ದಾವಣಗೆರೆ: ಬಾಕಿ ವೇತನ ಪಾವತಿ, ಕನಿಷ್ಠ ವೇತನ ಕಾಯ್ದೆ ಪ್ರಕಾರ ವೇತನ ನಿಗದಿ, ಪಿಎಫ್ ತುಂಬದ ಗುತ್ತಿಗೆದಾರರ ವಿರುದ್ಧ ಕ್ರಮ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಸತಿ ನಿಲಯ ಕಾರ್ಮಿಕರು ಸೋಮವಾರ ಮೆರವಣಿಗೆ ನಡೆಸಿದರು.
ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಹದಡಿ ರಸ್ತೆ, ಲೋಕಿಕೆರೆ ರಸ್ತೆ ಕೂಡುವ ವೃತ್ತದಿಂದ ಮೆರವಣಿಗೆ ಆರಂಭಿಸಿದ ಕಾರ್ಮಿಕರು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಕೆಗೂ ಮುನ್ನ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ, ನಮ್ಮ ಬೇಡಿಕೆ ಈಡೇರಿಕೆಗೆ ಹಲವಾರುಬಾರಿ ಹೋರಾಟ ಮಾಡಲಾಗಿದೆ.
ಫೆ.13ರಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಮುಚ್ಚಳಿಕೆ ಬರೆದುಕೊಟ್ಟು, ಕನಿಷ್ಠ ವೇತನ ನೀಡಲು ಒಪ್ಪಿದ್ದರು. ಜೊತೆಗೆ ವ್ಯತ್ಯಾಸದ ಹಣ ನೀಡುವ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಅವರು ತಿನಂತೆ ನಡೆದುಕೊಂಡಿಲ್ಲ ಎಂದು ದೂರಿದರು. ವಸತಿ ನಿಲಯಗಳಲ್ಲಿ ಕಾರ್ಮಿಕರು ಅಲ್ಪ ಸಂಬಳಕ್ಕೆ ದುಡಿಯುತ್ತಿದ್ದಾರೆ.
ಇತ್ತಗುತ್ತಿಗೆದಾರರು ಸರ್ಕಾರದಿಂದ ಹೆಚ್ಚಿನ ಹಣ ಪಡೆದು ಶ್ರಮಪಡುವ ಕಾರ್ಮಿಕರಿಗೆ ಬಿಡಿಗಾಸು ನೀಡುತ್ತಿದ್ದಾರೆ. ಸರ್ಕಾರಕ್ಕೆ ಇದು ಗೊತ್ತಿದ್ದರೂ ಮೌನವಾಗಿದೆ ಎಂದು ಅವರು ಆರೋಪಿಸಿದರು.2006ರಿಂದ 2012ರ ವರೆಗೆ ಅನೇಕ ಕಾರ್ಮಿಕರು ಯಾವುದೇ ಸವಲತ್ತು ಪಡೆಯದೆ ಕೆಲಸ ಮಾಡಿಕೊಂಡಿದ್ದಾರೆ.
ಪಿಎಫ್ ವಂತಿಗೆಯನ್ನು ಗುತ್ತಿಗೆದಾರರುಪಾವತಿಸಿಲ್ಲ. ಇಂತಹ ಸ್ಥಿತಿಯಲ್ಲಿ ಕಾರ್ಮಿಕರು ಜೀವನ ಮಾಡುವುದಾದರೂ ಹೇಗೆ? ಇದೀಗ ಸಂಬಳ ನೀಡಿಕೆಯಲ್ಲೂ ವಿಳಂಬವಾಗುತ್ತಿದ್ದು,ಮೂರ್ನಾಲ್ಕು ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತಿದೆ. ಇದನ್ನು ತಕ್ಷಣ ಸರಿಪಡಿಸಬೇಕು.
ನಮ್ಮ ಇತರೆ ಬೇಡಿಕೆಗಳನ್ನೂ ಸಹ ಈಡೇರಿಸಲು ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು.ಜಿಲ್ಲಾ ಕಾರ್ಯದರ್ಶಿ ಸ್ವಾಮಿ ನಿಂಗಪ್ಪ, ಮಂಜುನಾಥ ಕುಕ್ಕವಾಡ, ಯತೀಶ್, ಶಂಕರ್ ನಾಯಕ್, ಗೀತಮ್ಮ, ರಂಗಮ್ಮ, ಚನ್ನಮ್ಮ, ಬಸವರಾಜಪ್ಪ, ಕೆ. ಈಶ್ವರ್, ಅಜ್ಜಪ್ಪ, ಚೌಡಪ್ಪ, ಚಂದ್ರಪ್ಪ, ಮಂಜುನಾಥ ಕರಡಿ ಮೆರವಣಿಗೆ ನೇತೃತ್ವ ವಹಿಸಿದ್ದರು.