ಮುಂಬಯಿ, ಅ. 6: ಬದಲಾಗುತ್ತಿರುವ ಕಾಲದ ಜತೆಗೆ ಹೊಂದಿಕೊಂಡು ಬದುಕನ್ನು ಕಟ್ಟಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಇದು ಪ್ರಕೃತಿಯ ನಿಯಮವೂ ಹೌದು. ಕೋವಿಡ್‌ಮನುಕುಲಕ್ಕೆ ಅನೇಕ ರೀತಿಯ ಸವಾಲನ್ನು ತಂದೊಡ್ಡಿದರೂ ಜೀವನವನ್ನು ಮತ್ತೆ ಹಳಿಗೇರಿಸುವ ಪ್ರಯತ್ನ ನಮ್ಮದಾಗಿರಬೇಕು. ಮುಂಬಯಿ ನಗರ ಮೊದಲಿನಂತಿಲ್ಲ. ಆರೇಳು ತಿಂಗಳುಗಳಿಂದ ನಿಂತ ನೀರಾಗಿದ್ದ ಮಹಾನಗರ ಪ್ರಸ್ತುತ ಮತ್ತೆ ನಿಧಾನಗತಿಯಲ್ಲಿ ಪೂರ್ವಸ್ಥಿತಿಯತ್ತ ಸಾಗುತ್ತಿರುವುದನ್ನು ಕಾಣಬಹುದು. ಅದರಲ್ಲೂ ಮಾರ್ಚ್ ಕೊನೆಯಲ್ಲಿ ಮುಚ್ಚಿದ್ದ ಹೊಟೇಲ್, ಕ್ಯಾಂಟಿನ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಮತ್ತೆ ತೆರೆಯಲು ಸರಕಾರ ಅನುಮತಿ ನೀಡಿದ್ದು, ಹೊಟೇಲ್ ಕಾರ್ಮಿಕರಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ.
ಹೊಟ್ಟೆಪಾಡಿಗಾಗಿ ನಗರ ಸೇರಿದ ಹೊಟೇಲ್ ಕಾರ್ಮಿಕರಿಗೆ ಲಾಕ್‌ಡೌನ್‌ನಿಂದಾಗಿ ನಿತ್ಯದ ದುಡಿಮೆ ಇಲ್ಲದೆ ಅನೇಕ ರೀತಿಯ ಸಂಕಷ್ಟ ಗಳು ಎದುರಾದವು. ಹಲವು ಮಂದಿ ಹೊಟೇಲ್ ಉದ್ಯಮಿಗಳು ಕಾರ್ಮಿಕರಿಗೆ ಕೆಲವು ತಿಂಗಳ ಕಾಲ ಅರ್ಧ ವೇತನ ನೀಡಿರು ವುದಲ್ಲದೆ, ಆಹಾರದ ಕಿಟ್‌ಗಳನ್ನು ವಿತರಿಸಿ ರುವುದು ಸಹಕಾರಿಯಾಗಿತ್ತು. ಲಾಕ್‌ಡೌನ್ ಹಂತ ಹಂತವಾಗಿ ಸಡಿಲಗೊಂಡ ಬಳಿಕ ಹೆಚ್ಚಿನ ಕಾರ್ಮಿಕರು ತಮ್ಮ ಹುಟ್ಟೂರುಗಳಿಗೆ ತೆರಳಿದ್ದಾರೆ.
