Advertisement
ಬಿಜೆಪಿ ಹಾಗೂ ಎನ್‌ಎಸ್‌ಎಸ್ ಬೆಂಬಲದೊಂದಿಗೆ ನಡೆದ ಅಯ್ಯಪ್ಪ ಜ್ಯೋತಿ ಬೆಳಗುವ ಕಾರ್ಯಕ್ರಮದಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದರು. ಕಾಸರಗೋಡು ನಗರದ ಕರಂದಕ್ಕಾಡ್‌ನ ವೀರ ಹನುಮಾನ್ ಭಜನ ಮಂದಿರ ಪರಿಸರದಲ್ಲಿ ಚಿನ್ಮಯ ಮಿಶನ್‌ನ ವಿವಿಕ್ತಾನಂದ ಸರಸ್ವತಿ ಸ್ವಾಮೀಜೀ ದೀಪ ಪ್ರಜ್ವಲಿಸುವ ಮೂಲಕ ಜ್ಯೋತಿ ಬೆಳಗಲು ಚಾಲನೆ ನೀಡಿದರು. ಸಂಜೆ 6ರಿಂದ 6.30ರ ವರೆಗೆ ರಸ್ತೆಯುದ್ದಕ್ಕೂ ನಿಂತು ಜ್ಯೋತಿ ಬೆಳಗಿದ ಬಳಿಕ ಶರಣಂ ಅಯ್ಯಪ್ಪ ಮಂತ್ರವನ್ನು ಜಪಿಸಿದರು.
ಮಂಗಳೂರು: ಕೇರಳದ ಅಯ್ಯಪ್ಪ ಜ್ಯೋತಿ ಪ್ರತಿಭಟನೆಗೆ ಬೆಂಬಲವಾಗಿ ಶ್ರೀ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳೂರು, ಬಂಟ್ವಾಳ, ಪುತ್ತೂರು ಮತ್ತಿತರ ಕಡೆ “ಅಯ್ಯಪ್ಪ ಜ್ಯೋತಿ’ ಹಿಡಿದು ಪ್ರತಿಭಟನೆ ನಡೆಯಿತು. ಮಂಗಳೂರಿನ ಪಂಪ್‌ವೆಲ್ ಸರ್ಕಲ್ ಸಮೀಪ, ಕದ್ರಿ ಮಲ್ಲಿಕಟ್ಟೆ ಮೈದಾನ, ಕಾರ್‌ಸ್ಟ್ರೀಟ್ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗ, ಶ್ರೀ ಮಂಗಳಾದೇವಿ ದೇವಸ್ಥಾನ, ಸುರತ್ಕಲ್ ಜಂಕ್ಷನ್, ವಾಮಂಜೂರು ಹಾಗೂ ಕಾವೂರಿನಲ್ಲಿ ಸಂಜೆ 5.45ರ ಅನಂತರ 7 ಗಂಟೆಯ ಮಧ್ಯೆ ಏಕಕಾಲದಲ್ಲಿ ದೀಪವನ್ನು ಬೆಳಗುವ ಮೂಲಕ ಬೆಂಬಲ ಸೂಚಿಸಿದರು. ಕಾರ್‌ಸ್ಟ್ರೀಟ್‌ನಲ್ಲಿ ನಡೆದ ಸಭೆಯಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ದೀಪಗಳನ್ನು ಕೈಯಲ್ಲಿ ಹಿಡಿದು ಅಯ್ಯಪ್ಪ ನಾಮಸ್ಮರಣೆ ಮಾಡಿದರು. ಇಬ್ಬರು ವಿದೇಶೀಯರು ಪಾಲ್ಗೊಂಡು ಗಮನ ಸೆಳೆದರು.