Advertisement

ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಬಿತ್ತು ಅಧಿಕೃತ ಮುದ್ರೆ

01:37 PM May 04, 2022 | Team Udayavani |

ಹುಬ್ಬಳ್ಳಿ: ಬಸವ ಜಯಂತಿ, ಅಕ್ಷಯ ತೃತೀಯ ದಿನವೇ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರ ಬಿಜೆಪಿ ಸೇರ್ಪಡೆಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.

Advertisement

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಮಂಗಳವಾರ ಬೆಂಗಳೂರಿನಲ್ಲಿ ಭೇಟಿ ಮಾಡಿರುವ ಹೊರಟ್ಟಿಯವರು ಮಹತ್ವದ ಮಾತುಕತೆ ನಡೆಸಿದ್ದು, ಮೇ 11ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೆ ಮುಂದಾಗುವ ಮೂಲಕ ಸುಮಾರು ನಾಲ್ಕು ದಶಕಗಳಿಗಿಂತ ಹೆಚ್ಚಿನ ತಮ್ಮ ಜನತಾ ಪರಿವಾರದ ನಂಟಿಗೆ ಇತಿಶ್ರೀ ಹಾಡಲಿದ್ದಾರೆ.

ಕಳೆದ ಹಲವು ತಿಂಗಳಿಂದ ಹೊರಟ್ಟಿ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಅನಿಸಿಕೆಗಳಿಗೆ ಪುಷ್ಟಿ ಎನ್ನುವಂತೆ ಕೆಲ ದಿನಗಳ ಹಿಂದೆಯಷ್ಟೇ ಹೊರಟ್ಟಿಯವರು ಬಿಜೆಪಿ ಸೇರ³ಡೆ ನಿಜ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.

ಇದೀಗ ಅಮಿತ್‌ ಶಾ ಅವರೊಂದಿಗಿನ ಚರ್ಚೆಯೊಂದಿಗೆ ಬಿಜೆಪಿ ಸೇರ್ಪಡೆಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಅಲ್ಲಿಗೆ ಜೂನ್‌ನಲ್ಲಿ ನಡೆಯುವ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಹೊರಟ್ಟಿ ಅವರು ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾದಂತಾಗಿದೆ. ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಇತರೆ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಘೋಷಿಸಿತ್ತಾದರೂ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ.

ವಿಧಾನ ಪರಿಷತ್ತು ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅವರು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದರು. ಸಾಲದು ಎನ್ನುವಂತೆ ಅವರು ತಾವು ಬಿಜೆಪಿ ನಿಯೋಜಿತ ಅಭ್ಯರ್ಥಿ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿಯೂ ಒಂದು ಸುತ್ತಿನ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದರು. ಆದರೆ, ಬಿಜೆಪಿ ವರಿಷ್ಠರು ಮಾತ್ರ ಮೌನಕ್ಕೆ ಜಾರಿದ್ದರು. ಹೊರಟ್ಟಿಯವರು ಬಿಜೆಪಿ ಸೇರ್ಪಡೆ ಖಚಿತ ಎಂಬ ಕಾರಣದಿಂದಲೇ ಈ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಹೇಳಲಾಗುತ್ತಿದೆ.

Advertisement

ಸಭಾಪತಿಗೆ ಗ್ರೀನ್‌ ಸಿಗ್ನಲ್‌? ಹೊರಟ್ಟಿ ಅವರ ಬಿಜೆಪಿ ಸೇರ್ಪಡೆ ವಿಷಯವಾಗಿ ಪಕ್ಷದ ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಸುತ್ತಿನ ಚರ್ಚೆ ಆಗಿದೆ. ಪಕ್ಷದ ವರಿಷ್ಠರಿಂದ ಹಸಿರು ನಿಶಾನೆ ದೊರತ ನಂತರವೇ ಹೊರಟ್ಟಿ ಅವರು ಮೊದಲ ಬಾರಿಗೆ ಬಿಜೆಪಿ ಸೇರುವುದು ನಿಜ, ಆ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದ್ದು, ಸಭಾಪತಿ ಸ್ಥಾನದಲ್ಲಿರುವುದರಿಂದ ಅಧಿಕೃತವಾಗಿ ಹೇಳಿಕೆ ನೀಡುವುದಿಲ್ಲ. ಚುನಾವಣೆ ವೇಳೆ ಬಹಿರಂಗ ಪಡಿಸುವೆ ಎಂದಿದ್ದರು.