ಸ್ವತಃ ಸುರಕ್ಷೆ, ಗ್ರಾಹಕ ಸುರಕ್ಷೆ : ಇನ್ನೊಂದೆಡೆ ಪ್ರತೀ ಹೊಟೇಲ್‌ನಲ್ಲಿ ಗ್ರಾಹಕರ ಹರಿವನ್ನು ನಿಭಾಯಿಸಲು ಹಲವು ಸುರಕ್ಷಾ ಕ್ರಮಗಳನ್ನು ಜಾರಿಗೆ ತರುವುದರೊಂದಿಗೆ ಇಲ್ಲಿ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕಿದೆ. ಹೆಚ್ಚಿನ ಹೊಟೇಲ್ ಗಳಲ್ಲಿ ಕಚೇರಿ, ಭದ್ರತೆ, ಮನೆಗೆಲಸ, ಅಡುಗೆಮನೆ, ಲಾಂಡ್ರಿ ಮತ್ತು ಭದ್ರತೆ ಸಹಿತ ಪ್ರತೀ ವಿಭಾಗಕ್ಕೆ ಸುರಕ್ಷೆ ಮತ್ತು ನೈರ್ಮಲ್ಯ ನಿಯಮಗಳನ್ನು ವಿಧಿಸಲಾಗಿದೆ. ಇವೆಲ್ಲವುಗಳಿಗೆ ಒಗ್ಗಿಕೊಂಡು ಹೊಟೇಲ್ ಕಾರ್ಮಿಕರು ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಇದೆ. ಸಿಬಂದಿ ಧರಿಸಬೇಕಾದ ರಕ್ಷಣಾತ್ಮ ಉಡುಗೆ-ತೊಡುಗೆಯಲ್ಲದೆ ಹೋಟೆಲ್ ಪ್ರವೇಶಿಸುವವರೆಲ್ಲರೂ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಗಾಗಬೇಕಿದೆ. ಇದು ಕಾರ್ಮಿಕರಿಗೆ ಸೋಂಕು ಹರಡುವ ಭೀತಿಯನ್ನು ದೂರಗೊಳಿಸಿದಂತಾಗಿದೆ
ಚಾಲನೆಗೊಳ್ಳುತ್ತಿವೆ ಹೊಟೇಲ್-ರೆಸ್ಟೋರೆಂಟ್ : ಪ್ರಸ್ತುತ ಅನೇಕ ಹೊಟೇಲ್‌ಗಳು ತೆರೆಯುತ್ತಿರುವುದರಿಂದ ಆರು ತಿಂಗಳು ದುಡಿಮೆ ಇಲ್ಲದೆ ಇದ್ದ ಹೊಟೇಲ್, ಕ್ಯಾಂಟಿನ್ ಗಳ ಕಾರ್ಮಿಕರು ಮತ್ತೆ ನಿಧಾನವಾಗಿ ನಗರ-ಉಪನಗರಗಳಿಗೆ ಬರಲಾರಂಭಿಸಿದ್ದಾರೆ. ಕೆಲವು ಕಾರ್ಮಿಕರಿಗೆ ಹೊಟೇಲ್ ಮಾಲಕರು ಸ್ವತಃ ಟಿಕೆಟ್ ಮತ್ತು ಪ್ರಮಾಣದ ವೆಚ್ಚ ಭರಿಸಿ ಬರಮಾಡಿಕೊಳ್ಳುತ್ತಿದ್ದಾರೆ. ಕೋವಿಡ್ ಭೀತಿ ಇದ್ದರೂ ಮೊದಲಿನಂತೆ ಗ್ರಾಹಕರು ಬರುತ್ತಾರೆಯೇ, ರೈಲು ಸೇವೆಗಳಿಲ್ಲದೆ ಕೆಲಸಕ್ಕೆ ತಲುಪುವುದು ಹೇಗೆ ಎನ್ನುವ ಅನೇಕ ಪ್ರಶ್ನೆಗಳು ಕಾರ್ಮಿಕರದ್ದು. ಹೊಟೇಲ್, ರೆಸ್ಟೋರೆಂಟ್‌ಗಳು ಸ್ಥಳೀಯ ಅತಿಥಿಗಳಿಗೆ ಮಾತ್ರ ಸೇವೆ ಒದಗಿಸುತ್ತಿವೆ.
ಮತ್ತೆ ಬದುಕು ಕಟ್ಟಿಕೊಳ್ಳುತ್ತೇವೆ : ಈಗ ಮತ್ತೆ ಕೆಲಸ ಪ್ರಾರಂಭವಾಗುತ್ತಿವೆ. ಆದರೂ ಮೊದಲಿನಂತೆ ಗ್ರಾಹಕರು ಬರುವುದು ಕಷ್ಟ. ಆರು ತಿಂಗಳು ಕೆಲಸವಿಲ್ಲದೆ ಇದ್ದಿದ್ದರಿಂದ ಸಮಸ್ಯೆಗಳಾಗಿದ್ದವು. ಸರಕಾರದ ನಿಯಮ ಪಾಲಿಸಲು ಮಾಲಕರು ಸೂಚಿಸಿದ್ದಾರೆ. ಅದರಂತೆ ನಾವು ಪೂರ್ಣ ಕಾಳಜಿ ವಹಿಸುತ್ತೇವೆ. ಎಲ್ಲ ದಿನ ಒಂದೇ ರೀತಿಯಲ್ಲಿ ಇರಲು ಸಾಧ್ಯವಿಲ್ಲ. ಮತ್ತೆ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತೇವೆ
.-ಭಾಸ್ಕರ್ ಪೂಜಾರಿ, ಕ್ಯಾಪ್ಟನ್, ಅಂಧೇರಿ ರಿಕ್ರಿಯೇಷನ್ ಕ್ಲಬ್.
