Advertisement

ಬಸ್ಸಿಗಾಗಿ ಗ್ರಾಮಸ್ಥರೇ ರಸ್ತೆ ದುರಸ್ತಿಗೊಳಿಸಿದ್ರು!

12:39 PM Jun 13, 2019 | Naveen |

ಕುಮುದಾ ಬಿದನೂರು
ಹೊಸನಗರ:
ಗ್ರಾಮಕ್ಕೆ ಬಸ್ಸು ಬರಲ್ಲ. ಖಾಸಗಿ ಬಸ್ಸುಗಳೇ ಓಡಾಡುವ ಈ ಭಾಗದಲ್ಲಿ ಅವೂ ಓಡಾಡೊಲ್ಲ. ಬಸ್ಸು ಬಿಡಿ ಎಂದು ಮನವಿ ಮಾಡಿದರೆ ನಿಮ್ಮ ಗ್ರಾಮದ ರಸ್ತೆ ಸರಿಯಿಲ್ಲ ಎಂಬ ಸಬೂಬು. ಹಾಗಾಗಿ ಗ್ರಾಮದ ಜನರೇ ಸೇರಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.

Advertisement

ನಗರ ಹೋಬಳಿಯಲ್ಲಿ ಬರುವ ಕರಿಮನೆ ಗ್ರಾಪಂ ವ್ಯಾಪ್ತಿಯ ಕಾನ್‌ಮನೆ ಸರ್ಕಲ್ನಿಂದ ಕರಿಮನೆಗೆ ಸಾಗುವ ಪ್ರಮುಖ ರಸ್ತೆಯಿದೆ. ಅಲ್ಲದೆ ಈ ರಸ್ತೆಗೆ ಹೊಂದಿಕೊಂಡಂತೆ ನೂರಾರು ಕುಟುಂಬಗಳು ವಾಸವಾಗಿವೆ. ಆದರೆ ಈ ಮಾರ್ಗದಲ್ಲಿ ಬಸ್‌ ಸಂಚಾರವೇ ಇಲ್ಲ. ಸರ್ಕಾರಿ ಬಸ್ಸು ಬಿಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ನಿಮ್ಮ ರಸ್ತೆ ಸರಿಯಿಲ್ಲ? ಇನ್ನು ಈ ಭಾಗದಲ್ಲಿ ಖಾಸಗಿ ಬಸ್ಸುಗಳೇ ಪ್ರಮುಖ ಸಂಪರ್ಕ ಕೊಂಡಿ. ಗ್ರಾಮಸ್ಥರೆಲ್ಲ ಸೇರಿ ಖಾಸಗಿ ಬಸ್ಸಿನ ಮಾಲೀಕರನ್ನು ಸಂಪರ್ಕಿಸಿ ಬಸ್ಸು ಬಿಡಿ ಎಂದು ಮನವಿ ಮಾಡಿದ್ದರಿಂದ ಹಿಂದೆ ಬಸ್ಸು ಬಿಟ್ಟಿದ್ದರು. ಆದರೆ ರಸ್ತೆ ಸಂಪೂರ್ಣ ಹಾಳಾಗಿರುವ ಕಾರಣ ಬಸ್ಸಿನ ಸಂಪರ್ಕ ಕಡಿತಗೊಳಿಸಿದ್ದಾರೆ. ಇದರಿಂದ ಗ್ರಾಮಸ್ಥರು ಮತ್ತೆ ಬಸ್ಸಿನ ಸಂಪರ್ಕದಿಂದ ದೂರ ಉಳಿಯುವಂತಾಗಿದೆ.

8 ಕಿಮೀ ನಡೆಯಬೇಕು: ಕಾನ್‌ಮನೆ ಸರ್ಕಲ್ ನಿಂದ ಕರಿಮನೆ ಮಾರ್ಗದಲ್ಲಿ ಬಸ್ಸಿನ ಸಂಪರ್ಕವಿರದ ಕಾರಣ ಶಾಲಾ- ಕಾಲೇಜು ಮಕ್ಕಳು, ಗ್ರಾಮಸ್ಥರು ಪ್ರತಿಯೊಂದು ಕೆಲಸಕ್ಕು 8 ಕಿಮೀ ನಡೆದೇ ಹೋಗಬೇಕಾದ ಅನಿವಾರ್ಯತೆ ಇದೆ. ಈ ಭಾಗದಲ್ಲಿ ಗಾಳಿಮಳೆ ತುಸು ಹೆಚ್ಚೇ ಬರುವ ಕಾರಣ ಶಾಲಾ ಕಾಲೇಜು ಮಕ್ಕಳು ಓಡಾಡಕ್ಕೆ ಸಾಹಸ ಪಡಬೇಕು. ಅಲ್ಲದೆ ಕಾಡು ಮಾರ್ಗ ಆದ ಕಾರಣ ಭಯವೂ ಒಮ್ಮೊಮ್ಮೆ ಆವರಿಸುತ್ತದೆ.

