ಹಗರಿಬೊಮ್ಮನಹಳ್ಳಿ: ಮಹಾರಾಷ್ಟ್ರದ ನಾಗಠಾಣ ನಿರ್ವಾಣಿ ಮಠದ ರುದ್ರಪಶುಪತಿ ಮಹರಾಜ್‌ರ ಕೊಲೆಗಾರರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಮಠಾಧೀಶರ ನೇತೃತ್ವದಲ್ಲಿ ವಿವಿಧ ಸಂಘಟನೆ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಮಾತನಾಡಿ, ರುದ್ರಪಶುಪತಿ ಶಿವಾಚಾರ್ಯ ಮಹಾರಾಜ್‌ರ ಕೊಲೆ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೊಳಪಡಿಸಬೇಕು. ಮಹಾರಾಷ್ಟ್ರದಲ್ಲಿ ಈಗಾಗಲೇ 3 ಸಾಧುಗಳ ಕೊಲೆಯಾಗಿವೆ. ದೇಶದಲ್ಲಿ ಮಠಮಾನ್ಯಗಳಿಗೆ ಭದ್ರತೆ ನೀಡುವಂತಹ ಸ್ಥಿತಿ ನಿರ್ಮಾಣವಾಗಿರುವುದು ದುರಾದೃಷ್ಟಕರವಾಗಿದೆ. ಪ್ರಾಪಂಚಿಕ ಸುಖಭೋಗಗಳನ್ನು ತೊರೆದು ಸಮಾಜದ ಹಿತಕ್ಕಾಗಿ ಅರ್ಪಿಸಿಕೊಂಡ ಸಾಧುಗಳ ಕೊಲೆಯಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಕೊಲೆ ಹಿಂದಿನ ಸತ್ಯ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದರು.
ಉಪನ್ಯಾಸಕ ಜಿ.ಎಂ.ಜಗದೀಶ್ ಮಾತನಾಡಿ, ರುದ್ರಪಶುಪತಿ ಶಿವಾಚಾರ್ಯರ ಕೊಲೆಗಾರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ದೇಶದ ಧಾರ್ಮಿಕ ಸಂಸ್ಕೃತಿ ಮತ್ತು ಪರಂಪರೆ ಹಿರಿಮೆಗೆ ಮಠಾಧೀಶರು ಕಾರಣವಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಸ್ವಾಮೀಜಿಗಳನ್ನು ಕೊಲೆಗೈಯುತ್ತಿ ರುವುದರಿಂದ ಸ್ವಾಮೀಜಿಗಳು ಆತಂಕದಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ರುದ್ರಪಶುಪತಿ ಸ್ವಾಮೀಜಿ ಅತ್ಯಂತ ಲವಲವಿಕೆಯಿಂದ ಸಮಾಜಮುಖೀ ಕೆಲಸದಲ್ಲಿ ತೊಡಗಿಕೊಂಡಿದ್ದರು. ಇವರ ಕೊಲೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮೌನಾಚರಣೆ ನಡೆಸಿ ಅಗಲಿದ ಶ್ರೀಗಳಿಗೆ ಗೌರವ ನಮನ ಸಲ್ಲಿಸಿದರು. ತಹಶೀಲ್ದಾರ್ ಆಶಪ್ಪ ಪೂಜಾರ್‌ಗೆ ಮನವಿ ಸಲ್ಲಿಸಿದರು. ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿ, ಹಾಲ ಸಿದ್ದೇಶ್ವರ ಸ್ವಾಮೀಜಿ, ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಕ್ಕಿ ಶಿವಕುಮಾರ್, ಮಾಜಿ ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಚ್.ಎಂ. ಚಂದ್ರಯ್ಯ, ಗುತ್ತಿಗೆದಾರ ಉಮಾಪತಿ, ಸಂತೋಷ್ ಪೂಜಾರ, ಬಿವಿ ಆರ್ಟ್ಸ್ ನಾಗರಾಜ, ಚಂದ್ರಶೇಖರ, ಡಾ| ಬಿ.ಎಂ.ಡಿ. ಬಸವರಾಜ, ಬಸವನಗೌಡ, ಶ್ರೀಶೈಲ, ಕೊಟ್ರೇಶ್ ಶೆಟ್ಟರ್, ಚಂದ್ರಶೇಖರ, ಶಿವರುದ್ರಪ್ಪ, ನಾಗರಾಜ, ಎಚ್.ನಾಗರಾಜ, ಎಂ.ವೀರೇಶ, ಸಂಚಿ ಶಿವಕುಮಾರ ಇತರರಿದ್ದರು