Advertisement

ನಿರೀಕ್ಷೆ ಮೀರಿ ಮಳೆಯಾದ್ರೂ ನೀರಿಗೆ ಬರ!

04:23 PM Mar 22, 2020 | Naveen |

ಹೊಸದುರ್ಗ: ಕಳೆದ ಬಾರಿ ನಿರೀಕ್ಷೆಗೂ ಮೀರಿ ಸುರಿದ ಮಳೆಯಿಂದ ಪ್ರಸಕ್ತ ಸಾಲಿನಲ್ಲಿ ಸದ್ಯಕ್ಕೆ ತಾಲೂಕಿನಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೆ ಬೇಸಿಗೆಯ ಪ್ರಖರತೆ ಹೆಚ್ಚುತ್ತ ಹೋದಂತೆ ಕುಡಿವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

Advertisement

ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವುದರಿಂದ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಆದರೆ ಹಲವು ವರ್ಷ ಮಳೆ ಬಾರದೆ ಕೆರೆ ಕಟ್ಟೆಗಳು ತುಂಬಿಲ್ಲ ಹಾಗೂ ಕೆರೆಗಳ ನಿರ್ವಹಣೆ ಮಾಡುವಲ್ಲಿನ ನಿರ್ಲಕ್ಷ್ಯದಿಂದ ನೀರಗುಂದ, ಕಡದನಕೆರೆ ಆದ್ರಕಟ್ಟೆ ಸೇರಿದಂತೆ ಹಲವು ಕೆರೆಗಳು ಭರ್ತಿಯಾಗಿದ್ದರೂ ನೀರು ಮಾತ್ರ ಸಂಗ್ರಹ ಆಗಿಲ್ಲ.

ಬರಿದಾದ ಬ್ಯಾರೇಜ್‌: ಹೊಸದುರ್ಗ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಕೆಲ್ಲೋಡು ಬ್ಯಾರೇಜ್‌ ಗೆ ಹೊಂದಿಕೊಂಡಂತಿರುವ ದಡ, ಭಾರೀ ಮಳೆಯಿಂದ ನದಿ ತುಂಬಿ ಹರಿದ ಪರಿಣಾಮ ಕೊಚ್ಚಿ ಹೋಗಿತ್ತು. ಇದರಿಂದ ಕೆಲ್ಲೋಡು ಬ್ಯಾರೇಜ್‌ ಬರಿದಾಗಿದೆ. ದುರಸ್ತಿ ಕಾರ್ಯ ಕೂಡ ಮಂದಗತಿಯಲ್ಲಿ ಸಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಅಕ್ಟೋಬರ್‌ನಿಂದ ಎರಡು ತಿಂಗಳ ಕಾಲ ಹರಿಸಿದ ನೀರು ಸಹ ನಿಲ್ಲುತ್ತಿಲ್ಲ. ಹಾಗಾಗಿ ತಾಲೂಕಿನ ಕೆಲ್ಲೋಡು ಸುತ್ತಮುತ್ತಲಿನ ಗ್ರಾಮಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ವೇದಾವತಿ ನದಿ ಕೂಡ ಬತ್ತುತ್ತಿರುವುದರಿಂದ ಹೊಸದುರ್ಗ ಪಟ್ಟಣಕ್ಕೆ ನೀರು ಪೂರೈಕೆ ಕಷ್ಟವಾಗುತ್ತಿದೆ.

ಪಟ್ಟಣದ ಕೆಲವು ವಾರ್ಡ್‌ಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಶಾಸಕರು ಕ್ರಮ ಕೈಗೊಂಡಿದ್ದರು. ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಬಲ್ಲಾಳಸಮುದ್ರ ಹಾಗೂ ಕೊರಟಿಕೆರೆ ಬ್ಯಾರೇಜ್‌ನಿಂದ ನೀರು ಬಿಡುಗಡೆಯಾದ ಕಾರಣ ಸ್ವಲ್ಪ ನೀರು ಕೆಲ್ಲೋಡು ಬ್ಯಾರೇಜ್‌ ಸೇರಿದೆ. ಆದರೆ ಅದರಿಂದ ಬಹಳ ದಿನಗಳವರೆಗೆ ನೀರು ಸರಬರಾಜು ಮಾಡುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಪುರಸಭೆಯಿಂದ ಈಗ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಬೇಸಿಗೆ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯೇ ಹೆಚ್ಚು.

13 ಗ್ರಾಮ ಗುರುತು: ತಾಲೂಕಿನಲ್ಲಿ ತೀವ್ರತರವಾದ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳು ಕಂಡು ಬಂದಿಲ್ಲ. ಆದರೂ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದೆಂದು 13 ಹಳ್ಳಿಗಳನ್ನು ಸಮಸ್ಯಾತ್ಮಕ ಗ್ರಾಮಗಳನ್ನಾಗಿ ಗುರುತಿಸಲಾಗಿದೆ. ಕೆಲವೆಡೆ ಕುಡಿಯುವ ನೀರಿನ ಸರಬರಾಜು ಪೈಪ್‌ ಲೈನ್‌, ಮೋಟಾರ್‌ ಅಳವಡಿಕೆಯಂತಹ ಸಣ್ಣಪುಟ್ಟ ಸಮಸ್ಯೆಗಳಿವೆ ಎನ್ನುತ್ತಾರೆ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು.

Advertisement

ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಹಳ್ಳಿಗಳಿಗೆ ವಿವಿ ಸಾಗರದ ಹಿನ್ನೀರಿನಿಂದ ಪೈಪ್‌ಲೈನ್‌ ಮುಖಾಂತರ ನೀರು ಪೂರೈಕೆ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ಮಧ್ಯೆ ರಾಜ್ಯ ಸರ್ಕಾರ ಹೊಸದುರ್ಗ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಒಂದು ಟಿಎಂಸಿ ನೀರು ಪೂರೈಕೆ ಮಾಡುವ 350 ಕೋಟಿ ರೂ. ವೆಚ್ಚದ ಬಹುಗ್ರಾಮ ಯೋಜನೆಗೆ ಅನುಮೋದನೆ ನೀಡಿರುವುದು ಆಶಾದಾಯಕ ಬೆಳವಣಿಗೆ.

ತಾಲೂಕಿನಲ್ಲಿ 34 ಡಿಗ್ರಿ ತಾಪಮಾನವಿದ್ದು, ಬಿರು ಬಿಸಿಲಿನಿಂದ ಜನರು ಬಸವಳಿಯುತ್ತಿದ್ದಾರೆ. ಹಾಗಾಗಿ ತಾಲೂಕು ಆಡಳಿತ ಹಾಗೂ ಪುರಸಭೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next