ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಾಸಗಿ ಸಹಭಾಗಿತ್ವದಲ್ಲಿ ಹೊಸೂರು -ಲಷ್ಕರ್ ರಸ್ತೆ ಮತ್ತು ತಾವರೆಕೆರೆ ರಸ್ತೆ ಕೂಡುವ ಸ್ಥಳದಲ್ಲಿ ಸುಮಾರು 2.10 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪಾದಚಾರಿ ಮೇಲ್ಸೇತುವೆಯನ್ನು ಗುರುವಾರ ಸಾರ್ವಜನಿಕ ಸಂಚಾರಕ್ಕೆ ಮುಕ್ತ ಗೊಳಿಸಲಾಯಿತು.
ಹೊಸೂರು-ಲಷ್ಕರ್ ರಸ್ತೆ ಹೆಚ್ಚಿನ ಜನದಟ್ಟಣೆಯಿಂದ ಕೂಡಿದ್ದು, ರಸ್ತೆ ದಾಟಲು ಪಾದಚಾರಿಗಳು ಹರಸಾಹಸ ಪಡುತ್ತಿದ್ದರು. ಸಮಸ್ಯೆ ಮನಗಂಡ ಬಿಬಿಎಂಪಿ, ಹೊಸೂರು-ಲಷ್ಕರ್ ರಸ್ತೆ ಮತ್ತು ತಾವರೆಕೆ ರಸ್ತೆ ಕೂಡುವ ಪ್ರದೇಶದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೇಲ್ಸೇತುವೆ ನಿರ್ಮಿಸಿದೆ.
ಪಾದಚಾರಿ ಮೇಲ್ಸೇತುವೆಯು 60 ಮೀ. ಉದ್ದ, 3.50 ಮೀ. ಅಗಲ, 3 ಮೀ. ಎತ್ತರವಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗಾಗಿ ಎರಡು ಲಿಫ್ಟ್ಗಳಿದ್ದು, ಇದರಲ್ಲಿ ಒಂದು ಹದಿನಾರು ಮಂದಿಯನ್ನು ಮತ್ತೂಂದು ಹತ್ತು ಮಂದಿಯನ್ನು ಹೊತ್ತೂಯ್ಯುವ ಸಾಮರ್ಥ ಹೊಂದಿದೆ.
ಪ್ರತಿ ನಿತ್ಯ ಸುಮಾರು ಎರಡು ಸಾವಿರ ಮಂದಿ ಪಾದಚಾರಿ ಮಾರ್ಗವನ್ನು ಬಳಸಿಕೊಳ್ಳುವ ನಿರೀಕ್ಷೆ ಇದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಮೇಯರ್ ಮಂಜುನಾಥ ರೆಡ್ಡಿ ಹಾಗೂ ಪಾಲಿಕೆ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಿಬಿಎಂಪಿಗೆ 48 ಕೋಟಿ ರೂ.: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಬಿಬಿಎಂಪಿಗೆ 48 ಕೋಟಿ ರೂ. ನೀಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಗುರುವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಲ ಮಂಡಳಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.