“ಪುರುಷನಿಗಿಂತ ಮಹಿಳೆಯೇನೂ ಕಮ್ಮಿಯಿಲ್ಲ’ ಎಂದು ಹೇಳುವುದನ್ನು ಕೇಳಿರಬಹುದು, ಇಲ್ಲವೇ ಓದಿರಬಹುದು. ಇದೇ ಚರ್ಚೆ ಏನಾದರೂ ಕುದುರೆಗಳ ನಡುವೆ ಏರ್ಪಟ್ಟರೆ ಗೆಲ್ಲುವುದು ಗಂಡು ಕುದುರೆಗಳೇ. ಈ ಮಾತು ಕೇಳಿ ಸ್ತ್ರೀವಾದಿಗಳು ಕೋಪಗೊಳ್ಳಬಾರದು, ವೈಯಕ್ತಿಕವಾಗಿಯೂ ತೆಗೆದುಕೊಳ್ಳಬಾರದು. ಏಕೆಂದರೆ ಈ ಮಾತನ್ನು ತಾತ್ವಿಕವಾಗಿ ಅಥವಾ ವೈಚಾರಿಕ ನೆಲೆಗಟ್ಟಿನಲ್ಲಿ ಹೇಳಿದ್ದಲ್ಲ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಹೇಳಿದ್ದು. ವಿಷಯ ಏನಪ್ಪಾ ಎಂದರೆ ಹೆಣ್ಣು ಕುದುರೆಗಳಲ್ಲಿ ಗಂಡು ಕುದುರೆಗಳಿಗಿಂತ 4 ಹಲ್ಲುಗಳು ಕಡಿಮೆ ಇವೆ! ಗಂಡು ಕುದುರೆಯ ಬಾಯಲ್ಲಿ 40 ಹಲ್ಲುಗಳಿದ್ದರೆ, ಹೆಣ್ಣುಕುದುರೆಯ ಬಾಯಲ್ಲಿ 36 ಹಲ್ಲುಗಳು. ಜಾಹಿರಾತುಗಳಲ್ಲಿ ತೈಲ, ಶ್ಯಾಂಪೂ ಹಾಕಿ ಕೂದಲು ಹುಟ್ಟಿಸುವಂತೆ, ಹಲ್ಲುಜ್ಜುವ ಮೂಲಕ ಹಲ್ಲು ಹುಟ್ಟಿಸುವ ಯಾವ ಟೂತ್‌ಪೇಸ್ಟ್ ಜಾಹೀರಾತುಗಳೂ ಇನ್ನೂ ಬಂದಿಲ್ಲವಷ್ಟೆ!
Advertisement
ಕಪ್ಪೆಗಳಿಗೆ ಕಂಬಳಿ ಬೇಡರಾತ್ರಿ ಮನೆಯಿಂದ ಹೊರಬೀಳುವ ಮೊದಲು ನಾವು ಕಂಬಳಿಯನ್ನೋ, ಸ್ವೆಟರ್‌ಅನ್ನು ಮರೆಯದೇ ತೊಡುತ್ತೇವೆ. ದಿನದ ಸಮಯಕ್ಕಿಂತ ರಾತ್ರಿ ಸಮಯವೇ ಚಳಿ ಹೆಚ್ಚು. ಚಳಿಗಾಲದಲ್ಲಂತೂ ಬಟ್ಟೆ ಬಟ್ಟೆ ತೊಡುವುದರ ಮೂಲಕ ಚಳಿ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಕಪ್ಪೆಗಳಿಗೆ ಕಂಬಳಿಯ ಅಗತ್ಯ ಒದಗುವುದೇ ಇಲ್ಲ. ಅದರಲ್ಲೇನಿದೆ, ಯಾವ ಪ್ರಾಣಿಗಳು ತಾನೇ ಕಂಬಳಿ ಹೊದ್ದು ರಕ್ಷಣೆ ಪಡೆಯುತ್ತವೆ ಎಂದು ನೀವು ಕೇಳಬಹುದು. ಅದು ನಿಜ. ಆದರೆ ನಾವಿಲ್ಲಿ ಸಾಮಾನ್ಯ ಚಳಿಯ ಕುರಿತು ಮಾತನಾಡುತ್ತಿಲ್ಲ, ಅಸಾಮಾನ್ಯ ಚಳಿಯ ಬಗ್ಗೆ ಹೇಳುತ್ತಿರುರುವುದು. ಮೈನಸ್ ಗಡಿ ದಾಟುವ ತಾಪಮಾನದ ಪರಿಸರವನ್ನು ಕಲ್ಪಿಸಿಕೊಳ್ಳಿ. ಹಿಮ ಬೀಳುತ್ತಿರುವ ವಾತಾವರಣವನ್ನು ಕಲ್ಪಿಸಿಕೊಳ್ಳಿ. ಅಂಥ ವಾತಾವರಣದಲ್ಲಿ ನಾಯಿ, ಬೆಕ್ಕು, ಜಾನುವಾರುಗಳು ಮುಂತಾದ ಪ್ರಾಣಿಗಳು ಜೀವಿಸುವುದು ಕಷ್ಟ. ಅಂಥ ಪರಿಸರದಲ್ಲಿ ಕಪ್ಪೆಗಳು ಜೀವಿಸಬಲ್ಲವು. ಅವು ಮರಗಟ್ಟಿಹೋಗುತ್ತವೆ, ಹಾಗಿದ್ದೂ ಜೀವಂತದಿಂದಿರುತ್ತವೆ. ಕಪ್ಪೆಗಳು ಶೀತಲ ರಕ್ತದ ಪ್ರಾಣಿ. ಹೀಗಾಗಿ ಅತ್ಯಧಿಕ ಕನಿಷ್ಠ ತಾಪಮಾನವನ್ನು ಅವು ಸಹಿಸಿಕೊಳ್ಳಬಲ್ಲವು.