Advertisement

Hosapete: ಕರಡಿ ಕೊರಳಿಗೆ ಕಾಲರ್‌ ಐಡಿ ಕ್ಯಾಮೆರಾ

06:01 PM Nov 08, 2023 | Team Udayavani |

ಹೊಸಪೇಟೆ: ಮಾನವ-ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ ಇಲಾಖೆ, ಕರಡಿಗಳ ಚಲನವಲನ ನಿಗಾವಹಿಸಲು ಕರಡಿಗಳ ಕೊರಳಿಗೆ ಕಾಲರ್‌ ಐಡಿ ಕ್ಯಾಮೆರಾ ಟ್ರಾಪ್‌ ಅಳವಡಿಸಿದೆ. ಮಳೆ ಕೊರತೆಯಿಂದ ಕಾಡಿನಲ್ಲಿ ಆಹಾರ-ನೀರು ಸಿಗದೇ ನಾಡಿನತ್ತ ಧಾವಿಸುತ್ತಿರುವ ಕರಡಿಗಳನ್ನು ಮರಳಿ ಕಾಡಿಗೆ ಕಳಿಸಲು ಇಲಾಖೆ ಈ ಕ್ರಮ ಕೈಗೊಂಡಿದೆ.

Advertisement

ದರೋಜಿ ಕರಡಿಧಾಮದಲ್ಲಿ 5 ಮತ್ತು ಗುಡೇಕೋಟೆ ಕರಡಿಧಾಮದಲ್ಲಿ 5 ಸೇರಿ ಜಿಲ್ಲೆಯಲ್ಲಿ ಒಟ್ಟು 10 ಕರಡಿಗಳಿಗೆ ಕಾಲರ್‌ ಐಡಿ
ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಿದ್ದು, ಈ ಕರಡಿಗಳ ಮೇಲೆ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಕಾಡು ಪ್ರಾಣಿಗಳು ಜನ ಮತ್ತು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವುದು ಆತಂಕ ಮೂಡಿಸಿದೆ. ಹೀಗಾಗಿ ಕರಡಿಗಳ ಚಲನವಲನ ತಿಳಿದು ಅವುಗಳು ಜನವಸತಿ ಪ್ರದೇಶಗಳತ್ತ ಬಂದಾಗ ಮರಳಿ ಕಾಡು ಸೇರಿಸಲು ಈ ಕಾಲರ್‌
ಐಡಿ ಕ್ಯಾಮೆರಾ ಟ್ರ್ಯಾಪ್‌ ಅನುಕೂಲವಾಗಿದೆ.

ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ಹೊಂದಿಕೊಂಡಿರುವ ದರೋಜಿ ಕರಡಿಧಾಮದಲ್ಲಿ ಸುಮಾರು 80ರಿಂದ 120 ಕರಡಿಗಳು ವಾಸಿಸುತ್ತಿವೆ. ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕರಡಿಧಾಮದಲ್ಲಿ ಕರಡಿಗಳಿವೆ. ಈ ಎರಡೂ ಕರಡಿಧಾಮಗಳ ಸುತ್ತಮುತ್ತ ಹೆಚ್ಚಿನ ಗ್ರಾಮಗಳಿವೆ.

ಹಾಗಾಗಿ ಕರಡಿಗಳ ದಾಳಿ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿವೆ. ಕಳೆದ ತಿಂಗಳು ಹರಪನಹಳ್ಳಿಯಲ್ಲಿ ಜೋಡಿ ಕರಡಿಗಳು ರೈತನ ಮೇಲೆ ದಾಳಿ ಮಾಡಿದ್ದವು. ಕೂಡ್ಲಿಗಿಯಲ್ಲಿ ಕೂಡ ಹಲವಾರು ಪ್ರಕರಣಗಳು ವರದಿಯಾಗಿವೆ. ನ.4ರಂದು ಮನೆ ಬಳಿ ಬಂದು ಮಹಿಳೆ ಮೇಲೆ ಕರಡಿ ದಾಳಿ ಮಾಡಿದ ನಂತರ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಇಂಥ ಪ್ರಕರಣಗಳ ಕುರಿತು ಮುನ್ನೆಚ್ಚರಿಕೆ ವಹಿಸಿ ತಡೆಯುವಲ್ಲಿ ಈ ಕ್ಯಾಮೆರಾ ಟ್ರ್ಯಾಪ್‌ ಸಹಕಾರಿಯಾಗಲಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಕಾಲರ್‌ ಐಡಿ ಕ್ಯಾಮೆರಾ ಟ್ರ್ಯಾಪ್‌ ವಿಶೇಷ ಜನವಸತಿ ಪ್ರದೇಶಗಳು, ರೈತರ ಹೊಲಗಳಲ್ಲಿ ಮತ್ತು ಕಾಡು ಬಿಟ್ಟು ಹೊರಗಡೆ ಕಾಣಿಸಿಕೊಳ್ಳುವ ಜತೆಗೆ ಬೋನ್‌ಗಳಲ್ಲಿ ಸೆರೆಯಾದ ಕರಡಿಗಳಿಗೆ ಈ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಲಾಗಿದೆ. ಇದರಲ್ಲಿ ಜಿಪಿಎಸ್‌
ಅಳವಡಿಸಲಾಗಿದ್ದು, ಕರಡಿಗಳ ಸ್ಥಳ ಇರುವ ಮಾಹಿತಿ ಗೊತ್ತಾಗುತ್ತದೆ. ಕ್ಯಾಮೆರಾದಲ್ಲಿ ಕರಡಿಗಳ ಚಲನವಲನ, ವಾಸಸ್ಥಳ, ಅವುಗಳು ಎಷ್ಟು ಕಿಲೋ ಮೀಟರ್‌ ಸಂಚರಿಸಿವೆ, ಎಷ್ಟು ಮರಿಗಳಿಗೆ ಜನ್ಮ ನೀಡಿವೆ ಎಂಬ ಮಾಹಿತಿ ತಿಳಿಯುತ್ತದೆ.

