Advertisement

ಈ ಬಾರಿಯೂ ಹೊರಟ್ಟಿ ದಾಖಲೆ ಗೆಲುವು: ಸಂಸದ ಉದಾಸಿ ವಿಶ್ವಾಸ

05:08 PM Jun 09, 2022 | Team Udayavani |

ಹಾವೇರಿ: ರಾಜ್ಯದ ಶೈಕ್ಷಣಿಕ ಕ್ಷೇತ್ರದ ಸುಧಾರಣೆಗೆ ಅದ್ವಿತೀಯ ಸಾಧನೆ ಮೆರೆದು ಶಿಕ್ಷಕರ ಆಶಾಕಿರಣವಾಗಿರುವ ಬಸವರಾಜ ಹೊರಟ್ಟಿಯವರು ಈ ಬಾರಿಯೂ ದಾಖಲೆಯ ಗೆಲುವು ಸಾಧಿಸಲಿದ್ದಾರೆಂದು ಸಂಸದ ಶಿವಕುಮಾರ ಉದಾಸಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಜಿಲ್ಲೆಯ ಹಾನಗಲ್‌ನ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಚುನಾವಣಾ ಪ್ರಚಾರಾರ್ಥ ಏರ್ಪಡಿಸಿದ್ದ “ಮತದಾರರೊಂದಿಗೆ ಮನದಾಳ ಮಾತು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್‌ ನಲ್ಲಿ ಶಿಕ್ಷಕರ ಪರವಾಗಿ ಗಟ್ಟಿ ಧ್ವನಿ ಎತ್ತಿ ಶೈಕ್ಷಣಿಕ ಸಮುದಾಯ ಹಲವಾರು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಮೂಲಕ ಶಿಕ್ಷಣ ಕ್ಷೇತ್ರದ ಸಂಜೀವಿನಿಯಾಗಿ ಕೆಲಸ ಮಾಡಿದ್ದಾರೆ. ಶಿಕ್ಷಕರ ಏಳ್ಗೆಗಾಗಿ ಹಗಲಿರುಳು ಶ್ರಮಿಸುವ ಅವರು ಇದೀಗ ಬಿಜೆಪಿ ಅಭ್ಯರ್ಥಿಯಾಗಿದ್ದು, ಈ ಬಾರಿ ಕನಿಷ್ಠ ಶೇ.80 ಮತ ಗಳಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ, ಶಿಕ್ಷಣ ರಂಗದ ಹಾಗೂ ಶಿಕ್ಷಕರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಟ್ಟಿದ್ದು, ಇನ್ನು ಬಾಕಿ ಇರುವ ನೂತನ ಪಿಂಚಣಿ ಯೋಜನೆ ರದ್ದತಿ, ಕಾಲ್ಪನಿಕ ವೇತನ ವರದಿ ಜಾರಿ ಅನುದಾನ ರಹಿತ ಶಿಕ್ಷಕರಿಗೆ ಸೇವಾ ಭದ್ರತೆ, ಅನುದಾನರಹಿತ ಶಿಕ್ಷಣ ಸಂಸ್ಥೆಗಳನ್ನು ವೇತನಾನುದಾನಕ್ಕೊಳಪಡಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಸೇರಿದಂತೆ ಸಂಬಂಧಪಟ್ಟ ಎಲ್ಲರೊಂದಿಗೆ ಚರ್ಚಿಸಲಾಗುವುದು ಎಂದರು.

ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್‌.ಪಿ. ಬಣಕಾರ ಮಾತನಾಡಿ, ಹೊರಟ್ಟಿಯವರೇ ಸೂಕ್ತ ಪ್ರತಿನಿಧಿ ಎಂದು ಈಗಾಗಲೇ ಶಿಕ್ಷಕರು ಮನಗಂಡಿದ್ದು, ಅವರ ಪರವಾಗಿ ಮತ ಚಲಾಯಿಸಲು ಈಗಾಗಲೇ ತೀರ್ಮಾನಿಸಿದ್ದಾರೆಂದರು.

ಶಿಕ್ಷಕರೇ ಒತ್ತಾಸೆ ಮಾಡಿ ನಿಲ್ಲಿಸಿದ ಅಭ್ಯರ್ಥಿ ಹೊರಟ್ಟಿಯವರಾಗಿದ್ದು, ಸದಾ ಕ್ರಿಯಾಶೀಲರಾಗಿರುವ ಅವರು ಶಿಕ್ಷಕರ ಹಿತಚಿಂತನೆ ಮಾಡುವ ಜನಪ್ರತಿನಿಧಿಯಾಗಿದ್ದಾರೆ. ಅತ್ಯಂತ ಹೆಚ್ಚಿನ ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಅವರನ್ನು ಆಯ್ಕೆ ಮಾಡಲು ಎಲ್ಲ ಶಿಕ್ಷಕರು ಶ್ರಮಿಸಬೇಕೆಂದು ಬಣಕಾರ ಮನವಿ ಮಾಡಿದರು.

Advertisement

ಮಾಜಿ ಶಾಸಕ ಶಿವರಾಜ ಸಜ್ಜನರ, ಬಿಜೆಪಿ ಮುಖಂಡ ಬೋಜರಾಜ ಕರೂದಿ, ಹಾನಗಲ್‌ ತಾಲೂಕಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಕುಂಕೂರ ಇತರರಿದ್ದರು.

ಸವಣೂರಲ್ಲೂ ಪ್ರಚಾರ: ನಂತರ ಸವಣೂರಿನ ಅಡಿವಿಸ್ವಾಮಿ ಕಲ್ಯಾಣ ಮಂಟಪದಲ್ಲಿ ಶಿಕ್ಷಕರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಶಿವಕುಮಾರ ಉದಾಸಿ ಬಸವರಾಜ ಹೊರಟ್ಟಿಯವರ ಪರ ಮತಯಾಚಿಸಿದರು.

ಅಭ್ಯರ್ಥಿ ಬಸವರಾಜ ಹೊರಟ್ಟಿ , ಎಚ್‌.ಪಿ. ಬಣಕಾರ, ಎಂ.ಕೆ. ಪಾಟೀಲ ಮತ್ತಿತರರು ಉಪಸ್ಥಿತಿರಿದ್ದರು. ಬಳಿಕ ಶಿಗ್ಗಾವಿ ಮಾಮಲೇದೇಸಾಯಿ ಪಪೂ ಕಾಲೇಜಿನಲ್ಲಿ ಶಿಕ್ಷಕರೊಂದಿಗೆ ಸಭೆ ನಡೆಸಿ ಮತಯಾಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next