Advertisement

ಹೊಸಪೇಟೆ: ಸುಡು ಬಿಸಿಲಲ್ಲೂ ಹಂಪಿಗೆ ಪ್ರವಾಸಿಗರ ದಂಡು!

11:30 AM May 24, 2023 | Team Udayavani |

ಹೊಸಪೇಟೆ: ಸುಡು ಬಿಸಿಲು ಲೆಕ್ಕಿಸದೇ ಸಹಸ್ರಾರು ಸಂಖ್ಯೆಯ ಪ್ರವಾಸಿಗರು, ವಿಶ್ವ ಪ್ರಸಿದ್ಧ ಹಂಪಿಗೆ ಭೇಟಿ ನೀಡುತ್ತಿದ್ದು, ಪ್ರಸಿದ್ಧ ಸ್ಮಾರಕಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

Advertisement

ರಾಜ್ಯ ಸೇರಿದಂತೆ ನೆರೆ ಆಂಧ್ರ ಹಾಗೂ ತೆಲಂಗಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಆಗಮಿಸುತ್ತಿದ್ದಾರೆ. ಬೇಸಿಗೆ ರಜೆ ಹಿನ್ನೆಲೆ ಹಾಗೂ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಕೂಡ ಹಂಪಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದ್ವಿಗುಣವಾಗಿದೆ. ಮೇ ತಿಂಗಳ ಅಂತ್ಯದವರೆಗೂ ಪ್ರವಾಸಿಗರ ಆಗಮಿಸುವ ನಿರೀಕ್ಷೆ ಇದೆ.

ಎಲ್ಲೆಲ್ಲಿ ಪ್ರವಾಸಿಗರು: ಹಂಪಿ ವಿರೂಪಾಕ್ಷೇಶ್ವರ ದೇವಾಲಯ, ಸಾಸಿವೆ ಕಾಳು ಗಣಪತಿ, ಕಡಲೆಕಾಳು ಗಣಪತಿ, ಬಡವಿಲಿಂಗ, ಉಗ್ರನರಸಿಂಹ, ಭೂಮಿ ಮಟ್ಟದ ಶಿವಾಲಯ, ಹಜಾರರಾಮ ದೇವಾಲಯ, ಮಹಾನವಮಿ ದಿಬ್ಬ, ಪುಷ್ಕರಣಿ, ರಾಣಿ ಸ್ನಾನ
ಗೃ ಹ, ಕಮಲ ಮಹಲ್‌, ಗಜಶಾಲೆ, ವಿಜಯವಿಠಲ ದೇವಾಲಯ ಹಾಗೂ ಮಾಲ್ಯವಂತ ರಘುನಾಥ ದೇವಾಲಯದಲ್ಲಿ ಹೆಚ್ಚು ಪ್ರವಾಸಿಗರು ಕಂಡು ಬರುತ್ತಿದ್ದಾರೆ.

ಮೂಲಭೂತ ಸೌಲಭ್ಯ ಕೊರತೆ: ಹಂಪಿಗೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಶುದ್ಧ ಕುಡಿಯುವ ನೀರಿಲ್ಲದೇ ಪರದಾಡುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಕೈಯಲ್ಲಿದ್ದ ಬಾಟಲಿ ನೀರು ಕೂಡ ಕ್ಷಣಾರ್ಧದಲ್ಲಿ ಖಾಲಿಯಾಗುತ್ತಿದ್ದು, ಹೈರಾಣವಾಗುತ್ತಿದ್ದಾರೆ.

ಹಂಪಿಯ ಕೆಲ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಆಗೊಮ್ಮೆ, ಹಿಗೊಮ್ಮೆ ಕಾರ್ಯ ನಿರ್ವಹಿಸುತ್ತಿದೆ.

