Advertisement

ರಕ್ತ ಕೊಟ್ಟೇವು, ನೀರು ಕೊಡಲ್ಲ

11:38 AM Jun 30, 2019 | Naveen |

ಹೊಸನಗರ: ಶರಾವತಿ ಮಲೆನಾಡು ಕೂಸು, ಒಂದು ತೊಟ್ಟು ನೀರು ಕೊಡುವುದಿಲ್ಲ. ರಕ್ತ ಬೇಕಾದರೂ ಕೊಡಲು ಸಿದ್ಧ ಎಂದು ಮೂಲೆಗದ್ದೆ ಮಠದ ಚನ್ನಬಸವ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಪಕ್ಷಾತೀತವಾಗಿ ‘ಶರಾವತಿ ನದಿ ಉಳಿಸಿ’ ಅಭಿಯಾನದ ಪ್ರತಿಭಟನಾ ರ್ಯಾಲಿಯ ನಂತರ ತಾಲೂಕು ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಶರಾವತಿ ನದಿ ನೀರು ಬೆಂಗಳೂರಿಗೆ ಸಾಗಿಸುವ ಯೋಜನೆಯು ಎಲ್ಲಾ ದೃಷ್ಟಿಯಲ್ಲಿ ಅವೈಜ್ಞಾನಿಕ. ಇಂತಹ ಯೋಜನೆ ಕಾರ್ಯಗತ ಮಾಡಲು ಬಿಡುವುದಿಲ್ಲ. ಈ ನಿಟ್ಟನಿಲ್ಲಿ ಎಲ್ಲಾ ರೀತಿಯ ಹೋರಾಟಕ್ಕೆ ತಾವು ಬದ್ಧರಾಗಿದ್ದೇವೆ. ಸುಮಾರು 300 ಕಿಮೀ ಉದ್ದ ಹಾಗೂ 3500 ಅಡಿ ಎತ್ತರಕ್ಕೆ ನೀರು ಸಾಗಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬಾರದು. ಇದಕ್ಕೆ ಬದಲಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಇದೊಂದು ಪಕ್ಷಾತೀತ ಹೋರಾಟ. ಮಲೆನಾಡಿನ ಪ್ರತಿಷ್ಠೆಯನ್ನು ಪಣಕ್ಕೆ ಇಡಬೇಕಾಗಿದೆ. ಪರಿಸರ ವಿರೋಧಿ ಯೋಜನೆಯನ್ನು ಪಕ್ಷಾತೀತವಾಗಿ ಖಂಡಿಸಬೇಕು ಎಂದರು.

ಮಲೆನಾಡಿನ ಈ ಭಾಗವು ಈಗಾಗಲೇ 4 ವಿದ್ಯುತ್‌ ಯೋಜನೆಯಲ್ಲಿ ಸಂತ್ರಸ್ತವಾಗಿದೆ. ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ನಿರ್ಮಿಸಿದ 56 ವರ್ಷದಲ್ಲಿ ಕೇವಲ 7 ಬಾರಿ ಮಾತ್ರ ಪೂರ್ಣ ಪ್ರಮಾಣದಲ್ಲಿ ತುಂಬಿದೆ. ನಾಡಿಗೆ ಬೆಳಕು ನೀಡುವ ಯೋಜನೆಗೆ ನೀರು ಸಾಕಾಗುವುದಿಲ್ಲ ಎಂತಾದರೆ ಬೆಂಗಳೂರಿಗೆ ನೀರು ಎಲ್ಲಿಂದ ಕೊಡಲು ಇದೆ? ಇದೊಂದು ಅಸಂಬದ್ಧ ಯೋಜನೆ ಎಂದು ದೂರಿದರು.

Advertisement

ಬೆಂಗಳೂರಿಗೆ ನೀರು ಕೊಂಡೊಯ್ಯುವ ಈ ಯೋಜನೆ ರದ್ದು ಮಾಡುವಂತೆ ತಾವು ಈಗಾಗಲೇ ಮುಖ್ಯಮಂತ್ರಿಗಳ ಬಳಿ ಚರ್ಚಿಸಿದ್ದು ಮುಂದಿನ ವಿಧಾನಸಭೆಯ ಕಲಾಪದಲ್ಲಿ ಈ ವಿಷಯ ಪ್ರಸ್ತಾವಿಸ‌ಲಾಗುವುದು. ಈ ನಿಟ್ಟನಲ್ಲಿ ಮಲೆನಾಡ ಭಾಗದ ಎಲ್ಲಾ ಶಾಸಕರ ಸಹಕಾರ ಬಯಸಲಾಗಿದೆ ಎಂದರು.

ಪಕ್ಷಾತೀತ ಹಾಗೂ ಜ್ಯಾತೀತವಾಗಿ ನಡೆದ ಪ್ರತಿಭಟನೆಯಲ್ಲಿ ಪಟ್ಟಣದ ಸಂತ ಅಂತೋಣಿ ಚರ್ಚ್‌ ಧರ್ಮ ಗುರು ಸೈಮನ್‌, ಬಟ್ಟೆಮಲ್ಲಪ್ಪ ಮಸೀದಿಯ ಮೌಲ್ವಿ ಅಬ್ದುಲ್ ಮುಸ್ಲಿಯಾರ್‌, ಮಾಜಿ ಶಾಸಕ ಬಿ. ಸ್ವಾಮಿರಾವ್‌, ಜಿಪಂ ಸದಸ್ಯ ಸುರೇಶ ಸ್ವಾಮಿರಾವ್‌, ಮಾಜಿ ಸದಸ್ಯೆ ಎ.ಟಿ. ನಾಗರತ್ನ, ಶರಾವತಿ ನದಿ ಉಳಿಸಿ ಹೋರಾಟ ಸಮಿತಿಯ ಏಸುಪ್ರಕಾಶ್‌, ಎಂ.ವಿ. ಜಯರಾಮ, ಬಿ.ಎಸ್‌. ಸುರೇಶ, ಮಂಜುನಾಥ ಬ್ಯಾಣದ್‌, ಚಕ್ರವಾಕ ಸುಬ್ರಹ್ಮಣ್ಯ, ಹಾಲಗದ್ದೆ ಉಮೇಶ, ಶ್ರೀನಿವಾಸ ಕಾಮತ್‌ ಮತ್ತಿತರರು ಇದ್ದರು.

ಶರಾವತಿ ನಮ್ಮದು ಜಾಥಾ: ಕೊಡಚಾದ್ರಿ ಕಾಲೇಜಿನಿಂದ ಹೊರಟ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ‘ಶರಾವತಿ ನಮ್ಮದು’ ಘೋಷಣೆಯೊಂದಿಗೆ ತಾಲೂಕು ಕಚೇರಿಯ ತನಕ ಜಿಟಿಜಿಟಿ ಮಳೆಯ ನಡುವೆ ನಡೆಯಿತು. ಇದರಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next