ಹೊಸನಗರ: ಹೊಂಡಗುಂಡಿಯ ನೆಲ.. ಮುರಿದ ಬೆಂಚು.. ಹೀಗೆ ಅವ್ಯವಸ್ಥೆಯ ಸರಮಾಲೆಗಳ ನಡುವೆ ಕಲಿಯಬೇಕಿದೆ ಪಿಯು ಶಿಕ್ಷಣ. ಹಾಗಂತ ಇದು ಯಾವುದೋ ಹಳ್ಳಿ ಮೂಲೆಯ ಶಾಲೆಯಲ್ಲ. ತಾಲೂಕಿನ ಇತರ ಶಾಲಾ- ಕಾಲೇಜುಗಳಿಗೆ ಮಾದರಿಯಾಗಿರಬೇಕಿದ್ದ ತಾಲೂಕು ಕೇಂದ್ರದ ಅದರಲ್ಲೂ, ತಾಲೂಕು ಕಚೇರಿ ಪಕ್ಕದಲ್ಲೇ ಇರುವ ಸರ್ಕಾರಿ ಪಪೂ ಕಾಲೇಜಿನ ಚಿತ್ರಣ.
ಪಟ್ಟಣದಲ್ಲಿರುವ ಸರ್ಕಾರಿ ಪಪೂ ಕಾಲೇಜಿನ ದಯನೀಯ ಸ್ಥಿತಿ ಇದು. ಇಲ್ಲಿ ಪಿಯುಸಿ ಪ್ರಥಮ ಮತ್ತು ದ್ವಿತೀಯ ಪಿಯು ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ ಒಟ್ಟು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 400 ಕ್ಕೂ ಹೆಚ್ಚು ಹೆಣ್ಣು ಮಕ್ಕಳು. ಈ ಮಕ್ಕಳಿಗೆ ಕೊಠಡಿಯೇ ಕೊರತೆ ಇರುವಾಗ ಇರುವ ಕೊಠಡಿಯೂ ಪೂರ್ಣ ಹಾಳಾಗಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿ.
ವಿಪರ್ಯಾಸ ಎಂದರೆ 10 ವರ್ಷಗಳ ಈಚೆಗೆ ನಿರ್ಮಾಣವಾಗಿರುವ ಕೊಠಡಿಗಳೇ ಬಳಕೆಗೆ ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿವೆ. ಅಷ್ಟು ಮಾತ್ರವಲ್ಲ, ನಿರ್ಮಾಣದ ನಂತರ ಮತ್ತೆ ನೆಲ ದುರಸ್ತಿ ಮಾಡಿ ಸಿಮೆಂಟ್ ಹಾಕಿರುವುದೂ ಕೂಡ ಕಿತ್ತು ಹೋಗಿರುವುದು ಗುಣಮಟ್ಟದ ಕಾಮಗಾರಿಯ ಕುರಿತು ಅನುಮಾನ ಬಂದಿದೆ.
ತಾಲೂಕಿನ ಪಿಯು ಪರೀಕ್ಷೆ ನಡೆಯುವುದು ಕೂಡ ಇಲ್ಲೇ: ಇದೇ ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲ ಪಿಯು ಪರೀಕ್ಷೆಗೆ ತಾಲೂಕಿನ ನಿಟ್ಟೂರು, ನಗರ ಮತ್ತು ಮಾಸ್ತಿಕಟ್ಟೆಯ ವಿದ್ಯಾರ್ಥಿಗಳು ಕೂಡ ಈ ಕಾಲೇಜಿನಲ್ಲಿ ತಮ್ಮ ದ್ವಿತೀಯ ಪಿಯು ಪರೀಕ್ಷೆ ಬರೆಯಲಿದ್ದಾರೆ. ಅಲ್ಲಿಯೂ ಸುಮಾರು 400 ವಿದ್ಯಾರ್ಥಿಗಳು ಇದ್ದಾರೆ. ಅವರೆಲ್ಲರೂ ಸೇರಿದರೆ 1000 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕೆ ಮುರಿದ ಡೆಸ್ಕ್ ಹೊರತು ಬೇರೇನೂ ಇಲ್ಲ. ನಿಂತು ಪರೀಕ್ಷೆ ಬರೆಯಬೇಕು, ಇಲ್ಲ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ನೆಲದ ಮೇಲೆ ಕುಳಿತ ರೀತಿಯಲ್ಲಿ ಪರೀಕ್ಷೆ ಬರೆಯಬೇಕಿದೆ.