Advertisement

ಈ ಕ್ಯಾಮೆರಾಗಳಿಂದ ಕರಡಿಗಳು ಮನುಷ್ಯರ ಮೇಲೆ ದಾಳಿ ಮಾಡುವುದನ್ನು ಜಮೀನಿನಲ್ಲಿ ಬೆಳೆ ಹಾನಿ ಮಾಡುವ ಸಂಭವಗಳನ್ನು ತಡೆಯಬಹುದು. ಈ ಕರಡಿಗಳು ಕಾಡು ಬಿಟ್ಟು ಜನವಸತಿ ಪ್ರದೇಶಗಳಿಗೆ ಬಂದಾಗ ಜನರಿಗೆ ಯಾವುದೇ ತೊಂದರೆಯಾಗದಂತೆ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಪಟಾಕಿ ಸಿಡಿಸುವುದು ಸೇರಿ ಅಗತ್ಯ ಕ್ರಮ ಕೈಗೊಂಡು ಅವುಗಳನ್ನು ಮರಳಿ ಕಾಡಿನತ್ತ ಓಡಿಸಲು ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಆಂಧ್ರಕ್ಕೆ ಹೆಜ್ಜೆ ಹಾಕಿದ ಕರಡಿ
ಗುಡೇಕೋಟೆ ಕರಡಿಧಾಮದ ಕರಡಿಯೊಂದು ಆಹಾರ ಅರಸಿ ಪಾವಗಡದ ಮೂಲಕ ಆಂಧ್ರಪ್ರದೇಶದ ಪೆನುಕೊಂಡಕ್ಕೆ ಹೋಗಿದೆ. 15 ದಿನದಲ್ಲಿ ಸುಮಾರು 200 ಕಿ.ಮೀ ಸಂಚರಿಸಿರುವ ಕರಡಿಗೆ ಕಾಲರ್‌ ಐಡಿ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಿದ್ದರಿಂದ ಮಾಹಿತಿ ಗೊತ್ತಾಗಿದೆ. ಇದರ ಜತೆಗೆ ದರೋಜಿ ಕರಡಿಧಾಮದಿಂದ ಗಂಡು ಕರಡಿಯೊಂದು ರಾಯಚೂರಿಗೆ ವಲಸೆ ಹೋಗಿತ್ತು. ತೀವ್ರ ಬರದ ಹಿನ್ನೆಲೆಯಲ್ಲಿ ವನ್ಯಜೀವಿಗಳು ಆಹಾರ, ನೀರು ಅರಸಿ ನಾಡಿನತ್ತ ಬರುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇದರ ಜತೆಗೆ ನಾನಾ ಕಡೆಗಳಿಗೆ ವಲಸೆ ಹೋಗಿರುವುದು ಕೂಡ ಈ ಕಾಲರ್‌ ಐಡಿ ಕ್ಯಾಮೆರಾ ಟ್ರಾಪ್‌ನಿಂದ
ಮಾಹಿತಿ ಗೊತ್ತಾಗುತ್ತಿದೆ.

10 ಕರಡಿಗಳ ಚಲನವಲನ ತಿಳಿಯಲು ಕಾಲರ್‌ ಐಡಿ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಲಾಗಿದೆ. ಇದರಿಂದ ಜನವಸತಿ ಪ್ರದೇಶಗಳತ್ತ ಬರುತ್ತಿರುವ ಮಾಹಿತಿ ಗೊತ್ತಾಗುತ್ತಿದೆ. ಇದರಿಂದ ಜನವಸತಿ ಪ್ರದೇಶಗಳಿಗೆ ಬಂದಾಗ ಯಾವುದೇ ಹಾನಿಯಾಗದಂತೆ ಕರಡಿಗಳನ್ನು ಮರಳಿ ಕಾಡಿನತ್ತ ಕಳಿಸಲು ಕ್ರಮ ಕೈಗೊಳ್ಳಲು ಅನುಕೂಲವಾಗುತ್ತಿದೆ.
ಅರ್ಸಲನ್‌,
ಉಪ ಅರಣ್ಯ ಸಂರಕ್ಷಣಾಧಿಕಾರಿ, ವಿಜಯನಗರ

Advertisement

Udayavani is now on Telegram. Click here to join our channel and stay updated with the latest news.

Next