Advertisement

ಹೊಸಪೇಟೆ: ಹಂಪಿಯಲ್ಲಿ ಜಿ-20 ಶೃಂಗಸಭೆಗೆ ಪೂರ್ವಸಿದ್ಧತೆ ; ನಿಯಮ ಮೀರಿ ಕಾಮಗಾರಿ ಆರೋಪ

04:28 PM May 16, 2023 | Team Udayavani |

ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ಜುಲೈ ತಿಂಗಳಲ್ಲಿ ನಡೆಯಲಿರುವ ಜಿ.20 ಶೃಂಗಸಭೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ವಿಜಯನಗರ ಜಿಲ್ಲಾಡಳಿತದ ವತಿಯಿಂದ ಸಿದ್ಧತೆ ಆರಂಭಗೊಂಡಿದೆ. ಇದಕ್ಕಾಗಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಗೆ ಸ್ಥಳೀಯರಿಂದ ವಿರೋಧ ಕೂಡ ವ್ಯಕ್ತವಾಗಿದೆ. ಹಂಪಿಯ ಕೆಲ ಪ್ರದೇಶದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳು ಸ್ಮಾರಕ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡಲಿವೆ ಎಂಬ ಆತಂಕ ಸ್ಥಳೀಯರಲ್ಲಿ ಕಾಡುತ್ತಿದೆ.

Advertisement

ಜಿ.20 ದೇಶಗಳ ಅಧ್ಯಕ್ಷ ಸ್ಥಾನ ಈ ಬಾರಿ ಭಾರತ ಒಲಿದ ಹಿನ್ನೆಲೆಯಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯ ಹಂಪಿಯಲ್ಲಿ ಸಭೆ ನಡೆಸಲು ತೀರ್ಮಾನಿಸಿದೆ. ಎರಡು ತಿಂಗಳ ಹಿಂದೆಯಷ್ಟೇ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉನ್ನತಾ ಧಿಕಾರಿಗಳು ಹಂಪಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಅವರ ಮಾರ್ಗದರ್ಶನದಂತೆ ಅಗತ್ಯ ಸೌಲಭ್ಯಗಳನ್ನು ಸೃಜಿಸುವುದು, ಸ್ಮಾರಕಗಳ ರಕ್ಷಣೆಗೆ ಆದ್ಯತೆಯಾಗಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಸ್ಮಾರಕಗಳಿಗೆ ಧಕ್ಕೆ?: ಜಿ- 20 ಹೆಸರಲ್ಲಿ ಹಂಪಿಯ ವಿವಿಧ ಸ್ಮಾರಕಗಳ ಸುತ್ತಮುತ್ತ ಕಾಂಪೌಂಡ್‌ ನಿರ್ಮಿಸಲಾಗುತ್ತಿದೆ. ಇದರಿಂದ ಪುರಾತನ ಸ್ಮಾರಕಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗುತ್ತದೆ ಎಂದು ಸ್ಥಳೀಯರ ಆಕ್ಷೇಪಿಸುತ್ತಿದ್ದಾರೆ. ಹಂಪಿಯ ಸ್ಮಾರಕಗಳ ಸಂರಕ್ಷಣೆ ಮತ್ತು ಇವುಗಳನ್ನು ಮುಂದಿನ ಪೀಳಿಗೆಗಾಗಿ ಕಾಯ್ದಿಡುವ ವೈಜ್ಞಾನಿಕ ವಿಧಾನಗಳ ಕುರಿತು ಪ್ರಪಂಚದ ಪ್ರಖ್ಯಾತ ಪುರಾತತ್ವ ಶಾಸ್ತ್ರಜ್ಞರು, ಪಾರಂಪರಿಕ ಆರ್ಕಿಟೆಕ್ಟರ್ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಯುನೆಸ್ಕೋ ನೇತ್ರತ್ವದಲ್ಲಿ 1999, 2000 ರಿಂದ 2004ರ ವರೆಗೆ ಪ್ರತೀ ವರ್ಷ ಮತ್ತು 2007 ರಲ್ಲಿ ಯುನೆಸ್ಕೋ ಅಧೀನದಲ್ಲಿರುವ ವರ್ಲ್ಡ್ ಹೆರಿಟೇಜ್‌ ಸೆಂಟರ್‌ಗೆ ವರದಿ ಸಲ್ಲಿಸಿದ್ದಾರೆ. ಆ ಮಾರ್ಗಸೂಚಿಗಳ ಇತಿಮಿತಿಯಲ್ಲೇ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ಆದರೆ, ಬಡವಿ ಲಿಂಗದ ಬಳಿ ಅನಗತ್ಯವಾಗಿ ಕಾಂಪೌಂಡ್‌ ನಿರ್ಮಿಸಲಾಗುತ್ತಿದೆ.

