Advertisement

ವಿಧಾನ ಕದನ : ಹೊಸದುರ್ಗದಲ್ಲಿ ವಿಜಯೇಂದ್ರ ಸ್ಪರ್ಧೆ?

12:23 AM May 11, 2022 | Team Udayavani |

ಚಿತ್ರದುರ್ಗ: ಕೈ ತಪ್ಪಿರುವ ಚಿತ್ರದುರ್ಗ ಜಿಲ್ಲೆಯ ರಾಜಕಾರಣವನ್ನು ಮತ್ತೆ ವಶಕ್ಕೆ ಪಡೆಯುವ ತವಕ ಕಾಂಗ್ರೆಸ್‌ಗೆ. ಕಾಂಗ್ರೆಸ್‌ ಪಾಳಯಕ್ಕೆ ಕೊಟ್ಟ ಹೊಡೆತದ ಬಿಗಿಪಟ್ಟು ತಪ್ಪದಂತೆ ನೋಡಿಕೊಳ್ಳುವ ಸವಾಲು ಬಿಜೆಪಿಗೆ. ಮಧ್ಯ ಕರ್ನಾಟಕದಲ್ಲಿ ನೆಲೆ ವಿಸ್ತರಿಸಿಕೊಳ್ಳುಬೇಕಾದ ಅನಿವಾರ್ಯತೆ ಜೆಡಿಎಸ್‌ಗೆ. ಇದು ಮಧ್ಯ ಕರ್ನಾಟಕದ ಹೆಬ್ಟಾಗಿಲು ಚಿತ್ರದುರ್ಗ ಜಿಲ್ಲೆಯ ಸದ್ಯದ ರಾಜಕೀಯ ಚಿತ್ರಣ.

Advertisement

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಮೊಳಕಾಲ್ಮೂರು ಶಾಸಕ, ಸಚಿವ ಬಿ.ಶ್ರೀರಾಮುಲು ಒಂದು ವೇಳೆ ಕ್ಷೇತ್ರ ಬದಲಿಸಿ ಬಳ್ಳಾರಿಗೆ ತೆರಳಿದರೆ ಮೊಳಕಾಲ್ಮೂರಿಗೆ ಕೂಡ್ಲಿಗಿ ಶಾಸಕ ಎನ್‌.ವೈ. ಗೋಪಾಲಕೃಷ್ಣ ಬರಬಹುದು ಎನ್ನುವ ಲೆಕ್ಕಾಚಾರ ನಡೆದಿದೆ. ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಎಸ್‌.ತಿಪ್ಪೇಸ್ವಾಮಿ, ಜಿಪಂ ಮಾಜಿ ಸದಸ್ಯ ಡಾ| ಬಿ. ಯೋಗೀಶ್‌ಬಾಬು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಚಿತ್ರದುರ್ಗ: ಬಿಜೆಪಿ ಹಿರಿಯ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಕ್ಷೇತ್ರದ ಶಾಸಕರು. ವಯಸ್ಸಿನ ಮಿತಿ ಇಲ್ಲವಾದಲ್ಲಿ ಬಹುತೇಕ ಮತ್ತೆ ಟಿಕೆಟ್‌ ಅವರಿಗೇ ಸಿಗಬಹುದು ಎನ್ನಲಾಗುತ್ತಿದೆ. ಮತ್ತೂಂದೆಡೆ ತಿಪ್ಪಾ ರೆಡ್ಡಿ ಅವರ ಪುತ್ರ ಡಾ| ಸಿದ್ಧಾರ್ಥ್ ಹೆಸರು ಚಿತ್ರದುರ್ಗ ಹಾಗೂ ಹಿರಿಯೂರು ಎರಡೂ ಕ್ಷೇತ್ರಗಳಲ್ಲಿ ಚಾಲ್ತಿಯಲ್ಲಿದೆ. ದಾವಣಗೆರೆ ಸಂಸದ ಡಾ| ಜಿ.ಎಂ.ಸಿದ್ದೇಶ್ವರ ಅವರ ಪುತ್ರ ಭೀಮಸಮುದ್ರದ ಜಿ.ಎಸ್‌.ಅನಿತ್‌ ಹೆಸರು ಕೂಡ ಚಾಲ್ತಿಯಲ್ಲಿದೆ. ಕಾಂಗ್ರೆಸ್‌ ಪಕ್ಷದಿಂದ ಕಳೆದ ಬಾರಿ ಪರಾಭವಗೊಂಡಿದ್ದ ಹನುಮಲಿ ಷಣ್ಮುಖಪ್ಪ ಹಾಗೂ ಮಾಜಿ ಎಂಎಲ್ಸಿ ರಘು ಆಚಾರ್‌ ಟಿಕೆಟ್‌ ಕೇಳುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಕೂಡ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಂದು ಹೇಳಲಾಗುತ್ತಿದೆ.

