ಕೊಪ್ಪ: ಶಾಲೆಯಲ್ಲಿ ನೀಡುವ ಬಿಸಿ ಹಾಲು ಕುಡಿದು ಓರ್ವ ಶಿಕ್ಷಕ ಹಾಗೂ 17 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಹರಿಹರಪುರ ಗ್ರಾಮದ ನಿಲುವಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದಿದೆ. ಬಿಸಿಯೂಟ ಅಡುಗೆ ಸಿಬ್ಬಂದಿ ಹಾಲಿಗೆ ಸಕ್ಕರೆ ಬದಲು ಯೂರಿಯಾ ಗೊಬ್ಬರ ಹಾಕಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ.
ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹಾಲು ವಿತರಿಸಲಾಗಿದ್ದು, ದೈಹಿಕ ಶಿಕ್ಷಕ ಮೋಹನ್ ಗೌಡ ಹಾಗೂ ವಿದ್ಯಾರ್ಥಿಗಳು ಹಾಲು ಕುಡಿದಿದ್ದಾರೆ. ಕೆಲ ನಿಮಿಷಗಳಲ್ಲೇ ಅಸ್ವಸ್ಥಗೊಂಡು ಎಲ್ಲರೂ ವಾಂತಿ ಮಾಡಿಕೊಳ್ಳಲಾರಂಭಿಸಿದ್ದಾರೆ. ತಕ್ಷಣ ವಿದ್ಯಾರ್ಥಿಗಳನ್ನು ಹರಿಹರಪುರ ಹಾಗೂ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಕ್ಕರೆ ಬದಲು ಯೂರಿಯಾ: ಸರಕಾರದ ಕ್ಷೀರಭಾಗ್ಯ ಯೋಜನೆಯಡಿ ಶಾಲೆಯಲ್ಲಿ ಹಾಲು ನೀಡಲಾಗುತ್ತಿದ್ದು, ಎಂದಿನಂತೆ ಶನಿವಾರ ಸಹ ಬಿಸಿಯೂಟದ ಸಿಬ್ಬಂದಿ ಹಾಲು ವಿತರಿಸಿದ್ದಾರೆ. ಆದರೆ ಹಾಲು ಕಾಯಿಸುವ ಸಂದರ್ಭದಲ್ಲಿ ಆದ ಯಡವಟ್ಟಿನಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಹಾಲಿಗೆ ಸಕ್ಕರೆ ಹಾಕುವ ಬದಲು ಯೂರಿಯಾ ಗೊಬ್ಬರ ಮಿಶ್ರಣ ಮಾಡಿದ್ದು, ಅಚಾತುರ್ಯದಿಂದ ಹಿಗಾಗಿದೆಯೋ ಅಥವಾ ಇನ್ಯಾವುದೇ ಕಾರಣಕ್ಕೆ ಹೀಗೆ ಮಾಡಲಾಗಿದೆಯೇ ಎಂಬುದು ತಿಳಿಯಬೇಕಿದೆ. ಅಲ್ಲದೆ ಶಾಲೆಗೆ ಯೂರಿಯಾ ಬಂದಿದ್ದು ಹೇಗೆ? ಇದನ್ನು ಯಾಕಾಗಿ ತರಲಾಗಿತ್ತು? ಎಂಬುದೆಲ್ಲ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ನಾಲ್ವರ ವಿರುದ್ಧ ದೂರು: ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಗಣಪತಿ ಹರಿಹರಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಾಖಲಾಗಿದ್ದು, ಘಟನೆಗೆ ಸಂಬಂಧಿಸಿ ಶಾಲಾ ಮುಖ್ಯೋಪಾಧ್ಯಾಯ ಅಶೋಕ್ ಬಿಸಿಯೂಟ ಅಡುಗೆ ತಯಾರಕರಾದ ಯಶೋದಾ, ಶಾರದಾ ಮತ್ತು ಗುಲಾಬಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆಸ್ಪತ್ರೆಗೆ ಶಾಸಕ ಟಿ.ಡಿ. ರಾಜೇಗೌಡ, ಮಾಜಿ ಶಾಸಕ ಡಿ.ಎನ್. ಜೀವರಾಜ್, ಜಿ.ಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿ.ಪಂ ಸದಸ್ಯ ಎಸ್.ಎನ್ ರಾಮಸ್ವಾಮಿ, ತಾ.ಪಂ.ಸದಸ್ಯ ಪ್ರವೀಣ ಕುಮಾರ್, ಬಿಇಒ ಗಣಪತಿ, ತಹಶೀಲ್ದಾರ್ ತನುಜಾ ಸವದತ್ತಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.