ಮೈಸೂರು ವಿವಿ ಹೇಗೆ ಪ್ರಸಿದ್ಧಿಯೋ, ಇಲ್ಲಿನ ಕ್ಯಾಂಟೀನ್ ಕೂಡಾ. ಈ ಕಟ್ಟಡ ತನ್ನ ಗುಂಡಗಿನ ಆಕಾರದಿಂದಲೋ ಏನೋ ಯೂನಿವರ್ಸಿಟಿ ಕ್ಯಾಂಟೀನ್‌ಗೆ “ರೌಂಡ್ ಕ್ಯಾಂಟೀನ್’ ಎಂಬ ನಾಮಧೇಯ. ರೌಂಡ್ ಕ್ಯಾಂಟೀನ್‌ನ ದೋಸೆ ಅಂದ್ರೆ ಮೈಸೂರಿನ ಅನೇಕರ ಬಾಯಿಂದ ನೀರೂರುತ್ತೆ…
ಇದ್ದ ಸ್ಥಳದಲ್ಲೇ ಯಾರಿಗೂ ಜ್ಞಾನೋದಯ ಆಗುವುದಿಲ್ಲ. ಲುಂಬಿಣಿಯಲ್ಲಿ ಹುಟ್ಟಿದ ಬುದ್ಧ, ಜ್ಞಾನೋದಯಕ್ಕಾಗಿ ಗಯಾಕ್ಕೆ ಬಂದಹಾಗೆ, ಕಾಲೇಜು ವಿದ್ಯಾರ್ಥಿಗಳ ನಮಗೂ ಅಂಥದ್ದೇ ಅವಸ್ಥೆ ಕಣ್ರೀ. ಆಗೆಲ್ಲ ನಾವು ಕ್ಲಾಸ್‌ರೂಮ್ ತೊರೆದು ಓಡುವುದು ಕ್ಯಾಂಟೀನ್‌ಗೆ. ಅದೇನೋ ಗೊತ್ತಿಲ್ಲ, ಆ ಬೆಚ್ಚಗಿನ ಕಾಫಿಯ ಮುಂದೆ ಕುಳಿತರೆ, ತಲೆಯೊಳಗೆ ಐನ್‌ಸ್ಟಿàನ್, ವಿಶ್ವೇಶ್ವರಯ್ಯ ಕೈಕೈ ಹಿಡಿದು ಓಡಾಡಿದ ಹಾಗೆ, ಏನೋ ಹೊಸತನ್ನು ಚರ್ಚಿಸುತ್ತಿರುವ ಹಾಗೆ ಫೀಲ್ ಹುಟ್ಟುತ್ತದೆ. ಕ್ಲಾಸಿನ ಕೋಣೆಯಲ್ಲಿ ಮಂಡೆಬಿಸಿ ಮಾಡಿದ್ದ ಫಾರ್ಮುಲಾ, ಪ್ರಶ್ನೆಗಳಿಗೆಲ್ಲ ಕ್ಯಾಂಟೀನ್‌ನಲ್ಲಿ ಥಟ್ಟನೆ ಉತ್ತರ ಹೊಳೆದದ್ದೂ ಇದೆ.
ನಮ್ಮ ಮೈಸೂರು ವಿವಿಯ ಕ್ಯಾಂಟೀನ್, ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಹೊರಗಿನವರಿಗೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮೈಸೂರಿನ ಜನ ಮೊದಲೇ ರುಚಿರುಚಿಯಾಗಿ ಉಣ್ಣಲು ಒಂದು ಕೈ ಮೇಲೆ. ಮೈಸೂರು ಪಾಕ್, ಮೈಸೂರು ಮಸಾಲೆ ದೋಸೆ, ಮೈಸೂರು ಸ್ಪೆಷಲ್ ಚುರುಮುರಿ, ಕೊಬ್ಬರಿ ಮಿಠಾಯಿ, ಒಬ್ಬಟ್ಟು, ಮೊಸರನ್ನ, ಬಿಸಿಬೇಳೆ ಬಾತ್, ರೈಸ್‌ಬಾತ್, ಕಾಫಿ… ಹೀಗೆ ಇನ್ನೂ ಹಲವು ತಿನಿಸು- ಪೇಯಗಳಿಗೆ ಖ್ಯಾತವಾದ ಮೈಸೂರಿನಲ್ಲಿ ಭಕ್ಷಗಳನ್ನು ಸವಿಯುವುದೇ ಒಂದು ವಿಶೇಷ ಅನುಭವ. ಆ ಎಲ್ಲ ಅನುಭವವನ್ನೂ ನಮ್ಮೊಳಗೆ ಕಟ್ಟಿಕೊಟ್ಟಿದ್ದು, ಈ ಕ್ಯಾಂಟೀನ್.
