ಕೆ.ಆರ್.ಪೇಟೆ: ಅಕ್ರಮ ಒತ್ತುವರಿ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಾಲೂಕಿನ ಹೊಸಹೊಳಲು ಗ್ರಾಮದ ಚಿಕ್ಕಕೆರೆಯ ವಿಸ್ತೀರ್ಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದು ಹೀಗೆ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಚಿಕ್ಕಕೆರೆ ಸಣ್ಣಕೊಳ ಆಗುವುದರಲ್ಲಿ ಅನುಮಾನವಿಲ್ಲ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಹೊಸಹೊಳಲು ಗ್ರಾಮದಲ್ಲಿ ಭೂಮಿಗೆ ಚಿನ್ನದ ಬೆಲೆ. ಸುತ್ತಮುತ್ತಲಿನ ರೈತರು ಮತ್ತು ನಿವಾಸಿಗಳು ಕೆರೆಯಲ್ಲಿ ಅಕ್ರಮ ಒತ್ತುವರಿಗೆ ಇಳಿದಿದ್ದಾರೆ. 28 ಎಕರೆ ವಿಸ್ತೀರ್ಣದಲ್ಲಿದ್ದ ಕೆರೆ, ಈಗ ಕೇವಲ 8 ಎಕರೆ ಮಾತ್ರ ಉಳಿದುಕೊಂಡಿದೆ. ಸುತ್ತಲಿನ ರೈತರು ಮತ್ತು ನಿವಾಸಿಗಳು ಸುಮಾರು 20 ಎಕರೆ ಕೆರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಜೀವಜಲ ನೀಡುವ ಕೆರೆಯನ್ನು ರಕ್ಷಿಸುವ ಹೊಣೆ ಹೊತ್ತಿರುವ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಳಿದಿದ್ದಾರೆ. ಐದು ವರ್ಷಗಳ ಹಿಂದೆ ತಹಶೀಲ್ದಾರ್ ಆಗಿದ್ದ ಡಾ.ಎಚ್.ಎಲ್ ನಾಗರಾಜುರವರು ಕರೆಯ ಗಡಿಯನ್ನು ಗುರುತಿಸಿದ್ದರು. ಈ ವೇಳೆ ಕೆರೆಯ ಗಡಿಯಲ್ಲಿದ್ದ ಹತ್ತಾರು ತೆಂಗಿನ ಮರಗಳನ್ನು ಉರುಳಿಸಿದ್ದರು. ಆದರೆ ಅಕ್ರಮ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆಯದೇ ಸರ್ಕಾರಕ್ಕೆ ಯೂಟರ್ನ್ ಹೊಡೆದಿದ್ದರು.
ತೆಪ್ಪೋತ್ಸವ ಸ್ಥಗಿತ: ಗ್ರಾಮದಲ್ಲಿ ಹೊಯ್ಸಳರ ಕಾಲದ ಅದ್ಭುತ ಶಿಲ್ಪ ಕಲೆಗಳಿಂದ ನಿರ್ಮಾಣವಾಗಿರುವ ಶ್ರೀಲಕ್ಷ್ಮೀನಾರಾಯಣ, ಶ್ರೀ ಆಂಜನೇಯ, ಶ್ರೀರಾಮ ಸೇರಿದಂತೆ ಹಲವಾರು ದೇವಾಲ ಯಗಳಿವೆ. ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಇದೇ ಕೆರೆಯಲ್ಲಿ ಗಂಗಾ ಪೂಜೆ ಸಲ್ಲಿಸಲಾಗುತ್ತಿತ್ತು. ರಥೋತ್ಸವದ ಬಳಿಕ ಕೆರೆಯಲ್ಲಿ ತೆಪ್ಪೋತ್ಸವ ಮಾಡಲಾಗುತ್ತಿತ್ತು. ಆದರೆ ಒತ್ತುವರಿಯಿಂದ ಕೆರೆ ಚಿಕ್ಕದಾಗಿದೆ. ನೀರು ಸಂಗ್ರಹಣೆ ಕಡಿಮೆಯಾಗಿ ತೆಪ್ಪೋತ್ಸವ ಮಾಡಲು ಸಾಧ್ಯವಾಗುತ್ತಿಲ್ಲ.
