ಹೊಸಪೇಟೆ: ದೋಷಪೂರಿತ ಆಹಾರ ಸೇವನೆಯಿಂದ ಇತ್ತೀಚೆಗಷ್ಟೆ ಆಸ್ಪತ್ರೆಗೆ ದಾಖಲಾಗಿ ಇದೀಗ ಚೇತರಿಸಿಕೊಂಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಸ್ಮಿತಾ ವಸತಿ(ಓಬಿಸಿ)ನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ನಿಲಯ ಪಾಲಕರು ಹಾಗೂ ಅಡುಗೆಯವರನ್ನು ಕೂಡಲೇ ಬದಲಾವಣೆ ಮಾಡಬೇಕು. ವಸತಿ ನಿಲಯದ ಅವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿ ಪತ್ರಿಭಟನೆ ನಡೆಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು ಕುಳಿತರು.
ಕಳಪೆ ಮಟ್ಟದ ಆಹಾರ ಪದಾರ್ಥ ಹಾಗೂ ಕೊಳೆತ ತರಕಾರಿ ಉಪಯೋಗಿಸಿ ಅಡುಗೆ ಮಾಡಲಾಗುತ್ತಿದೆ. ನೀರಿನ ಟ್ಯಾಂಕ್ ಸ್ವಚ್ಛ ಮಾಡದೇ ಅಶುದ್ಧ ನೀರನ್ನು ಅಡುಗೆಗೆ ಬಳಕೆ ಮಾಡುತ್ತಿದೆ. ಇಂತಹ ಆಹಾರ ಸೇವನೆಯಿಂದ ಇತ್ತೀಚೆಗೆ ತ್ರೀವ ಹೊಟ್ಟೆ ನೋವಿನಿಂದ ಬಳಲಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುಂತಾಗಿದೆ ಎಂದು ಅಳಲು ತೋಡಿಕೊಂಡರು.
ಕೂಡಲೇ ಬಿಸಿಎಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಬಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಸುರೇಶ್ ಬಾಬು, ನಿಲಯ ಪಾಲಕರು ಹಾಗೂ ಅಡುಗೆಯವರನ್ನು ಕೂಡಲೇ ಬದಲಾವಣೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ತಾಲೂಕು ವಿಸ್ತರಣಾಧಿಕಾರಿ ಆರ್. ಯರಿಸ್ವಾಮಿ, ನಿಲಯ ಮೇಲ್ವಿಚಾರಕರಾದ ಅಶ್ವಿನಿ ಲಟ್ಟೆ, ಮಹಾಂತೇಶ್, ಗೋವಿಂದಪ್ಪ ಇತರರಿದ್ದರು.
ವಿದ್ಯಾರ್ಥಿಗಳು ಸೇವನೆ ಮಾಡಿದ ಆಹಾರ ಮಾದರಿಯನ್ನು ಲ್ಯಾಬ್‌ಗ ಕಳುಹಿಸಿಕೊಡಲಾಗಿದೆ. ಬಳ್ಳಾರಿಯಿಂದ ಪುಷ್ಪಲತಾ ಎಂಬುವರರನ್ನು ನಿಲಯ ಪಾಲಕರಾಗಿ ನಿಯೋಜಿಸಲಾಗಿದೆ. ವಸತಿ ನಿಲಯದ ವಿದ್ಯಾರ್ಥಿಗಳ ಸಮಿತಿ ರಚಿಸಲಾಗಿದ್ದು. ಕುಂದು-ಕೊರತೆಗಳ ದೂರು ಸಲ್ಲಿಸಬಹುದಾಗಿದೆ.
•
ಸುರೇಶ್ ಬಾಬು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ.