Advertisement

ಹೊರ್ತಿ ರೇವಣಸಿದ್ದೇಶ್ವರ ನೀರಾವರಿಗೆ ಸರ್ಕಾರದ ಅಸ್ತು: ವಿಜಯಪುರ ರೈತರಿಂದ ಕೃತಜ್ಞತೆ

11:24 AM Aug 26, 2022 | Team Udayavani |

ವಿಜಯಪುರ: ಬರದ ನಾಡು ವಿಜಯಪುರ ಜಿಲ್ಲೆಯ ನೀರಾವರಿ ವಂಚಿತ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡಿದ್ದಕ್ಕೆ ರೈತರು ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಸದರಿ ನೀರಾವರಿ ಯೋಜನೆ ಹೋರಾಟಗಾರರು ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಕುಡಿಯುವ ನೀರಿಗೂ ತತ್ವಾರ ಇರುವ ನಮ್ಮ ಪ್ರದೇಶಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನೀರಾವರಿ ಕಲ್ಪಿಸಬೇಕಿತ್ತು. ಇದಕ್ಕಾಗಿ ಏತ ನೀರಾವರಿ ಯೋಜನೆ ರೂಪಿಸಿ ಎಂದು ಮೂರು ದಶಕಗಳಿಂದ ಹೋರಾಡುತ್ತಲೇ ಬಂದಿದ್ದೇವೆ. 2007 ರಲ್ಲಿ ಹೊರ್ತಿ ಗ್ರಾಮದಲ್ಲಿ ಅಹರ್ನಿಶಿ ಹೋರಾಟ ನಡೆಸಿದ್ದೆವು ಎಂದು ಯೋಜನೆ ಅನುಷ್ಠಾನದ ಹೋರಾಟಗಾರ ಹಾಗೂ ಭಾರತೀಯ ಕಿಸಾನ ಸಂಘದ ರಾಜ್ಯ ಮುಖಂಡ ಗುರುನಾಥ ಬಗಲಿ, ಅಣ್ಣಪ್ಪ ಖೈನೂರ ಸದರಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ತಾವು ಮಾಡಿದ ಹೋರಾಟವನ್ನು ವಿವರಿಸಿದರು.

ಇಂಡಿ, ವಿಜಯಪುರ, ಚಡಚಣ ತಾಲೂಕಿನ 55 ಹಳ್ಳಿಗಳ ನೀರಾವರಿ ಸೌಲಭ್ಯ ಕಲ್ಪಿಸುವ 2638 ಕೋಟಿ ರೂ. ವೆಚ್ಚದ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಕಲ್ಪಿಸುವ ಮೂಲಕ ಬಂಜರು ನೆಲವನ್ನು ನಂದನವನ ಮಾಡುವ ಕನಸು ನನಸಾಗಿಸುವ ಕಾಲ ಬಂದಿದೆ ಎಂದರು.

ಇದನ್ನೂ ಓದಿ : ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ : ಮೂರು ಮಕ್ಕಳು ಸೇರಿ ಐದು ಮಂದಿ ಸಾವು

Advertisement

30 ವರ್ಷದ ಹೋರಾಟಕ್ಕೆ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ತವರು ಜಿಲ್ಲೆಗೆ ಮಹತ್ವಾಕಾಂಕ್ಷೆಯ ಯೋಜನೆಗೆ ಕೊಡುಗೆ ನೀಡಿದ್ದಾರೆ ಎಂದು ಅಭಿನಂದಿಸುವುದಾಗಿ ಹೇಳಿದರು.

ಸದರಿ ಯೋಜನೆ ಅನುಷ್ಠಾನದಿಂದ ಸಾವಿರಾರು ಅಡಿ ಆಳ ಕೊಳವೆ ಬಾವಿ ಕೊರೆದರೂ ಬೊಗಸೆ ನೀರು ಸಿಗುತ್ತಿರಲಿಲ್ಲ. ಪ್ರತಿ ರೈತರೂ ಹತ್ತಾರು ಕೊಳವೆ ಬಾವಿ ಕೊರೆಸಿ, ಲಕ್ಷ ಲಕ್ಷ ರೂ. ಸಾಲಗಾರರಾಗಿದ್ದರು. ಇದೀಗ ಅಂಥ ದುಸ್ಥಿತಿಗೆ ತೆರೆ ಬೀಳಲಿದೆ ಎಂದರು.

ಭಾರತೀಯ ಕಿಸಾನ ಸಂಘದ ರಾಜ್ಯಾಧ್ಯಕ್ಷ ಭೀಮಸೇನ ಕೋಕರೆ, ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ, ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next