ಮೈಸೂರು ವಿವಿ ಹೇಗೆ ಪ್ರಸಿದ್ಧಿಯೋ, ಇಲ್ಲಿನ ಕ್ಯಾಂಟೀನ್ ಕೂಡಾ. ಈ ಕಟ್ಟಡ ತನ್ನ ಗುಂಡಗಿನ ಆಕಾರದಿಂದಲೋ ಏನೋ ಯೂನಿವರ್ಸಿಟಿ ಕ್ಯಾಂಟೀನ್‌ಗೆ “ರೌಂಡ್ ಕ್ಯಾಂಟೀನ್’ ಎಂಬ ನಾಮಧೇಯ. ರೌಂಡ್ ಕ್ಯಾಂಟೀನ್‌ನ ದೋಸೆ ಅಂದ್ರೆ ಮೈಸೂರಿನ ಅನೇಕರ ಬಾಯಿಂದ ನೀರೂರುತ್ತೆ. ದೋಸೆಯೇನು, ಇಲ್ಲಿನ ಬೇರೆ ಖಾದ್ಯಗಳ ಗಮ್ಮತ್ತೇ ಬೇರೆ. ಮೈಸೂರು ವಿವಿ ವಿದ್ಯಾರ್ಥಿಗಳು ಮಾತ್ರವಲ್ಲ, ಹೊರಗಿನ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು ಬಂದು ಮೆನು ಬೋರ್ಡ್ ಮುಂದೆ ಹೊತ್ತಾನುಗಟ್ಟಲೆ ನಿಂತು, ಏನು ಆರ್ಡರ್ ಮಾಡೋಣವೆಂದು “ಹೊಂಚು’ ಹಾಕುತ್ತಿರುತ್ತಾರೆ. ರುಚಿಯಲ್ಲಾಗಲೀ, ಗುಣಮಟ್ಟದಲ್ಲಾಗಲೀ ರಾಜಿ ಮಾಡಿಕೊಳ್ಳದೇ ಪ್ರತಿನಿತ್ಯ ಹಳೇ- ಹೊಸ ಮುಖಗಳನ್ನು ನೋಡುತ್ತಾ ಬಂದಿರುವ ರೌಂಡ್ ಕ್ಯಾಂಟೀನ್ ನಮ್ಮೆಲ್ಲರ ಫೇವರಿಟ್ ಅಡ್ಡಾ!
ಅದೆಷ್ಟೇ ರಶ್Ï ಇರಲಿ, “ನಮ್ಮ ವಿವಿ, ನಮ್ಮ ಕ್ಯಾಂಟೀನ್’ ಎಂಬ ಹಕ್ಕು ನಮ್ಮೊಳಗಿಂದ ನುಗ್ಗಿ ಬಂದು, ಇಲ್ಲಿನ ಕಾಫಿ ಟೇಬಲ್ಲಿನ ಮುಂದೆ ನಿಲ್ಲಿಸುತ್ತದೆ. ನಮ್ಮ ಎಂ.ಟೆಕ್ ಗ್ಯಾಂಗ್ ಗಂಟೆಗಟ್ಟಲೆ ಹರಟೆ ಹೊಡೆಯೋದು ಕೂಡ ಇಲ್ಲಿಯೇ. ಮಾತು, ಕತೆ, ಹರಟೆ, ನಗು, ಅಳು, ಗಾಸಿಪ್, ಪರದೂಷಣೆ… ಎಲ್ಲದಕ್ಕೂ ಸಾಕ್ಷಿ, ಇಲ್ಲಿನ ಗಾಜಿನ ಕಾಫಿ ಲೋಟಗಳು. ಬೆಳ್‌ಬೆಳಗ್ಗೆಯೇ ಒಂದು ಕಾಫಿ ಆರ್ಡರ್ ಮಾಡಿ, ಅಲ್ಲೇ ಮರಗಳ ಕೆಳಗಿನ ಸೀಟು ಹಿಡಿದು ಕುಳಿತು ಕಾಲೇಜು ಕೆಲಸಗಳನ್ನು ಶುರುಹಚ್ಚಿಕೊಂಡರೆ, ಮಧ್ಯಾಹ್ನ ಮೊಸರನ್ನ, ಬಿಸಿಬೇಳೆ ಬಾತ್ ಮಿಕ್ಸ್ ಊಟದೊಂದಿಗೆ ಸಂಪನ್ನಗೊಳ್ಳುತ್ತವೆ. ಆಗಾಗ್ಗೆ ನಡೆಯುವ ಸಣ್ಣಪುಟ್ಟ ಟ್ರೀಟ್‌ಗಳಿಗೂ ಇದೇ ನೆಚ್ಚಿನ ತಾಣ.
ಥರಗುಟ್ಟಿಸುವ ಚಳಿಯಲ್ಲೂ ತರಗತಿಯೊಳಗೆ ಫ್ಯಾನ್ ಬೇಕೇಬೇಕಾದಾಗ, ನಾವೆಲ್ಲ ಕಟ ಕಟನೆ ಹಲ್ಲು ಕಡಿಯುತ್ತಾ ಹೊರಬಂದು, ರೌಂಡ್ ಕ್ಯಾಂಟೀನ್‌ಗೆ ಸವಾರಿ ಮಾಡುತ್ತೇವೆ. ಎಲ್ಲದ್ದಕ್ಕಿಂತ ಇಲ್ಲಿನ ಕಾಫಿ ನಮ್ಮ ಮನಸುಗಳನ್ನು ಹೈಜಾಕ್ ಮಾಡಿದೆ. ಪ್ರತಿ ಬಾರಿಯೂ, ಕಾಫಿ ಮಾಡುವ ಹುಡುಗ ರುಚಿ ಹೆಚ್ಚಿಸಲು ಬೇರೇನನ್ನಾದರೂ ಬೆರೆಸುತ್ತಾನಾ ಅಂತ ಕಣ್ಣನ್ನು ಮುಚ್ಚದೆ, ನೋಡುತ್ತಿರುತ್ತೇವೆ.
– ಶ್ರುತಿ ಶರ್ಮಾ ಎಂ.