ವಾಟ್ಸಾಪ್, ಫೇಸ್‌ಬುಕ್ ಸಂದೇಶಗಳು ಕೂಡಾ ಈಗ ಸಿನಿಮಾಕ್ಕೆ ವಸ್ತುವಾಗುತ್ತಿವೆ. ಸಂದೇಶದ ಒನ್‌ಲೈನ್ ಇಟ್ಟುಕೊಂಡು ಇಡೀ ಸಿನಿಮಾ ಕಟ್ಟಿಕೊಡಲಾಗುತ್ತದೆ. “ಕುಲ್ಫಿ’ ಎಂಬ ಚಿತ್ರಕ್ಕೆ ವಾಟ್ಸಾಪ್ ಸಂದೇಶವೇ ಪ್ರೇರಣೆ ಎಂದರೆ ನೀವು ನಂಬಲೇಬೇಕು. ಈ ಚಿತ್ರವನ್ನು ಮಂಜು ಹಾಸನ್ ನಿರ್ದೇಶಿಸಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಮಂಜು ಅವರಿಗೆ ಅವರ ಗೆಳೆಯ ವಾಟ್ಸಾಪ್‌ನಲ್ಲಿ ಮೆಸೇಜ್‌ವೊಂದನ್ನು ಕಳುಹಿಸಿದರಂತೆ.
ಆ ಮೆಸೇಜ್‌ನಲ್ಲಿದ್ದ ಅಂಶ, ಅವರಿಗೆ ತುಂಬಾ ಇಷ್ಟವಾಗಿ ಅದಕ್ಕೊಂದು ಕಥೆ ಮಾಡಿ ಈಗ ಸಿನಿಮಾ ಮಾಡಿಬಿಟ್ಟಿದ್ದಾರೆ. ಅಷ್ಟಕ್ಕೂ ಆ ಅಂಶವೇನು ಎಂದು ನೀವು ಕೇಳಬಹುದು. “ಹೆಣ್ಣು ಮಕ್ಕಳಿಗೆ ಗೌರವ ಕೊಡಿ. ಗೌರವ ಕೊಡದೇ ಹೋದರೆ ಮುಂದೆ ಶಿಕ್ಷೆ ತಪ್ಪಿದ್ದಲ್ಲ’ ಎಂಬುದು. ಈಗ ಅದೇ ಕಾನ್ಸೆಪ್ಟ್ನಡಿ “ಕುಲ್ಫಿ’ ಕಟ್ಟಿಕೊಟ್ಟಿದ್ದಾರೆ. “ಚಿತ್ರ ಮೂವರು ಹುಡುಗರ ಹಾಗೂ ಒಬ್ಬ ಹುಡುಗಿಯ ಸುತ್ತ ಸುತ್ತಲಿದೆ.
ಮೂವರು ಯುವಕರ ಕುಡಿತದ ಚಟದಿಂದ ಒಂದು ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವಂತಾಗುತ್ತದೆ. ಆ ಸಾವಿಗೆ ಸೇಡು ತೀರಿಸಿಕೊಳ್ಳುವ ಅಂಶದೊಂದಿಗೆ ಸಿನಿಮಾ ಸಾಗುತ್ತದೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡುತ್ತಾರೆ ಮಂಜು ಹಾಸನ್. ಮಂಜು ಈ ಹಿಂದೆ ನಿರ್ದೇಶಕ ಮೋಹನ್ ಅವರ ಜೊತೆ ಸಹಾಯಕರಾಗಿ ದುಡಿದಿದ್ದಾರೆ. ಅಂದಹಾಗೆ, ಮುನಿಸ್ವಾಮಿ ಎನ್ನುವವರು ತಮ್ಮ ಗೆಳೆಯರಾದ ಚೌಡಪ್ಪ ಹಾಗೂ ಪ್ರಸನ್ನ ಅವರೊಂದಿಗೆ ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ.
ಚಿತ್ರದಲ್ಲಿ ಗಿರೀಶ್‌ಗೌಡ, ದಿಲೀಪ್ ಹಾಗೂ ಲಾರೆನ್ಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿಲೋನಿ ಈ ಚಿತ್ರದ ನಾಯಕ. ಈಗಾಗಲೇ ತುಳು ಹಾಗೂ ಕೊಂಕಣಿ ಚಿತ್ರಗಳಲ್ಲಿ ನಟಿಸಿದ್ದಾರೆ. ನಾನಾ ಶೇಡ್ ಇರುವ ಪಾತ್ರ ಇದಾಗಿರುವುದರಿಂದ ನಟನೆಗೆ ಅವಕಾಶವಿದೆ ಎಂದು ಖುಷಿಯಾದರು ಸಿಲೋನಿ. ಚಿತ್ರಕ್ಕೆ ಅಭಿಷೇಕ್.ಬಿ.ರಘುನಾಥ್ ಸಂಗೀತ ನೀಡಿದ್ದಾರೆ. ಮಂಜು ಹಾಸನ್ ನಿರ್ದೇಶನದ ಮೊದಲ ಚಿತ್ರದ ಟ್ರೇಲರ್ ಬಿಡುಗಡೆಗೆ ನಿರ್ದೇಶಕರಾದ ಮೋಹನ್ ಹಾಗೂ ನಾಗರಾಜ ಕೋಟೆ ಆಗಮಿಸಿದ್ದರು. ಮಂಜು ಅವರ ಕೆಲಸದ ಬಗೆಗಿನ ಶ್ರದ್ಧೆಯನ್ನು ಕೊಂಡಾಡಿದರು.