Advertisement

ತಾಲೂಕಾಡಳಿತಕ್ಕೆ ತಲೆನೋವಾದ ಕ್ವಾರಂಟೈನ್‌

11:35 AM May 13, 2020 | Naveen |

ಹೊಸದುರ್ಗ: ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದಿರುವ ವಲಸಿಗರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡುವುದು ತಾಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

Advertisement

ತಾಲೂಕಿನ ಯಾವುದೇ ಗ್ರಾಮಕ್ಕೆ ಹೋದರೂ ಇಲ್ಲಿ ಕ್ವಾರಂಟೈನ್‌ ಮಾಡಬೇಡಿ, ನಮ್ಮ ಗ್ರಾಮ ಸೋಂಕಿನಿಂದ ಮುಕ್ತವಾಗಿದೆ, ಎಲ್ಲಿಂದಲೋ ಬಂದವರಿಂದ ನಮ್ಮ ಗ್ರಾಮದ ಜನರು ರೋಗ ಬಾಧಿತರಾಗುತ್ತಾರೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸೋಮವಾರ ರಾತ್ರಿ ಕೇರಳದ ಕಾಸರಗೋಡಿನಿಂದ ಶ್ರೀರಾಂಪುರ ಹೋಬಳಿಯ ಸುಮಾರು 21ಜನ ವಲಸಿಗರು ರಾಜ್ಯ ಸರ್ಕಾರಗಳ ಅನುಮತಿ ಮೇರೆಗೆ ತಮ್ಮ ಗ್ರಾಮಗಳಿಗೆ ಬಂದಿದ್ದಾರೆ.

ಈ ರೀತಿ ಹೊರ ರಾಜ್ಯಗಳಿಂದ ಬಂದಂತಹ ವಲಸಿಗರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಅದರಂತೆ ಅವರನ್ನೆಲ್ಲಾ ಗ್ರಾಮಕ್ಕೆ ಸಮೀಪವಿರುವ ತಂಡಗ ಗ್ರಾಮದ ಹೊರವಲಯದಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲು ನಿರ್ಧರಿಸಲಾಯಿತು. ತಡರಾತ್ರಿ ತಹಶೀಲ್ದಾರ್‌ ನೇತೃತ್ವದಲ್ಲಿ ಪೊಲೀಸರು ಎರಡು ಅಂಬ್ಯುಲೆನ್ಸ್‌ಗಳಲ್ಲಿ 21 ಜನ ವಲಸಿಗರನ್ನು ಕರೆದೊಯ್ದಿದ್ದಾರೆ. ವಿಷಯ ತಿಳಿದ ಸ್ಥಳೀಯರು ರಾತ್ರಿ ವೇಳೆ ಕ್ವಾರಂಟೈನ್‌ ಮಾಡಲು ಅವಕಾಶ ನೀಡದೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಎಷ್ಟೇ ಮನವಿ ಮಾಡಿಕೊಂಡರೂ ಒಪ್ಪದ ಕಾರಣ ಅಲ್ಲಿಂದ ಅವರನ್ನು ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಯಿತು. ಮಂಗಳವಾರ ಮಧ್ಯಾಹ್ನ 21 ಜನ ವಲಸಿಗರನ್ನು ಮತ್ತೋಡು ಹೋಬಳಿಯ ಸಿದ್ದಾಪುರ ಗೇಟ್‌ ಬಳಿ ಇರುವ ಇಂದಿರಾ ಗಾಂಧಿ  ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲು ಕರೆದೊಯ್ಯಲಾಯಿತು. ಅಲ್ಲಿನ ಜನರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲಾ ಕಡೆ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಿಸಿದ ತಹಶೀಲ್ದಾರ್‌ ತಿಪ್ಪೇಸ್ವಾಮಿ, ಪೊಲೀಸ್‌ ಬಂದೋಬಸ್ತ್ನಲ್ಲಿ ವಲಸಿಗರನ್ನು ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next