ತಾವೇ ದುರಸ್ಥಿಗಿಳಿದರು!: ರಸ್ತೆ ಸರಿಯಿರದ ಕಾರಣ ಬಸ್ಸು ಬಿಡಲ್ಲ ಎಂಬ ಕಾರಣಕ್ಕೆ ಇಲ್ಲಿಯ ಗ್ರಾಮಸ್ಥರೇ ಖುದ್ದಾಗಿ ಸುಮಾರು 4 ಕಿಮೀ ರಸ್ತೆ ದುರಸ್ಥಿ ಕಾರ್ಯ ನಡೆಸಿದ್ದಾರೆ. ಹೊಂಡಗುಂಡಿಗಳನ್ನು ಮುಚ್ಚಿ ರಸ್ತೆ ಅಕ್ಕಪಕ್ಕದ ಗಿಡಗಂಟಿಗಳನ್ನು ಕಡಿದು ಖುಲ್ಲಾ ಮಾಡಿದ್ದಾರೆ. ಶ್ರಮದಾನದಲ್ಲಿ ಶಾಲಾ ಮಕ್ಕಳಾದಿಯಾಗಿ ಗ್ರಾಮಸ್ಥರು ಪಾಲ್ಗೊಂಡು ಹುರುಪಿನಿಂದಲೇ ಕೆಲಸದಲ್ಲಿ ಭಾಗಿಯಾಗಿದ್ದು ಗಮನ ಸೆಳೆಯಿತು.

Advertisement

ಇನ್ನಾದರೂ ಬಸ್ಸು ಬಿಡಿ!: ಈ ಹಿಂದೆ ದುರ್ಗಾಂಬಾ, ಶ್ರೀ ಗಜಾನನ, ಮತ್ತು ಹನುಮಾನ್‌ ಸಂಸ್ಥೆಗಳವರು ಬಸ್ಸುಗಳನ್ನು ಬಿಟ್ಟಿದ್ದರು. ಆದರೆ ಕೊನೆಗೆ ರಸ್ತೆ ಸರಿಯಿರದ ಕಾರಣ ಸಂಚಾರ ನಿಲ್ಲಿಸಿದ್ದಾರೆ. ಈಗ ಗ್ರಾಮಸ್ಥರೇ ಖುದ್ದಾಗಿ ರಸ್ತೆ ದುರಸ್ಥಿ ಮಾಡಿದ್ದು ಇನ್ನಾದರು ಬಸ್ಸುಗಳನ್ನು ಬಿಡಿ ಎಂದು ಕರಿಮನೆ ಗ್ರಾಪಂ ಅಧ್ಯಕ್ಷ ಎಚ್.ಟಿ. ರಮೇಶ್‌ ಮನವಿ ಮಾಡಿದ್ದಾರೆ. ಮೂರ್ತಿ, ಹರೀಶ್‌, ಸತೀಶ್‌, ಸುಧಾಕರ್‌, ಗಣೇಶ್‌, ಚಂದ್ರು, ಕಲಾವತಿ, ಸುಜಾತ, ವಿಮಲ, ಸ್ವಾತಿ, ಸ್ಫೂರ್ತಿ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆ ಈ ಪ್ರದೇಶದಲ್ಲಿ ಮಳೆ ಪ್ರಾರಂಭವಾಗಿದ್ದು ಮಳೆಯ ನಡುವೆಯೇ ಗ್ರಾಮಸ್ಥರೆಲ್ಲ ಪಕ್ಷಭೇದ ಮರೆತು ಒಟ್ಟಾಗಿ ಶ್ರಮದಾನ ಮಾಡಿದ್ದು ಇಲ್ಲಿಯ ಸಂಘಟನೆಗೆ ಹಿಡಿದ ಸಾಕ್ಷಿಯಾಗಿದೆ. ಖಾಸಗಿ ಬಸ್‌ ಮಾಲೀಕರು ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿ ಬಸ್ಸು ಬಿಡಲಿ ಎಂಬುದು ಎಲ್ಲರ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next