Advertisement

ಭರದಿಂದ ಸಾಗಿದೆ ಜೆಸಿ ಆಸ್ಪತ್ರೆ ನವೀಕರಣ

09:32 AM Jun 14, 2019 | Suhan S |

ಅರಸೀಕೆರೆ: ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಯನ್ನು ಸುವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದೆ.

Advertisement

ಮೂರು ನಾಲ್ಕು ತಿಂಗಳ ಒಳಗೆ 50 ಮಂದಿಯ ಹೆಚ್ಚುವರಿ ಹಾಸಿಗೆಯ ವಾರ್ಡು ಹಾಗೂ ಆಸ್ಪತ್ರೆಯ ಚಾವಣಿ ಶೀಟ್‌ಗಳ ಅಳವಡಿಕೆ ಕಾಮಗಾರಿ ಪ್ರಗತಿ ಯಲ್ಲಿದೆ. ನಗರದ ಹೃದಯ ಭಾಗದಲ್ಲಿ ಮೈಸೂರಿನ ಅರಸರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಅವರು ತಮ್ಮ ಆಡಳಿತಾವಧಿಯಲ್ಲಿ ಸ್ಥಾಪಿಸಿದ‌ 50 ಹಾಸಿಗೆ ಸೌಲಭ್ಯದ ಆಸ್ಪತ್ರೆಯನ್ನು ನಂತರ ದಿನಗಳಲ್ಲಿ 100 ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆ ಗೇರಿಸಲಾಗಿತ್ತು.

1992ರಲ್ಲಿ 150 ಹಾಸಿಗೆಯ ಆಸ್ಪತ್ರೆಯನ್ನಾಗಿ ಪರಿ ವರ್ತಿಸಲಾಯಿತಾದರೂ ಅದಕ್ಕೆ ಪೂರಕವಾದ ಯಾವುದೇ ಸೌಲಭ್ಯವನ್ನು ನೀಡದೇ 100ಹಾಸಿಗೆಯ ಆಸ್ಪತ್ರೆಗೆ ದೋರಕಬೇಕಾದ ಸೌಲಭ್ಯಗಳು ಮಾತ್ರ ಸರ್ಕಾರ ನೀಡುತ್ತಿದೆ.

ನೂರಾರು ಜನರಿಗೆ ಚಿಕಿತ್ಸೆ: ಪ್ರತಿನಿತ್ಯ ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಹಾಗೂ ನಗರ ಪ್ರದೇಶಗಳಲ್ಲಿ ರೋಗಿಗಳು ಬಂದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅಲ್ಲದೇ ಒಳರೋಗಿಗಳಾಗಿ ನೂರಕ್ಕೂ ಹೆಚ್ಚಿನ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಯಾಲಿಸಿಸ್‌ ಕೇಂದ್ರದಲ್ಲಿ ಪ್ರತಿದಿನ 9 ಮಂದಿ ರೋಗಿಗಳು ಡಯಾಲಿಸೀಸ್‌ ಚಿಕಿತ್ಸೆಗೆ ಒಳಪಡುತ್ತಿದ್ದಾರೆ. ಆದಕಾರಣ ಇಲ್ಲಿಗೆ ಅಗತ್ಯವಾಗಿ ಬೇಕಾಗುವ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಾರ್ಡು ನಂ.18 ಮತ್ತು 19 ರ ಕಟ್ಟಡದ ಮೇಲ್ಭ್ಬಾಗದಲ್ಲಿ 50 ಮಂದಿ ರೋಗಿಗಳಿಗೆ ಅವಶ್ಯಕವಾದ ವಾರ್ಡುಗಳನ್ನು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಆಸ್ಪತ್ರೆಯ ಮೇಲಂತಸ್ತಿನ ಚಾವಣಿಯನ್ನು ರಿಪೇರಿ ಮಾಡುವ ಜೊತೆಗೆ ಸುಮಾರು 85 ಲಕ್ಷ ರೂ. ವೆಚ್ಚದಲ್ಲಿ ಶೀಟ್‌ಗಳನ್ನು ಅಳವಡಿಸಲಾಗುತ್ತಿದ್ದು, ಆಸ್ಪತ್ರೆಯಲ್ಲಿ ಆಡಳಿತಾತ್ಮಕ ಕಚೇರಿಗಳನ್ನು ಮೇಲಂತಸ್ತಿಗೆ ಸ್ಥಳಾಂತರಿಸುವ ಮೂಲಕ ಒಳರೋಗಿಗಳಿಗೆ ಸೂಕ್ತ ವಾರ್ಡ್‌ಗಳ ವ್ಯವಸ್ಥೆ ಮಾಡಲು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸುವ್ಯವಸ್ಥಿತವಾಗಿ ವಾರ್ಡುಗಳ ನವೀಕರಣ ಮಾಡಲಾಗುತ್ತಿದೆ.

ಆಸ್ಪತ್ರೆಯಲ್ಲಿ ಕೀಲು ಮೂಳೆ ತಜ್ಞ ವೈದ್ಯರು, ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರು, ಫಿಜಿಷಿಯನ್‌, ಸ್ತ್ರೀರೋಗ, ಅರಿವಳಿಕೆ, ಇಎನ್‌ಟಿ, ಮಕ್ಕಳ ತಜ್ಞರು,ದಂತ ವೈದ್ಯರು,ನೇತ್ರ ತಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

ತುರ್ತು ಚಿಕಿತ್ಸಾ ವಾರ್ಡ್‌ಗಳ ನವೀಕರಣ: ರಾಷ್ಟ್ರೀಯ ಹೆದ್ದಾರಿ ಬಿ.ಎಚ್.ರಸ್ತೆಯೂ ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವುದರಿಂದ ಅಪಘಾತ ಸಂದರ್ಭಗಳಲ್ಲಿ ಹೆಚ್ಚಿನ ಗಾಯಾಳುಗಳು ಆಗಮಿಸುವುದರಿಂದ ತುರ್ತು ಚಿಕಿತ್ಸಾ ವಾರ್ಡ್‌, ಶಸ್ತ್ರ ಚಿಕಿತ್ಸೆ ಕೊಠಡಿ ಐಸಿಯು, ಚಿಕಿತ್ಸಾ ವಾರ್ಡ್‌ ನವೀಕರಿಸಲಾಗಿದೆ.

ಶಿಥಿಲಾವಸ್ಥೆಯಲ್ಲಿರುವ ಶವ ಪರೀಕ್ಷಾ ಕೊಠಡಿಯನ್ನು ನೆಲಸಮಗೊಳಿಸಿ ಅದೇ ಜಾಗದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಅತ್ಯಂತ ಸುಸಜ್ಜಿತವಾಗಿ ಶವ ಪರೀಕ್ಷಾ ಕೊಠಡಿ ನಿರ್ಮಿಸಲು ಸರ್ಕಾರ ಚನ್ನರಾಯಪಟ್ಟಣದ ಗುತ್ತಿಗೆದಾರರಿಗೆ ಅನುಮತಿ ನೀಡಲಾಗಿದೆ.

ಇನ್ನು ಮೂರ್ನಾಲ್ಕು ತಿಂಗಳಲ್ಲಿ ಜೆ.ಸಿ.ಆಸ್ಪತ್ರೆ ನವೀಕರಣಗೊಳ್ಳಲಿದ್ದು, ಸುಣ್ಣಬಣ್ಣಗಳಿಂದ ಅಲಂಕಾರಗೊಳ್ಳಲಿದೆ.

● ರಾಮಚಂದ್ರ

Advertisement

Udayavani is now on Telegram. Click here to join our channel and stay updated with the latest news.

Next