ಕೆಲಸ ಆರಂಭವಾಗಿದೆ; ದೂರ ಪ್ರಯಾಣಕ್ಕೆ ಸಮಸ್ಯೆ : ಕ್ಯಾಂಟೀನ್ ಪ್ರಾರಂಭಿಸಲಾಗಿದೆ. ಆದರೂ ಮೊದಲಿನಂತೆ ಗ್ರಾಹಕರಿಲ್ಲ. ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದ ನಮಗೆ ಮತ್ತೆ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ. ರೈಲು ಸೇವೆ ಇಲ್ಲದ ಕಾರಣ ದೂರ ಪ್ರಯಾಣಕ್ಕೆ ಸಮಸ್ಯೆಯಾಗುತ್ತಿದೆ. ಹೆಚ್ಚಿನ ಸಮಯ ಬಸ್ಸಿನಲ್ಲಿ ಪ್ರಯಾಣಕ್ಕೆ ಹೋಗುವುದರಿಂದ ಸಮಯಕ್ಕೆ ಬಂದು ತಲುಪುವುದು ಕಷ್ಟ.
-ಸಚಿನ್ ಚಂದನ್, ಗೌವೇಲ್ ಮಾಲ್ ಕ್ಯಾಂಟೀನ್ ಸಿಎಸ್‌ಟಿ
ರೈಲು ಪ್ರಯಾಣದ ಸೌಲಭ್ಯವಿಲ : ಹೊಟೇಲ್, ಕ್ಯಾಂಟಿನ್ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ರೈಲು ಪ್ರಯಾಣದ ಸೌಲಭ್ಯವಿಲ್ಲ. ಆದ್ದರಿಂದ ಅಲ್ಲಿ ಕೆಲಸಕ್ಕೆ ಹೋಗುವುದು ಕಷ್ಟ. ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ ಇದೆ. ಲೋಕಲ್ ರೈಲುಗಳು ಪ್ರಾರಂಭವಾಗುವವರೆಗೆ ಮನೆಯ ಹತ್ತಿರದಲ್ಲೇ ಉಪಾಹಾರ ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿದ್ದೇವೆ. ವ್ಯಾಪಾರ ಕಡಿಮೆಯಿದ್ದರೂ ಅದನ್ನು ಕೈ ಬಿಡುವ ಸ್ಥಿತಿಯಲ್ಲಿಲ್ಲ.
-ಲಕ್ಷ್ಮಣ್ ಮೊಗವೀರ, ಭಾಯಂದರ್, ಕ್ಯಾಂಟೀನ್ ಕಾರ್ಮಿಕರು
ಜವಾಬ್ದಾರಿಯಿಂದ ಕಾರ್ಯನಿರ್ವಹಣೆ : ಹೊಟೇಲ್‌ಗಳಲ್ಲಿ ಶೇ. 50ರಷ್ಟು ಗ್ರಾಹಕರನ್ನು ಸೇರಿಸಲು ಅನುಮತಿ ಇರುವುದರಿಂದ ನಿಯಮದ ಪಾಲನೆ ಮಾಡುತ್ತೇವೆ. ಗ್ರಾಹಕರನ್ನು ಹೊಂದಿಸುವುದು ಕಷ್ಟವಾಗಬಹುದು. ಆದರೆ ಪೂರ್ಣ ಕಾಳಜಿ ವಹಿಸಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತೇವೆ.
-ದೊರೆರಾಜ್ ರೈ, ಮೀರಾರೋಡ್, ಹೊಟೇಲ್ ಕಾರ್ಮಿಕರು.
-ಗಣಪತಿ ಮೊಗವೀರ