ಬೆಂಗಳೂರು: ನಗರದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮದ್ಯದ ಅಮಲಿನಲ್ಲಿ ಹೋಟೆಲ್ ಸಿಬ್ಬಂದಿ ಹಾಗೂ ಭಿಕ್ಷುಕನನ್ನು ಕೊಲೆ ಮಾಡಲಾಗಿದೆ.
ಮದ್ಯದ ಅಮಲಿನಲ್ಲಿ ಸಹೋದ್ಯೋಗಿಗಳೇ ಯುವಕನನ್ನು ದೊಣ್ಣೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಬೇಗೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಮೂಲದ ಆನಂದ್(30)ಕೊಲೆಯಾದವ. ಈ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆನಂದ್ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಬೇಗೂರಿನಲ್ಲಿರುವ ಹೋಟೆಲ್‌ವೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ.
ಈತ ವಾಸವಾಗಿದ್ದ ಕೋಣೆಯಲ್ಲೇ ಇತರೆ ಇಬ್ಬರು ಸಹೋದ್ಯೋಗಿಗಳು ಇದ್ದರು. ಗುರುವಾರ ರಾತ್ರಿ ಪಾರ್ಟಿ ಮಾಡಲು ಹುಳಿಮಾವು ಬಳಿಯ ಬೆಟ್ಟದ ಬಳಿ ಆನಂದ್‌ನನ್ನು ಆರೋಪಿಗಳು ಕರೆದೊಯ್ದಿದ್ದಾರೆ. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಮೂವರ ನಡುವೆ ಜಗಳ ನಡೆದಿದೆ. ಆಗ ಇಬ್ಬರು ಆರೋಪಿಗಳು ಆನಂದ್‌ಗೆ ದೊಣ್ಣೆಯಿಂದ ಹೊಡೆದು ಕೊಲೆಗೈದು ಪರಾರಿಯಾಗಿದ್ದಾರೆ.
ಭಿಕ್ಷುಕನ ಕೊಲೆ ಮಾಡಿದ್ದ ಇಬ್ಬರು ವಶ: ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ವೃದ್ಧ ಭಿಕ್ಷುಕಕನ್ನು ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರು ಹತ್ಯೆಗೈದಿರುವ ಘಟನೆ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೃತ್ಯ ಎಸಗಿದ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರನ್ನು ವಶಕ್ಕೆ ಪಡೆಯಲಾಗಿದೆ. ಬಾಣಸವಾಡಿ ಲಿಂಗರಾಜುಪುರ ಸಮೀಪದ ವೃದ್ಧ ಭಿಕ್ಷುಕ ಚಿಂದಿ ಆಯುತ್ತ, ಭಿಕ್ಷೆ ಬೇಡುತ್ತ ಜೀವನ ನಡೆಸುತ್ತಿದ್ದ. ಎಲ್ಲೆಂದರಲ್ಲಿ ಮಲಗುತ್ತಿದ್ದರು. ಖರ್ಚಿಗೆ ಆಗುವಷ್ಟು ಹಣ ಅವರ ಬಳಿ ಇರುತ್ತಿತ್ತು. ವೃದ್ಧ ಹಣ ಎಣಿಸುತ್ತಿದ್ದದ್ದನ್ನು ಬಾಲಕರು ಹಲವು ಬಾರಿ ನೋಡಿದ್ದರು. ಬುಧವಾರ ತಡರಾತ್ರಿ 2 ಗಂಟೆಗೆ ಮಲಗಿದ್ದ ವೃದ್ಧನ ಬಳಿ ಹೋಗಿದ್ದ ಬಾಲಕರು, ಮದ್ಯ ಕುಡಿಯಲು ಹಣ ಕೇಳಿದ್ದರು. ಆಗ ಹಣ ನೀಡಲು ವೃದ್ಧ ನಿರಾಕರಿಸಿದ್ದು, ಬಾಲಕರು, ವೃದ್ಧನ ತಲೆಗೆ ಕಲ್ಲುಗಳಿಂದ ಹೊಡೆದು ಹಣ ಕಸಿದುಕೊಂಡು ಪರಾರಿಯಾಗಿದ್ದರು.