ಹೆಬ್ರಿ: ಕಾರ್ಕಳ ತಾಲೂಕಿನ ಹೆಬ್ರಿಯ ಇತಿಹಾಸ ಪ್ರಸಿದ್ಧ ಶ್ರೀ ಅನಂತಪದ್ಮನಾಭ ದೇವಸ್ಥಾನದ ಅಷ್ಟಬಂಧ ಸಹಿತ ಶ್ರೀ ದೇವರ ಪುನಃ ಪ್ರತಿಷ್ಠೆ ಸಹಸ್ರ ಕಲಶ ಸಹಿತ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಮಹೋತ್ಸವದ ಅಂಗವಾಗಿ ಮಾ. 31ರಂದು ಹೆಬ್ರಿಯ ಶೀಲಾ ಸುಬೋಧ ಬಲ್ಲಾಳ್ ಸಭಾಭವನದಿಂದ ಹೊರಟು ಅನಂತಪದ್ಮನಾಭ ಕ್ಷೇತ್ರದ ವರೆಗೆ ನಡೆದ ವೈಭವೋಪೇತ ಹಸುರು ಹೊರೆಕಾಣಿಕೆ ಮೆರವಣಿಗೆ, ಬೃಹತ್ ಶೋಭಾಯಾತ್ರೆ ಸಂಪನ್ನಗೊಂಡಿತು.ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಸುಧಾಕರ ಹೆಗ್ಡೆ, ಉಪಾಧ್ಯಕ್ಷೆ ವೀಣಾ ವಿ. ಪ್ರಭು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ನಾಯಕ್, ಕ್ಷೇತ್ರೇತರ ತಾರಾನಾಥ ಬಲ್ಲಾಳ್, ಆರ್ಥಿಕ ಸಮಿತಿಯ ಸಂಚಾಲಕ ಎಚ್. ಸತೀಶ್ ಪೈ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಭಾಸ್ಕರ್ ಜೋಯಿಸ್, ಪ್ರಚಾರ ಹಾಗೂ ಸಂಪರ್ಕ ಸಮಿತಿಯ ಅಧ್ಯಕ್ಷ ಸೀತಾನದಿ ವಿಟuಲ ಶೆಟ್ಟಿ, ಆಡಳಿತಾಧಿಕಾರಿ ಗಣೇಶ್ ಪಿ, ಆರ್ಥಿಕ ಸಮಿತಿಯ ಅಧ್ಯಕ್ಷ ಪ್ರಸಾದ್ ಬಲ್ಲಾಳ್, ವ್ಯವಸ್ಥೆ ಹಾಗೂ ಕಾಮಗಾರಿ ಸಮಿತಿಯ ಅಧ್ಯಕ್ಷ ಪ್ರವೀಣ್ ಬಲ್ಲಾಳ್, ಮೆರವಣಿಗೆ ಸಮಿತಿಯ ಅಧ್ಯಕ್ಷ ದಿನೇಶ್ ಶೆಟ್ಟಿ, ಹೊರೆಕಾಣಿಕೆ ಸಮಿತಿಯ ಅಧ್ಯಕ್ಷ ಜನಾರ್ದನ ಮೊದಲಾದವರು ಉಪಸ್ಥಿತರಿದ್ದರು.
ಚಾರಾ, ಶಿವಪುರ,ಬೇಳಂಜೆ-ಕುಚ್ಚಾರು, ಮುದ್ರಾಡಿ ಪಂಚಾಯತ್‌ವಾರು ಹೊರೆಕಾಣಿಕೆ ಸಮಿತಿ ನೇತೃತ್ವದಲ್ಲಿ ಭಕ್ತಾಧಿಗಳು ಸಮರ್ಪಿಸುವ ಹಸುರು ಹೊರೆಕಾಣಿಕೆಗಳನ್ನು ಭವ್ಯ ಮೆರವಣಿಗೆ ಮೂಲಕ ಸಾಗಿಬಂದವು.ಆಕರ್ಷಕ ಬೃಹತ್ ಶೋಭಾ ಯಾತ್ರೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಭಜನ ತಂಡಗಳು, ಕೇರಳ ಚಂಡೆ, ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ನಾಸಿಕ್ ಬ್ಯಾಂಡ್, ಶಂಖನಾದ, ಕೊಂಬು, ಹುಲಿವೇಷ, ಹೋಳಿಕುಣಿತ, ಕೀಲುಕುದುರೆ, ಮುಖವಾಡ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಆಕರ್ಷಕ ಟ್ಯಾಬ್ಲೋಗಳು, ಬಾಗವತ ಗಣೇಶ್ ಹೆಬ್ರಿ ಅಭಿಮಾನಿ ಬಳಗದಿಂದ 25 ಕ್ವಿಂಟಲ್ ಅಕ್ಕಿಹೊತ್ತ ವಾಹನ,ಇತರ ಹೊರೆಕಾಣಿಕೆಗಳ ವಾಹನಗಳು, ಸುಡುಮದ್ದು ಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.
ಗಮನ ಸೆಳೆದ 1,000ಕ್ಕೂ ಮಿಕ್ಕಿ ಕುಂಭ ಕಲಶ
ಆಕರ್ಷಕ ಬೃಹತ್ ಶೋಭಾ ಯಾತ್ರೆಯಲ್ಲಿ ವಿವಿಧ ಬಣ್ಣದ ಸೀರೆಯುಟ್ಟ ಸುಮಾರು 1,000ಕ್ಕೂ ಮಿಕ್ಕಿ ಮಹಿಳೆಯರ ಪೂರ್ಣ ಕುಂಭ ಕಲಶ ಮೆರವಣಿಗೆಗೆ ವಿಶೇಷ ಮೆರುಗು ನೀಡುವುದರೊಂದಿಗೆ ಸೇರಿದ ಸಹಸ್ರ ಸಂಖ್ಯೆಯ ಜನರ ಗಮನ ಸೆಳೆಯಿತು.