Advertisement
“ಏ ಹೇಗ್ರೇ ದಪ್ಪ ಆಗೋದು? ಬಾದಾಮಿ, ಪಿಸ್ತಾ, ಲೀಟರ್‌ಗಟ್ಟಲೆ ಹಾಲು ಎಲ್ಲಾ ಕುಡಿದಾಯ್ತು. ಒಂದು ಗ್ರಾಂ ಕೂಡಾ ಹೆಚ್ಚಾಗಿಲ್ಲ. ಇನ್ನು ನಾಲ್ಕು ದಿನ ಬಿಟ್ರೆ ಆ ಹುಡುಗ ಇಲ್ಲಿಗೆ ಬರ್ತಾನೆ. ಏನು ಮಾಡೋದು?’- ಗೆಳತಿ ರಿತು ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಳು. ವಿಷಯ ಇಷ್ಟೇ. ಫೈನಲ್ ಇಯರ್ ಮುಗಿಸುವ ಹಂತದಲ್ಲಿದ್ದ ಅವಳಿಗೆ ಮದುವೆ ಮಾಡಲು ಹೆತ್ತವರು ತಯಾರಾಗಿದ್ದರು. ಅದಕ್ಕೆ ಸರಿಯಾಗಿ, ಅಮೆರಿಕದಲ್ಲಿದ್ದ ಪರಿಚಿತ ಹುಡುಗನ ಮನೆಯವರು, ತಾವಾಗಿ ಹೆಣ್ಣು ಕೇಳಿದ್ದರು. ಎಲ್ಲವೂ ಹೊಂದಾಣಿಕೆಯಾಗಿ, ಹುಡುಗ ಅಮೆರಿಕದಿಂದ ಬಂದು, ರಿತುವನ್ನು ನೋಡುವುದಷ್ಟೇ ಬಾಕಿ ಇತ್ತು.
Related Articles
Advertisement
ಅಂತೂ ಹುಡುಗ ಮತ್ತು ರಿತುವಿನ ಭೇಟಿ ದೊಡ್ಡ ಹೋಟೆಲ್‌ನಲ್ಲಿ ನಿಗದಿಯಾಗಿತ್ತು. ಸ್ವತಃ ಹುಡುಗನೇ ರಿತುವನ್ನು ಹಾಸ್ಟೆಲ್‌ನಿಂದ ಕರೆದೊಯ್ಯಲು ಬರುವವನಿದ್ದ. ನಮಗೆ ತಡೆಯಲಾರದ ಕುತೂಹಲ. ರಿತು ಬೆಳಗ್ಗೆಯಿಂದಲೇ ಸಿದ್ಧವಾಗುತ್ತಿದ್ದರೆ, ನಾವು ರೂಮಿನ ಕಿಟಕಿಗೆ ಕಣ್ಣು ಕೀಲಿಸಿ ಕುಳಿತಿದ್ದೆವು. ಹೇಳಿದ ಸಮಯಕ್ಕೆ ಸರಿಯಾಗಿ ಹುಡುಗ ಕಾರಿನಲ್ಲಿ ಬಂದು, ಹಾಸ್ಟೆಲ್ ಹೊರಗೆ ಕಾಯುತ್ತಾ ನಿಂತ.ನಮ್ಮ ರಿತು ಹಂಸಗಮನೆಯಾಗಿ ಅವನತ್ತ ಹೊರಟಳು.ನಾವು ಉಸಿರು ಬಿಗಿಹಿಡಿದು ಸಿನಿಮಾ ನೋಡುವವರಂತೆ ಕಾಯುತ್ತಿದ್ದೆವು. ತನ್ನತ್ತ ಬಂದ ರಿತುವನ್ನು ಕಂಡ ಹುಡುಗ ನಸುನಕ್ಕ, ಇವಳೂ ತಲೆ ಎತ್ತಿ ನಕ್ಕು ಮುಂದಡಿಯಿಟ್ಟಳು. ಅಷ್ಟೇ! ಅಗಲ ಪ್ಯಾಂಟಿನ ತುದಿಗೆ ಇವಳ ಚಪ್ಪಲಿ ಸಿಕ್ಕಿ ಧಬ್ ಎಂದು ಮುಗ್ಗರಿಸಿ ನೇರವಾಗಿ ಅವನ ಮೇಲೇ ಬಿದ್ದು, ಅವನನ್ನೂ ಬೀಳಿಸಿಬಿಟ್ಟಳು. ಒಳಗಿನಿಂದ ನಾವೆಲ್ಲರೂ ಓಡಿ ಹೋಗಿ ಇಬ್ಬರನ್ನೂ ಎತ್ತಬೇಕಾಯಿತು. ಹುಡುಗನ ಕೈ ಉಳುಕಿತ್ತು, ರಿತುವಿಗೆ ಅಲ್ಲಲ್ಲಿ ತರಚು ಗಾಯ. ಇಬ್ಬರೂ ಹೊಟೆಲ್‌ಗೆ ಅಲ್ಲ ಹಾಸ್ಪಿಟಲ್‌ಗೆ ಹೋಗಿ ಪಕ್ಕ-ಪಕ್ಕ ಕುಳಿತು ಚಿಕಿತ್ಸೆ ಪಡೆಯಬೇಕಾಯಿತು!
ನೋವಿನಿಂದ ಅಳುತ್ತಿದ್ದ ರಿತುವನ್ನು ಪಾಪ ಹುಡುಗನೇ ಸಂತೈಸಿದನಂತೆ. ಹೀಗೇ ಅಲ್ಲೇ ಪರಸ್ಪರ ಮಾತುಕತೆ ನಡೆದು ಎಲ್ಲವೂ ಸುಖಾಂತ್ಯವಾಯಿತು. ಆದರೆ ಈಗಲೂ ರಿತುವಿನ ಗಂಡ, ಪಟಿಯಾಲಾ ಪ್ಯಾಂಟ್ ಎಂದರೆ ದೂರ ಓಡುತ್ತಾನಂತೆ!
-ಡಾ.ಕೆ.ಎಸ್.ಚೈತ್ರಾ