ಹೊಳಲ್ಕೆರೆ: ಇಲ್ಲಿ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಮತ್ತೆ ಅಖಾಡಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಎಚ್‌.ಆಂಜನೇಯ ಎದುರಾಳಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಹಲವು ಹೊಸ ಮುಖಗಳು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿವೆ.

ಹಿರಿಯೂರು: ಹಿರಿಯೂರು ವಿಧಾನಸಭಾ ಕ್ಷೇತ್ರವನ್ನು ಮರಳಿ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ ಕಣ್ಣಿಟ್ಟಿದೆ. ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದಲ್ಲಿ ಹಿರಿಯೂರು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹಿಡಿತ ಸಾಧಿಸಿದ್ದು, ಮಾಜಿ ಸಚಿವ ಡಿ.ಸುಧಾಕರ್‌ ಕೂಡ ಪಟ್ಟು ಸಡಿಲಿಸುತ್ತಿಲ್ಲ. ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಈ ನಡುವೆ ಎಂಎಲ್ಸಿ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್‌ ಮುಖಂಡ ಬಿ. ಸೋಮಶೇಖರ್‌ ಇಲ್ಲಿ ಕಾಣಿಸಿಕೊಂಡಿರುವುದು ಸುಧಾಕರ್‌ ಬೆಂಬಲಿಗರ ಅಸಹನೆಗೆ ಕಾರಣವಾಗಿದೆ.

Advertisement

ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ಹಿಡಿತದಲ್ಲಿದ್ದು, ಟಿ. ರಘುಮೂರ್ತಿ ಇಲ್ಲಿನ ಶಾಸಕರು. ಬಿಜೆಪಿಗೆ ಇಲ್ಲಿ ಅಭ್ಯರ್ಥಿ ಯಾರು ಎನ್ನುವ ಪರಿಸ್ಥಿತಿಯಿದೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪ ರ್ಧಿಸಿ ಪರಾಭವಗೊಂಡ ರವೀಶ್‌ ಬಿಜೆಪಿಗೆ ಬರುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜತೆಗೆ ಸಂಘ ಪರಿವಾರದ ಜತೆ ನಂಟು ಹೊಂದಿರುವ ಬಾಳೆಮಂಡಿ ರಾಮದಾಸ್‌ ಕೂಡ ಆಕಾಂಕ್ಷಿ ಎನ್ನಲಾಗಿದೆ.

ಹೊಸದುರ್ಗದಲ್ಲಿ ಬಹಿರಂಗ ಟಾಕ್‌ವಾರ್‌: ಹೊಸದುರ್ಗ ಕ್ಷೇತ್ರದಲ್ಲಿ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್‌ ಹಾಗೂ ಬಿಜೆಪಿ ಮುಖಂಡ, ಖನಿಜ ನಿಗಮದ ಅಧ್ಯಕ್ಷ ಎಸ್‌. ಲಿಂಗಮೂರ್ತಿ ಇಬ್ಬರೂ ಬಿಜೆಪಿ ಟಿಕೆಟ್‌ಗೆ ಫೈಟ್‌ ಮಾಡುತ್ತಿದ್ದಾರೆ. ಪಕ್ಷದೊಳಗೆ ಎರಡು ಬಣಗಳಾಗಿದ್ದು, ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಅವರೇ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಎರಡೂ ಪಕ್ಷಗಳಿಗೂ ನುಂಗಲಾರದ ತುತ್ತು ಎನ್ನುವಂತೆ ಆಕಾಂಕ್ಷಿಗಳ ದಂಡು ಓಡಾಡುತ್ತಿದೆ. ಇದೆಲ್ಲದರ ನಡುವೆ ಬಿಎಸ್‌ವೈ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ಪರ್ಧಿಸಲು ತೆರೆಮರೆ ಸಿದ್ಧತೆ ನಡೆದಿದೆ ಎನ್ನಲಾಗಿದೆ.

– ತಿಪ್ಪೇಸ್ವಾಮಿ ನಾಕೀಕೆರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next