Advertisement

ನೀರಿನ ಘಟಕ: ಉಗ್ರನರಸಿಂಹ, ಭೂಮಿಮಟ್ಟದ ಶಿವಾಲಯ, ಪುರಂದರ ಮಂಟಪ, ಸುಗ್ರೀವ ಗುಹೆ, ಕೋದಂಡರಾಮ ದೇವಾಲಯ, ಗೆಜ್ಜಲ ಮಂಟಪ ಹಾಗೂ ಮಹಾನವಮಿ ದಿಬ್ಬದ ಬಳಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದರೆ, ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ.

ವಸತಿ ವ್ಯವಸ್ಥೆ: ವಿರೂಪಾಕ್ಷನ ದರ್ಶನಕ್ಕಾಗಿ ಆಗಮಿಸುವ ರಾಜ್ಯದ ಯಾತ್ರಾರ್ಥಿಗಳಿಗೆ ಹಂಪಿಯಲ್ಲಿ ವಾಸ್ತವ್ಯ ಹೂಡಲು ವಸತಿ ವ್ಯವಸ್ಥೆ ಇಲ್ಲದಾಗಿದೆ. ಮಕ್ಕಳಿಗೆ ಮುಂಜಿ ಸೇರಿದಂತೆ ಧಾರ್ಮಿಕ ಕಾರ್ಯಗಳನ್ನು ವಿರೂಪಾಕ್ಷನ ಸಮ್ಮುಖದಲ್ಲಿ ನೆರವೇರಿಸುವ ಭಕ್ತರು ವಸತಿ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯ ಕೊರತೆಯಿಂದ ಪರದಾಡುವತಾಗಿದೆ. ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆ, ಹಂಪಿ ವಿಶ್ವ ಪರಂಪರೆ ಪ್ರದೇಶಾಭಿವೃದ್ಧಿ ನಿರ್ವಹಣಾ ಪ್ರಾಧಿಕಾರ ಹಾಗೂ ಹಂಪಿ ಗ್ರಾಮ ಪಂಚಾಯ್ತಿ ಇಷ್ಟೂ ಇಲಾಖೆಗಳು ಹಂಪಿ ಅಭಿವೃದ್ಧಿಗಾಗಿ ಇದ್ದರೂ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳು ಮಾತ್ರ ಮರೀಚಿಕೆಯಾಗಿರುವುದು
ವಿಪಾರ್ಯಸದ ಸಂಗತಿಯಾಗಿದೆ.

ವಿಶ್ವದಲ್ಲಿ ರೋಮ್‌ ದೊಡ್ಡ ಸಾಮ್ರಾಜ್ಯವಾದರೆ, ಹಂಪಿ ಎರಡನೇ ಮಹಾ ಸಾಮ್ರಾಜ್ಯವಾಗಿದೆ. ಹೀಗಾಗಿ ಹಂಪಿ ಸ್ಮಾರಕ ವೀಕ್ಷಣೆ ಮಾಡುವುದು ಎಂದರೆ, ಕಣ್ಣಿಗೆ ಹಬ್ಬ ಎಂದೇಳುಬಹುದು. ಆದರೆ, ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ವಸತಿ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ

ಹಂಪಿಯಲ್ಲಿ ಜುಲೈ ತಿಂಗಳಲ್ಲಿ ಜಿ. 20 ಶೃಂಗಸಭೆ ಆಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆ ಹಾಗೂ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಹಂಪಿಯಲ್ಲಿ ರಸ್ತೆ, ಸ್ವಚ್ಚತೆ ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
*ವೆಂಕಟೇಶ ಟಿ.,
ಜಿಲ್ಲಾಧಿಕಾರಿಗಳು, ವಿಜಯನಗರ

ಹಂಪಿಗೆ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಆಗಮಿಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ.
ಪುರಾತತ್ವ ಇಲಾಖೆ ಹಾಗೂ ಪ್ರಾಧಿಕಾರ ಮೂಲಭೂತ ಸೌಲಭ್ಯಗಳನ್ನು ನೀಗಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು.
*ರಾಜೇಂದ್ರ, ಸ್ಥಳೀಯ

*ಪಿ.ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next