ್ಲಿ ಬಿಎಂಸಿ ಆಯುಕ್ತ ಅಜೋಯ್ ಮೆಹ್ತಾ ಅವರನ್ನು ಭೇಟಿಯಾಗಿ ಚರ್ಚಿಸಲು ಹೊಟೇಲಿಗರು ನಿರ್ಧರಿಸಿದರು. ಇದರಿಂದ ಎಚ್ಚೆತ್ತುಕೊಂಡ ಬಿಎಂಸಿ ಅಧಿಕಾರಿಗಳು ಹೊಟೇಲ್, ರೆಸ್ಟೋರೆಂಟ್‌ಗಳ ನೆಲಸಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಎರ್ಮಾಳ್ ಹರೀಶ್ ಶೆಟ್ಟಿ ಅವರು, ಬಿಎಂಸಿ ಅಧಿಕಾರಿಗಳು ಹೊಟೇಲ್ ಕಂಪೌಂಡ್‌ನಲ್ಲಿ ಸಿಲಿಂಡರ್ ಬಳಸದಿದ್ದರೂ ಕಂಪೌಂಡ್ ಗೋಡೆಯನ್ನು ಒಡೆದು ಹಾಕಿ ಹೊಟೇಲ್‌ಗೆ ಹಾನಿಯುಂಟು ಮಾಡುತ್ತಿದ್ದಾರೆ. 6 ಅಡಿಯವರೆಗೆ ಕಂಪೌಂಡ್ ಹೊಂದಿರಲು ಅನುಮತಿ ಇದ್ದರೂ ಈಗ ಅದನ್ನು ಅಕ್ರಮವೆಂದು ಹೇಳಿ ನೆಲಸಮಗೊಳಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಬಿಎಂಸಿ ಅಧಿಕಾರಿಗಳು ಪಯ್ಯಡೆ ಇಂಟರ್‌ನ್ಯಾಶನಲ್ ಕಂಪೌಂಡ್ ಗೋಡೆಯನ್ನು ಒಡೆದು ಹಾಕಿದ್ದು, ವೆಜ್‌ಟ್ರೀಟ್ ಹೊಟೇಲ್‌ನಲ್ಲಿ ಕೂಡ ಅದೇ ರೀತಿ ಕಾರ್ಯಾಚರಣೆಗೆ ಮುಂದಾದಾಗ ನಾವು ಅದನ್ನು ತಡೆದಿದ್ದೇವೆ. ಕಂಪೌಂಡ್ ರೆಸ್ಟೋರೆಂಟ್ ಬೋರ್ಡ್ ಹೊಂದಲು ಲೈಸನ್ಸ್ ಇರುವಾಗ ಬಿಎಂಸಿ ಅಧಿಕಾರಿಗಳ ಈ ಕ್ರಮ ಸರಿಯಲ್ಲ ಎಂದು ಹರೀಶ್ ಶೆಟ್ಟಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಸುಮಾರು 100ಕ್ಕೂ ಹೆಚ್ಚಿನ ಹೊಟೇಲಿಗರು ಎರ್ಮಾಳ್ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಉತ್ತರ ಮುಂಬಯಿ ಲೋಕಸಭಾ ಸದಸ್ಯ ಗೋಪಾಲ್ ಶೆಟ್ಟಿ ಮತ್ತು ಶಾಸಕಿ ಮನೀಷಾ ಚೌಧರಿ ಅವರನ್ನು ಭೇಟಿಯಾಗಿ ಈ ವಿಷಯದ ಕುರಿತಂತೆ ಚರ್ಚಿಸಿ ಬಿಎಂಸಿ ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಹೊಟೇಲ್ ಕಂಪೌಂಡ್‌ನಲ್ಲಿ ಸಿಲಿಂಡರ್ ಬಳಸಲಾಗುತ್ತಿಲ್ಲ. ಅಲ್ಲಿ ಅಕ್ರಮ ಎಂಬುವುದು ಇಲ್ಲದಿದ್ದ ಪಕ್ಷದಲ್ಲಿ ಬಿಎಂಸಿ ಅಧಿಕಾರಿಗಳು ಒಮ್ಮಿಂದೊಮ್ಮೆಲೆ ಬಂದು ನೆಲಸಮಗೊಳಿಸುವುದು ಯಾವ ನ್ಯಾಯ ಎಂದು ಸಂಸದ ಗೋಪಾಲ್ ಶೆಟ್ಟಿ ಅವರು ಪ್ರಶ್ನಿಸಿದ್ದು, ಹೊಟೇಲಿಗರಿಗೆ ಬಿಎಂಸಿ ಆಯುಕ್ತರನ್ನು ಭೇಟಿಗೈಯಲು ವ್ಯವಸ್ಥೆ ಮಾಡುವಂತೆ ಶಾಸಕಿ ಮನೀಷಾ ಚೌಧರಿ ಅವರಿಗೆ ಸಲಹೆ ನೀಡಿದ್ದರು. ತುಳು- ಕನ್ನಡಿಗ ಹೆಚ್ಚಿನ ಹೊಟೇಲಿಗರು, ಆಹಾರ್‌ನ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.