ವಿಜಯಪುರ: ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳ ಸಿರಿಯನ್ನು ಮಡಿಲಲ್ಲಿ ಇರಿಸಿಕೊಂಡು ಮೆರೆಯುತ್ತಿರುವ ವಿಜಯಪುರ ಜಿಲ್ಲೆಯ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳಿಲ್ಲದಂತಾಗಿದೆ. ಸರ್ಕಾರದಿಂದ ಕೋಟಿ ಕೋಟಿ ರೂ. ಸಬ್ಸಿಡಿ ಪಡೆಯುವ ಹೊಟೇಲ್ಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಮನ ಬಂದಂತೆ ಬಾಡಿಗೆ ಪಡೆಯುವುದು ಸೇರಿದಂತೆ ಗುಮ್ಮಟ ನಗರಿಯಲ್ಲಿ ಪ್ರವಾಸಿಗ ನರಳುವಂತಾಗಿದೆ.
ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಹೊಟೇಲ್ ಉದ್ಯಮಕ್ಕೆ ಭಾರಿ ಧನ ಸಹಾಯ ಹಾಗೂ ರಿಯಾಯ್ತಿ ನೀಡುತ್ತವೆ. ಹೊಟೇಲ್ ನಿರ್ಮಾಣಕ್ಕೆ ಮುಂದಾಗುವ ಉದ್ಯಮಿಗೆ ಗ್ರಾಮೀಣ ಭಾಗದಲ್ಲಿ ಶೇ. 35 ರಿಯಾಯ್ತಿ ನೀಡಿದರೆ, ನಗರ ಪ್ರದೇಶದಲ್ಲಿ ಶೇ. 40 ರಿಯಾಯ್ತಿ ದೊರೆಯುತ್ತದೆ. ಪ್ರವಾಸಿಗರಿಗೆ ಸೂಕ್ತ ವಸತಿ-ಉಪಾಹಾರ-ಊಟ ಸಹಿತ ಅತ್ಯುತ್ತಮ ಸೌಲಭ್ಯ ಕಲ್ಪಿಸುವ ಷರತ್ತಿಗೆ ಒಪ್ಪಿಕೊಂಡು ಸರ್ಕಾರದಿಂದ ಕೋಟಿ ಕೋಟಿ ರೂ. ರಿಯಾಯ್ತಿ ಪಡೆದಿರುವ ಸುಮಾರು 35ಕ್ಕೂ ಹೆಚ್ಚು ಹೊಟೇಲ್ಗಳು ನಗರದಲ್ಲಿವೆ. ಸರ್ಕಾರದ ರಿಯಾಯ್ತಿ ಪಡೆದಿರುವ ಬಹುತೇಕ ಹೊಟೇಲ್ಗಳ ಮಾಲೀಕರು ರೂಂ ಬಾಡಿಗೆ ಪಡೆಯುವ ಪ್ರವಾಸಿಗರಿಂದ ಮನ ಬಂದಂತೆ ಬಾಡಿಗೆ ಪಡೆಯುತ್ತಿದ್ದಾರೆ. ಅದರಲ್ಲೂ ಆನ್ ಲೈನ್ ಮೂಲಕ ರೂಂ ಬುಕ್ ಮಾಡುವ ದೇಶ-ವಿದೇಶಿ ಪ್ರವಾಸಿಗರಿಂದ ಸಾವಿರಾರು ರೂ. ಬಾಡಿಗೆ ಪಡೆದರೂ ಅಗತ್ಯ ಮೂಲಭೂತ ಸೌಲಭ್ಯ ಮಾತ್ರ ನೀಡುವುದಿಲ್ಲ. ಇದರಿಂದಾಗಿಯೇ ಹಂಪಿ, ಬಾದಾಮಿ ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರು ಐತಿಹಾಸಿಕ ವಿಜಯಪುರ ಸ್ಮಾರಕಗಳ ವೀಕ್ಷಣೆಗೆ ಆಸಕ್ತಿ ತೋರುತ್ತಿಲ್ಲ ಎಂಬ ದೂರುಗಳಿವೆ.
ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿಗರ ಅನುಕೂಲಕ್ಕೆ ಹೊಟೇಲ್-ಲಾಡ್ಜಿಂಗ್ ಸೌಲಭ್ಯ ಕಲ್ಪಿಸುವುದಕ್ಕಾಗಿ ಕೋಟಿ ಕೋಟಿ ರೂ. ರಿಯಾಯ್ತಿ ಪಡೆಯುವ ಉದ್ಯಮಿಗಳು, ನಂತರ ಅದನ್ನು ಬೇರೆಯವರಿಗೆ ಪರಭಾರೆ ಮಾಡುವ, ಇಲ್ಲವೇ ನಿರ್ವಹಣೆ ಹೆಸರಿನಲ್ಲಿ ಅನಧಿಕೃತವಾಗಿ ಬೇರೆಯವರಿಗೆ ಹೊಣೆ ನೀಡುವ ಕೆಲಸವೂ ಜಿಲ್ಲೆಯಲ್ಲಿ ನಡೆಯುತ್ತಿದೆ. ಕೋಟಿ ಕೋಟಿ ರೂ. ವಹಿವಾಟಿನ ಈ ಉದ್ಯಮದಲ್ಲಿ ಸರ್ಕಾರದಿಂದ ಸಿಗುವ ಆರ್ಥಿಕ ಸಬ್ಸಿಡಿ ಹಾಗೂ ಸೌಲಭ್ಯಗಳಿಗಾಗಿಯೇ ರಾಜಕೀಯ ನಾಯಕರು ತಮ್ಮ ಬಂಧುಗಳ ಹೆಸರಿನಲ್ಲಿ ಆರ್ಥಿಕ ರಿಯಾಯ್ತಿ ಪಡೆದಿದ್ದಾರೆ. ಆದರೆ ಸರ್ಕಾರದ ಸೌಲಭ್ಯ ಪಡೆಯುವಾಗ ಒಂದು ಹೆಸರು ನೀಡಿ, ನಂತರ ಬೇರೊಬ್ಬರಿಗೆ ಮತ್ತೂಂದು ಹೆಸರಿನಲ್ಲಿ ಹೊಟೇಲ್ ಉದ್ಯಮ ನಡೆಸಲು ನೀಡಿರುವ ನಿದರ್ಶನಗಳು ಜಿಲ್ಲೆಯಲ್ಲಿ ಸಾಮಾನ್ಯ ಎನಿಸಿದೆ.
ಇನ್ನು ಜಿಲ್ಲೆಯಲ್ಲಿರುವ ಬಹುತೇಕ ಹೊಟೇಲ್ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಹೊಟೇಲ್ ಸುತ್ತಮುತ್ತಲಿನ ಸಾರ್ವಜನಿಕ ರಸ್ತೆಗಳಲ್ಲೇ ಪ್ರವಾಸಿಗರು ಮನ ಬಂದಂತೆ ವಾಹನಗಳ ನಿಲುಗಡೆ ಮಾಡುತ್ತಾರೆ. ಹೆಸರಾಂತ ಹೊಟೇಲ್ಗಳಲ್ಲೇ ಪ್ರವಾಸಿಗರ-ಗ್ರಾಹಕರ ವಾಹನಗಳ ನಿಲುಗಡೆಗೆ ಮೀಸಲಿಟ್ಟ ಪಾರ್ಕಿಂಗ್ ಸ್ಥಳವೇ ಮಾಯವಾಗಿದೆ. ಉದ್ಯಮಿಗಳ ದುರಾಸೆಯಿಂದ ಪಾರ್ಕಿಂಗ್ ಸ್ಥಳಗಳು ಹೊಟೇಲ್ ವಿಸ್ತರಣೆಗೆ ಬಳಸಿಕೊಂಡಿವೆ. ಕಾರಣ ಹೊಟೇಲ್ಗಳಿಗೆ ಬರುವ ಪ್ರವಾಸಿಗರ-ಗ್ರಾಹಕರ ವಾಹನಗಳು ರಸ್ತೆಗಳನ್ನು ಹಾಗೂ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿವೆ. ಸ್ಥಳೀಯರಿಗೆ ಇದರಿಂದ ಸಮಸ್ಯೆಯಾದರೂ ಯಾರೊಬ್ಬರೂ ಈ ಕುರಿತು ಚಕಾರ ಎತ್ತುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಯ ರಿಯಾಯ್ತಿ ಸೌಲಭ್ಯ ಹೊಟೇಲ್ ನಿರ್ಮಾಣದ ಕುರಿತು ಅರ್ಜಿ ಸಲ್ಲಿಕೆಯಿಂದ ಅನುದಾನ ಬಿಡುಗಡೆ ಹಂತದವರೆಗೆ ಇಡಿ ಪ್ರಕ್ರಿಯೆ ಪ್ರವಾ ಸೋದ್ಯಮ ಇಲಾಖೆಯ ಬೆಂಗ ಳೂರು ಕಚೇರಿಯಲ್ಲೇ ನಡೆಯುತ್ತದೆ. ಕಾರಣ ಸ್ಥಳೀಯ ಪ್ರವಾಸೋದ್ಯಮ ಕಚೇರಿಯಲ್ಲಿ ಯಾವುದೇ ಮಾಹಿತಿ ಕೇಳಿದರೂ ಎಲ್ಲದಕ್ಕೂ ಮೇಲಧಿಕಾರಿ ಇಲ್ಲ ಎನ್ನುವ ಹಾಗೂ ಕೇಂದ್ರ ಕಚೇರಿಯತ್ತ ಬೆರಳು ತೋರಿಸುವ ಮೂಲಕ ನುಣುಚಿಕೊಳ್ಳುವ ಕೆಲಸ ಮಾಡುತ್ತಾರೆ.