ಮಂಗಳವಾರ ಬೆಂಗಳೂರಿನಲ್ಲಿ ಅಮಿತ್‌ ಶಾ ಅವರನ್ನು ಮುಖ್ಯಮಂತ್ರಿ, ಕೇಂದ್ರ ಸಚಿವರು, ಪಕ್ಷದ ವಿವಿಧ ನಾಯಕರ ಸಮ್ಮುಖದಲ್ಲಿ ಭೇಟಿ ಮಾಡಿದ ಹೊರಟ್ಟಿ ಅವರು ಚರ್ಚೆ ನಡೆಸಿದ್ದು, ಶಾ ಅವರು ಹೊರಟ್ಟಿ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದರು.

ಜತೆಗೆ ಸುಮಾರು 42 ವರ್ಷಗಳ ಕಾಲ ವಿಧಾನ ಪರಿಷತ್ತು ಸದಸ್ಯ, ಸಚಿವ ಹಾಗೂ ಸಭಾಪತಿಯಾಗಿ ಸೇವೆ ಸಲ್ಲಿಸಿದ ಹೊರಟ್ಟಿ ಅವರ ಸುದೀರ್ಘ‌ ರಾಜಕೀಯ ಪಯಣ ಹಾಗೂ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನಲಾಗಿದೆ. ಬಿಜೆಪಿಯ ಕೆಲ ರಾಷ್ಟ್ರೀಯ ನಾಯಕರು ಸುಮಾರು ನಾಲ್ಕುವರೆ ದಶಕಗಳಿಂದ ಜನಪ್ರತಿನಿಧಿಯಾಗಿದ್ದರೂ ಹಗರಣ ಮುಕ್ತ, ಕಳಂಕ ರಹಿತ ರಾಜಕಾರಣಿಯಾಗಿ ಹೊರಹೊಮ್ಮಿರುವ ಹೊರಟ್ಟಿ ಅವರ ವ್ಯಕ್ತಿತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಚುನಾವಣೆಯಲ್ಲಿ ಹೊರಟ್ಟಿಯವರು ಗೆಲುವು ಸಾಧಿಸಿದರೆ ಅವರನ್ನೇ ಮತ್ತೆ ವಿಧಾನ ಪರಿಷತ್ತು ಸಭಾಪತಿಯಾಗಿ ಮುಂದುವರಿಸುವ ಬಗ್ಗೆ ಬಿಜೆಪಿ ವರಿಷ್ಠರಿಂದ ಗ್ರೀನ್‌ಸಿಗ್ನಲ್‌ ದೊರೆತಿದೆ. ಪಕ್ಷ ಸೇರುವುದಕ್ಕೆ ತಮ್ಮನ್ನು ಸಭಾಪತಿ ಸ್ಥಾನದಲ್ಲಿ ಮುಂದುವರಿಸಬೇಕು ಎಂಬ ಬೇಡಿಕೆಯನ್ನು ಹೊರಟ್ಟಿಯವರು ಬಿಜೆಪಿ ವರಿಷ್ಠರ ಮುಂದೆ ಇರಿಸಿದ್ದರು. ಹೊರಟ್ಟಿಯವರಿಗೆ ಬಿಜೆಪಿ ಟಿಕೆಟ್‌ ನೀಡುವುದಕ್ಕೆ 75 ವರ್ಷ ವಯೋಮಿತಿ ಅಡ್ಡಿಯಾಗುತ್ತದೆ ಎಂಬುದು ಕೆಲವರ ಅನಿಸಿಕೆಯಾಗಿತ್ತಾದರೂ, ಬಿಜೆಪಿ ವರಿಷ್ಠರಿಂದ ಇದಕ್ಕೂ ಅಡ್ಡಿ ಇಲ್ಲ ಎಂಬ ಸಂದೇಶ ದೊರೆತಿದೆ ಎಂದು ಹೇಳಲಾಗುತ್ತಿದೆ.