20 ಲಕ್ಷ ರೂ. ದುರ್ಬಳಕೆ: ಕೆ.ಆರ್.ಪೇಟೆ ಮತ್ತು ಹೊಸಹೊಳಲು ನಡುವೆ ಕರೆ ಇರುವುದರಿಂದ ಕೆರೆಯನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರು ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರ ಮಾಡಲು ಫುಟ್ಪಾತ್, ಧಾರ್ಮಿಕ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಕೆರೆಯ ಒಂದು ಭಾದಲ್ಲಿ ಉದ್ಯಾನವನ ಮತ್ತು ಬೋಟಿಂಗ್ ವ್ಯವಸ್ಥೆ ಮಾಡಲು ಪುರಸಭೆ ನಿಧಿಯಿಂದ 20 ಲಕ್ಷ ರೂ. ಅನುದಾನ ಪಡೆಯಲಾಗಿದೆ. ಆದರೆ ಗುತ್ತಿಗೆದಾರರು ಮತ್ತು ಪುರಸಭೆ ಎಂಜಿನಿಯರ್ ಒಳ ಒಪ್ಪಂದ ಮಾಡಿಕೊಂಡು ಕೆರೆ ಏರಿಯ ಮೇಲೆ ಕಬ್ಬಿಣದ ಬೇಲಿ ನಿರ್ಮಾಣ ಮಾಡಿ ಇನ್ನುಳಿದ ಅಭಿವೃದ್ಧಿ ಕಾಮಗಾರಿ ಮಾಡದೆ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈಗ ಇವರು ನಿರ್ಮಾಣ ಮಾಡಿರುವ ಕಬ್ಬಿಣದ ಬೇಲಿಯ ಮೇಲೆ ಹಂಬುಗಳು ಬೆಳೆದುಕೊಂಡು ಕೆರೆಯ ಸೌಂದರ್ಯ ಹಾಳು ಮಾಡುವ ಜೊತೆಗೆ ವಿಷ ಜಂತುಗಳ ಆಶ್ರಯತಾಣವಾಗಿದೆ.
ಶೇ.10ರಷ್ಟು ಮಾತ್ರ ನೀರು ಸಂಗ್ರಹಣೆ: ಕಾವೇರಿ ನೀರಾವರಿ ನಿಗಮಕ್ಕೆ ಸೇರಿರುವ ಕೆರೆಯ ಶೇ.60ರಷ್ಟು ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನುಳಿದ ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಕೆರೆ ನಿರ್ಮಾಣವಾದಾಗಿನಿಂದಲೂ ಕೆರೆಯಲ್ಲಿನ ಮಣ್ಣನ್ನು ತುಂಬಿಸುವ ಕೆಲಸವನ್ನು ಅಧಿಕಾರಿಗಳು ಮಾಡಿಲ್ಲ. ಇದರ ಜೊತೆಗೆ ಕೆರೆಯ ಮಧ್ಯ ಭಾಗದಲ್ಲಿ ಸೇತುವೆ ನಿರ್ಮಾಣ ಮಾಡಿರುವುದು ಕೆರೆಯಲ್ಲಿ ನೀರು ಸಂಗ್ರಹ ಕಡಿಮೆಯಾಗಲು ಒಂದು ಕಾರಣವಾಗಿದೆ. ಸೇತುವೆ ನಿರ್ಮಾಣ ಮಾಡಲು ತೆಗೆದಿದ್ದ ಮಣ್ಣನ್ನು ಕೆರೆಯಿಂದ ಹೊರ ಸಾಗಿಸದೇ ಕೆರೆಯಂಗಳದಲ್ಲಿಯೇ ಬಿಟ್ಟಿರುವುದರಿಂದ ನೀರು ಸಂಗ್ರಹಣೆಗೆ ತೊಂದರೆಯಾಗಿದೆ. ಕೆರೆಯ ಏರಿಯ ಮೇಲೂ ಗಿಡಗಳು ಬೆಳೆದು ಜನರು ಕೆರೆಗೆ ಇಳಿಯಂತಾಗಿದೆ.
ಕಲುಷಿತ ನೀರು: ಕೆರೆಯಲ್ಲಿ ಮಣ್ಣು ತುಂಬಿಕೊಳ್ಳುವ ಜೊತೆಗೆ ಗಿಡಗಂಟೆೆಗಳು, ಪೊದೆಗಳು ಬೆಳೆದಿವೆ. ಅವುಗಳ ಎಲೆಗಳು ಉದುರಿ ನೀರಿನಲ್ಲಿ ಬೀಳುವುದರಿಂದ ನೀರು ಕೊಳೆಯುತ್ತಿದೆ. ಇದರೊಂದಿಗೆ ಸಾರ್ವಜನಿಕರು ಪೂಜೆ ಮಾಡಿದ ಹೂವು, ಬಾಳೆಕಂದು, ಮಾವಿನನ ಸೊಪ್ಪು ಸೇರಿದಂತೆ ಹಳೆ ದೇವರ ಪೋಟೊಗಳನ್ನು ಕರೆಯಲ್ಲಿ ಎಸೆಯುವುದರಿಂದ ನೀರು ಕೊಳೆಯುವ ಜೊತೆಗೆ ಜಲಚರಗಳ ಸಾವಿಗೂ ಕಾರಣವಾಗಿದೆ.
● ಎಚ್.ಬಿ.ಮಂಜುನಾಥ್