ಅಧಿಕಾರದಲ್ಲಿರುವ ರಾಜಕೀಯ ಪ್ರಭಾವಿಗಳ ಕೃಪೆಯಿಂದಲೇ ನಡೆಯುತ್ತಿರುವ ಈ ರಿಯಾಯ್ತಿ ವಹಿವಾಟಿನ ಹೊಟೇಲ್ ಉದ್ಯಮ ಸಣ್ಣ-ಮಧ್ಯಮ ಬಂಡವಾಳ ಹೂಡಿಕೆದಾದರರಿಂದ ದೂರವಾಗಿದೆ. ದೊಡ್ಡವರ ನೆರಳಿನ ಇಂಥ ಯೋಜನೆಗಳ ವಿಷಯದಲ್ಲಿ ಅಸಕ್ತ ಮಧ್ಯಮ-ಸಾಧಾರಾಣ ಉದ್ಯಮಿಗಳು ಕೈ ಹಾಕಲು ಹಿಂದೇಟು ಹಾಕುತ್ತಾರೆ.
ಪ್ರವಾಸೋಸದ್ಯಮ ಇಲಾಖೆಯಿಂದ ಆರ್ಥಿಕ ಸಹಾಯಧನ ಪಡೆಯುವ ಹೊಟೇಲ್ ಉದ್ಯಮಿ ವಾಸ್ತವಿಕವಾಗಿ ಪ್ರವಾಸಿಗರಿಗೆ ರಿಯಾಯ್ತಿ ಅನುದಾನ ಪಡೆಯುವ ಹಂತದಲ್ಲಿ ನೀಡಿದ ಷರತ್ತಿನಂತೆ ಸೇವೆ ನೀಡುತ್ತಿದ್ದಾನೆಯೇ ಎಂದು ಯಾವುದೇ ಅಧಿಕಾರಿ ಪರಿಶೀಲನೆ ನಡೆಸಿದ ಮಾಹಿತಿ ಇಲ್ಲ.
ಪ್ರವಾಸಿಗರು ಹೊಟೇಲ್ ಉದ್ಯಮಿಗಳ ಕುರಿತು ಮಾಡುವ ದೂರುಗಳ ಕುರಿತು ಹೊಟೇಲ್ ಉದ್ಯಮಿಗಳನ್ನು ಪ್ರಶ್ನಿಸಿದರೆ ಅವರು ಹೇಳುವುದೇ ಬೇರೆ. ಕಳೆದ ಒಂದೂವರೆ ದಶಕದಿಂದ ಅದರಲ್ಲೂ ಮುಂಬೈ ತಾಜ್ ಹೊಟೇಲ್ ದಾಳಿ ಬಳಿಕ ವಿಜಯಪುರ ಜಿಲ್ಲೆಗೆ ಬರುವ ಪ್ರವಾಸಿಗರ ಅದರಲ್ಲೂ, ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಿಂದೆಲ್ಲ ವಿದೇಶಿ ಪ್ರವಾಸಿಗರು ಆನ್‌ಲೈನ್ ಮೂಲಕವೇ ಹತ್ತಾರು ಜನರು ಏಕ ಕಾಲಕ್ಕೆ ನಾಲ್ಕಾರು ಕೋಣೆಗಳನ್ನು ಬುಕ್ ಮಾಡುತ್ತಿದ್ದರು. ಈಗ ನೇರವಾಗಿಯೇ ಹೊಟೇಲ್ಗಳತ್ತ ಪ್ರವಾಸಿಗರು ಬರುತ್ತಿಲ್ಲ. ಜಿಲ್ಲೆಯಲ್ಲಿ ನೀರವಾರಿ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳು ಚಾಲನೆ ಪಡೆದಿರುವ ಕಾರಣ ಗುತ್ತಿಗೆದಾರರು, ಯೋಜನೆಗಳ ವೀಕ್ಷಣೆಗೆ ಬರುವ ಅಧಿಕಾರಿಗಳಿಂದಾಗಿ ಹೊಟೇಲ್ ಉದ್ಯಮ ನಡೆಯುತ್ತಿದೆಯೇ ಹೊರತು ವಿಜಯಪುರ ಪ್ರವಾಸಕ್ಕೆ ದೇಶ-ವಿದೇಶಿ ಪ್ರವಾಸಿಗರಿಂದಲ್ಲ ಎಂದು ಹೊಟೇಲ್ ಉದ್ಯಮ ಅನುಭವಿಸುತ್ತಿರುವ ಮತ್ತೂಂದು ನೋವಿನ ಕಥೆ ತೆರೆದಿಡುತ್ತಾರೆ.
•ಜಿ.ಎಸ್.ಕಮತರ