ಇದರಿಂದ ಐತಿಹಾಸಿಕ ಸ್ಮಾರಕಗಳು ವಿರೂಪಗೊಳ್ಳುತ್ತವೆ. ಜೆಸಿಬಿ ಬಳಸಿ ಅಡಿಪಾಯ ತೆಗೆಯಲಾಗಿದೆ. ಸ್ಥಳೀಯ ನಿವಾಸಿಗಳು ಮನೆಯ ದುರಸ್ತಿ, ಮರು ನಿರ್ಮಾಣದ ವೇಳೆ ಯಂತ್ರೋಪಕರಣಗಳನ್ನು ಬಳಸದಂತೆ ಎಚ್ಚರಿಸುವ ಅಧಿಕಾರಿಗಳು, ಇಂದು ತಮ್ಮದೇ ನಿಯಮವನ್ನು ಮೀರಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಪೂರ್ವಸಿದ್ಧತೆ: ಜಿ-20 ಶೃಂಗಸಭೆಗೆ ಆಗಮಿಸುವ ವಿದೇಶಿ ಪ್ರತಿನಿ ಧಿಗಳ ಸ್ವಾಗತಕ್ಕೆ ವಿವಿಧ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿ ಬಡವಿ ಲಿಂಗ ಸುತ್ತಲಿನ ಪ್ರದೇಶದಲ್ಲಿ ಎರಡು ಅಡಿ ಎತ್ತರದ ಗೋಡೆ ಸೇರಿದಂತೆ 6 ಅಡಿ ಎತ್ತರದ ಗ್ರಿಲ್‌ ಅಳವಡಿಸಿ ಕಾಂಪೌಂಡ್‌ ನಿರ್ಮಿಸಲಾಗುತ್ತಿದೆ. ಪ್ರವೇಶ ದ್ವಾರ ನಿರ್ಮಿಸಲಾಗುತ್ತಿದೆ. ಬಡವಿಲಿಂಗ, ವಿಠಲ ಮಂದಿರ, ಗ್ರಾಪಂ ಮುಂಭಾಗದಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ. ವಿಠಲ ದೇವಸ್ಥಾನ ಸೇರಿದಂತೆ ಆಯ್ದ ಕಡೆ ಫುಟ್‌ ಪಾತ್‌
ನಿರ್ಮಿಸುವುದು, ವಾಹನಗಳ ಸುಗಮ ಸಂಚಾರಕ್ಕೆ ವಿವಿಧ ರಸ್ತೆಗಳ ಸುಧಾರಣೆ, ಅದರೊಂದಿಗೆ ಪ್ರವಾಸಿಗರ ಅನುಕೂಲಕ್ಕಾಗಿ ಅಗತ್ಯವಿರುವಲ್ಲಿ ಶುದ್ಧ ಕುಡಿಯುವ ನೀರಿನ ಸೌಕರ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

Advertisement

ಹಂಪಿ ಪರಿಸರದ ಸಂರಕ್ಷಣೆ, ಅಭಿವೃದ್ಧಿ ಮತ್ತು ಉತ್ಖನನ ಕಾರ್ಯಕೈಗೊಳ್ಳಬೇಕಿದೆ. ಯಂತ್ರೋಪಕರಣಗಳನ್ನು ಬಳಕೆ ಮಾಡಿ
ಹಂಪಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಇದನ್ನು ಮೀರಿದರೆ ಹಂಪಿಯನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಿಂದ ಕೈ ಬಿಡುವ ಆತಂಕವಿದೆ.
ಶಿವಕುಮಾರ ಮಾಳಗಿ, ಸ್ಥಳೀಯ ನಿವಾಸಿ

*ಪಿ.ಸತ್ಯನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next