ಈಗಾಗಲೇ ಈ ಕುರಿತು ಇಲ್ಲಿನ ಕಾಲೇಜು ಸಮಿತಿ ಹತ್ತಾರು ಬಾರಿ ಸಂಬಂಧಪಟ್ಟವರ ಬಳಿ ಮನವಿ ಮಾಡಿದ್ದಾರೆ. ಉಪನ್ಯಾಸಕರು ಕೂಡ ಕಂಡ ಸಭೆ- ಸಮಾರಂಭಗಳಲ್ಲಿ ತಿಳಿಸಿದ್ದಾರೆ. ಆದರೆ ದುರಸ್ತಿಯ ಪ್ರಸ್ತಾಪ ಇಲ್ಲವೇ ಇಲ್ಲ. ಹೊರ ಕಟ್ಟಡ ಭದ್ರವಾಗಿಯೇ ಇದ್ದರೂ ನೆಲ ಮತ್ತು ಸಾಮಗ್ರಿಗಳ ಕಳಪೆ ಗುಣಮಟ್ಟದಿಂದಾಗಿ ಹಾಳಾಗಿದೆ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಒಟ್ಟಿನಲ್ಲಿ ತಾಲೂಕು ಕೇಂದ್ರದ ಸರ್ಕಾರಿ ಪಪೂ ಕಾಲೇಜು ಕೊಠಡಿಯ ಗುಂಡಿಯೊಳಗೆ ವಿದ್ಯಾರ್ಥಿಗಳು ಕೂತು ಪಾಠ ಕೇಳುತ್ತಿರುವುದೇ ನಿಜಕ್ಕೂ ಸೋಜಿಗದ ಸಂಗತಿ.
ಒಟ್ಟಾರೆ ಹೊಸನಗರ ತಾಲೂಕಿನ ಮೂಲೆ- ಮೂಲೆಯ ವಿದ್ಯಾರ್ಥಿಗಳಿಗೆ ಸಾಕಷ್ಟು ವರ್ಷಗಳಿಂದ ಶಿಕ್ಷಣದ ಹಸಿವು ನೀಗಿಸುತ್ತ ಬಂದಿರುವ ಸರ್ಕಾರಿ ಪಪೂ ಕಾಲೇಜಿನ ಅವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅಲ್ಲದೆ ಉತ್ತಮ ವ್ಯಾಸಂಗದ ಸಲುವಾಗಿ ಕಾಲೇಜಿನ ವ್ಯವಸ್ಥೆಯನ್ನು ಮಾದರಿಯಾಗಿ ಮಾಡಬೇಕಿದ್ದು ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಗಮನ ಹರಿಸಬೇಕಿದೆ.
ಇಲ್ಲಿನ ಎರಡ್ಮೂರು ಕೊಠಡಿಯ ನೆಲ ಹಾಸು ಸಂಪೂರ್ಣ ಹಾಳಾಗಿದ್ದು ಬಳಸುವುದಕ್ಕೆ ಬರುತ್ತಿಲ್ಲ. ಇನ್ನು ಡೆಸ್ಕ್ ಕೂಡ ಮಕ್ಕಳು ಕೂರುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಶೈಕ್ಷಣಿಕ ವರ್ಷದ ಪರೀಕ್ಷೆ ಸಮೀಪವಾಗುತ್ತಿದೆ. ಪರ್ಯಾಯ ವ್ಯವಸ್ಥೆ ಹೇಗೆ ಎನ್ನುವ ಚಿಂತೆ ಇದೆ. ಈಗಾಗಲೆ ಸಂಬಂಧಪಟ್ಟವರಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದ್ದರೂ ಪ್ರಯೋಜನ ಮಾತ್ರ ಶೂನ್ಯವಾಗಿದೆ.
ಸುಂದರ,
ಕಾಲೇಜು ಸಮಿತಿ ಉಪಾಧ್ಯಕ್ಷ
ಇಲಾಖೆಗೆ ಮಾಹಿತಿ ನೀಡಲಾಗಿದೆ ಒಟ್ಟು ಕಟ್ಟಡಗಳು, ದುರಸ್ತಿಗೆ ಬಂದಿರುವ ಕಟ್ಟಡಗಳ ಸಂಖ್ಯೆ, ಅಗತ್ಯವಿರುವ ಸಂಖ್ಯೆ ಅವುಗಳ ಸ್ಥಿತಿಗತಿ ಈ ಎಲ್ಲ ಕುರಿತು ವರದಿ ಈಗಾಗಲೇ ನೀಡಲಾಗಿದೆ. ದುರಸ್ತಿಯ ನಿರೀಕ್ಷೆಯಲ್ಲಿ ನಾವಿದ್ದೇವೆ.
ಗಣೇಶ್ ಐತಾಳ್,
ಪ್ರಾಂಶುಪಾಲರು
ಕುಮುದಾ ನಗರ