ಸುದೀರ್ಘ‌ ನಂಟಿಗೆ ಗುಡ್‌ಬೈ: ಹೊರಟ್ಟಿ ಅವರು 1980ರಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್ತಿಗೆ ಸ್ಪರ್ಧಿಸಿ ಮೊದಲ ಯತ್ನದಲ್ಲೇ ಗೆಲುವು ಸಾಧಿಸುವ ಮೂಲಕ ಪಕ್ಷೇತರ ಸದಸ್ಯರಾಗಿ ವಿಧಾನ ಪರಿಷತ್ತು ಪ್ರವೇಶಿಸಿದ್ದರು. ನಂತರ ರಾಮಕೃಷ್ಣ ಹೆಗಡೆ ಅವರ ಪ್ರಭಾವಕ್ಕೊಳಗಾಗಿ ಜನತಾ ಪಕ್ಷ ಸೇರಿದ್ದರು. ಅಲ್ಲಿಂದ ಇಲ್ಲಿವರೆಗೆ ಅವರು ಜನತಾ ಪರಿವಾರದ ನಂಟು ಬಿಟ್ಟಿರಲಿಲ್ಲ. ಒಂದು ರೀತಿ ಅವರದ್ದು ವ್ಯಕ್ತಿನಿಷ್ಠೆ ರಾಜಕೀಯ ಎಂದರೆ ತಪ್ಪಾಗಲಾರದು. ರಾಮಕೃಷ್ಣ ಹೆಗಡೆಯವರು ಸಕ್ರಿಯ ರಾಜಕಾರಣದಲ್ಲಿ ಇರುವವರೆಗೂ ಅವರ ಜತೆಯಲ್ಲಿಯೇ ಗುರುತಿಸಿಕೊಂಡಿದ್ದರು. ಜನತಾ ಪರಿವಾರದಲ್ಲಿ ಒಡಕಾದಾಗಲೂ ಹೆಗಡೆ ಬೆಂಬಲಿಗರಾಗಿಯೇ ಮುಂದುವರಿದಿದ್ದರು. ಹೆಗಡೆಯವರ ನಿಧನ ನಂತರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೊಂದಿಗೆ ಗುರುತಿಸಿಕೊಂಡು ಜೆಡಿಎಸ್‌ ಸೇರಿದವರು.

ಸಭಾಪತಿ ಸ್ಥಾನ ಅಲಂಕರಿಸುವವರೆಗೂ ಜೆಡಿಎಸ್‌ ಸಕ್ರಿಯ ನಾಯಕರಾಗಿದ್ದರು. ಇದೀಗ ಬಿಜೆಪಿ ಕಡೆ ವಾಲುವ ಮೂಲಕ ಸುಮಾರು ನಾಲ್ಕು ದಶಕಗಳ ಜನತಾ ಪರಿವಾರದ ನಂಟಿಗೆ ಗುಡ್‌ಬೈ ಹೇಳಲು ಮುಂದಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ನ ಹಿರಿಯ ನಾಯಕರಾಗಿ ಪಕ್ಷದ ಕೊಂಡಿಯಾಗಿದ್ದ ಹೊರಟ್ಟಿಯವರು ಇದೀಗ ಪಕ್ಷದ ಕೊಂಡಿ ಕಳಚಿಕೊಂಡು, ಬಿಜೆಪಿ ಸೇರ್ಪಡೆಗೆ ಒಲವು ತೋರಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆಲುವಿನ ಮೂಲಕ ರಾಷ್ಟ್ರಮಟ್ಟದಲ್ಲಿ ದಾಖಲೆ ಮಾಡಿರುವ ಹೊರಟ್ಟಿ ಅವರು ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮತ್ತೂಂದು ಮಹತ್ವದ ದಾಖಲೆ ಆಗಲಿದೆ. ಹೇಗಾದರೂ ಮಾಡಿ ಪಶ್ಚಿಮ ಪದವೀಧರ ಕ್ಷೇತ್ರದ ಮಾದರಿಯಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿಯೂ ತಮ್ಮ ಅಧಿಪತ್ಯ ಸ್ಥಾಪಿಸಬೇಕೆಂಬ ಬಿಜೆಪಿಯ ಹಲವು ದಶಕಗಳ ಕನಸು ನನಸಾದಂತಾಗಲಿದೆ. ಜತೆಗೆ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ನಾಯಕರೊಬ್ಬರ ಸೇರ³ಡೆ ಆದಂತಾಗಲಿದೆ.

ಬಿಜೆಪಿ ಸೇರ್ಪಡೆ ಇಂಗಿತವನ್ನು ಈಗಾಗಲೇ ಬಹಿರಂಗಪಡಿಸಿದ್ದೇನೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಬೆಂಗಳೂರಿನಲ್ಲಿ ಮಂಗಳವಾರ ಭೇಟಿಯಾಗಿ ಚರ್ಚಿಸಿದ್ದೇನೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸೇರಿದಂತೆ ಅನೇಕ ಸಚಿವರು, ನಾಯಕರ ಸಮ್ಮುಖದಲ್ಲಿಯೇ ಭೇಟಿಯಾಗಿ ಚರ್ಚಿಸಿದ್ದೇನೆ. ಬಿಜೆಪಿ ಸೇರ³ಡೆ ಕುರಿತು ಅಂತಿಮ ನಿರ್ಧಾರ ಕೈಗೊಂಡಿದ್ದು, ಬಿಜೆಪಿ ವರಿಷ್ಠರಿಂದಲೂ ಒಪ್ಪಿಗೆ ದೊರೆತಿದೆ. ಮೇ 11ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವೆ. –ಬಸವರಾಜ ಹೊರಟ್ಟಿ, ವಿಧಾನ ಪರಿಷತ್ತು ಸಭಾಪತಿ

-ಅಮರೇಗೌಡ ಗೋನವಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next