ಹೈದರಾಬಾದ್(ತೆಲಂಗಾಣ): ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಅಭಿವೃದ್ಧಿ ಸರಕಾರಗಳಿಂದ ಮಾತ್ರ ಸಾಧ್ಯವಿಲ್ಲ. ಜನರಲ್ಲಿ ಮೂಡಿರುವ ಭಾಷಾ ಕೀಳರಿಮೆ ದೂರಾಗಿ ಮಾನಸಿಕ ಬದಲಾವಣೆಯಾದಾಗ ಮಾತ್ರ ಸುಧಾರಣೆ ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಹೈದ್ರಾಬಾದ(ತೆಲಂಗಾಣ) ಗಚ್ಚಿಬೌಲಿಯ ಮೌಲಾನಾ ಆಝಾದ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದಲ್ಲಿ ನಡೆದ ಅಖೀಲ ಭಾರತ ಹೊರನಾಡು ಕನ್ನಡ ಸಂಘಗಳ 7ನೇ ಮಹಾಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾಷೆಯನ್ನು ಒಂದೇ ಜಾತಿ ಮತ್ತು ಧರ್ಮಕ್ಕೆ ಸೀಮಿತಗೊಳಿಸದೆ ಜನರ ಭಾಷೆಗಳಾಗಿ ಪರಿವರ್ತನೆಯಾದಾಗ ಮಾತ್ರ ಭಾಷೆಗಳ ಬೆಳವಣಿಗೆ ಹಾಗೂ ಸಾಹಿತ್ಯ ಸಂಸ್ಕೃತಿ ವಿಚಾರಗಳು ಬೆಳೆಯಲು ಸಾಧ್ಯವಿದೆ. ಮುಖ್ಯವಾಗಿ ಇತರೆ ಭಾಷೆಗಳಂತೆ ಇಂಗ್ಲಿಷ್ ಕೂಡಾ ಒಂದು ಭಾಷೆಯಾಗಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿಯೇ ತಮ್ಮ ಮಕ್ಕಳು ಓದಬೇಕು ಎನ್ನುವ ಮನೋಭಾವ ದೂರಾಗಬೇಕು.
ಭಾಷೆಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕಂಕಣ ಬದ್ಧರಾಗಬೇಕು ಎಂದರು. ವಿಶ್ವ ಕಂಡ ಹಲವಾರು ಕವಿ, ಸಾಹಿತ್ಯ ಸಂಗೀತಕಾರರನ್ನು ನೀಡಿರುವ ಕೊಡುಗೆಯೂ ಕನ್ನಡಕ್ಕಿದೆ ಎಂದರು. ಕವಿವಿ ಪ್ರಾಧ್ಯಾಪಕ ಡಾ|ರಂಗರಾಜ ವನದುರ್ಗ ಮಾತನಾಡಿ, ಕಾನ್ವೆಂಟ್, ನರ್ಸರಿ ಶಾಲೆಗಳ ಮುಂದೆ ಮಕ್ಕಳ ಶಾಲಾ ಶುಲ್ಕ ತುಂಬಲು ಸರದಿ ಹಚ್ಚಿದರೆ ಇನ್ನೊಂದೆಡೆ ಅಂಗನವಾಡಿಯಲ್ಲಿ ಮಕ್ಕಳು ಬಿಸಿಯೂಟಕ್ಕಾಗಿ ಪಾಳೆ ಹಚ್ಚಿ ನಿಲ್ಲುತ್ತಿರುವುದನ್ನು ನೋಡುತ್ತೇವೆ.
ಈ ವೈರುದ್ಯ ಇಂದಿನ ಶಿಕ್ಷಣ ಸ್ಥಿತಿಯನ್ನು ಪ್ರತಿಬಿಂಬಿಸುವಂತೆ ಕಾಣುತ್ತದೆ. ಒಟ್ಟಿನಲ್ಲಿ ಒಟ್ಟಿಗೆ ಕೂಡಿ ಕನ್ನಡ ನೆಲವನ್ನು ಶ್ರೀಮಂತ ಗೊಳಿಸುವ ಕಾರ್ಯ ನಡೆಯಬೇಕಿದೆ ಎಂದರು. ನಿತ್ಯೋತ್ಸವದ ಕವಿ ಪೊ|ಕೆ.ಎಸ್. ನಿಸಾರಅಹ್ಮದ, “ಮಾನು’ ವಿವಿಯ ದೂರದ ಶಿಕ್ಷಣದ ನಿರ್ದೇಶಕ ಕೆ.ಆರ್.ಇಕ್ಬಾಲಅಹ್ಮದ, ಸಾಹಿತಿ ಡಾ|ಶಾಂತಾ ಇಮ್ರಾಪೂರ, ಡಾ|ಅಜೀಮ, ಮಾಜಿ ಸಂಸದ ಐ.ಜಿ.ಸನದಿ, ಡಾ|ಡಿ.ಎಮ್.ಹಿರೇಮಠ, ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ ಇದ್ದರು.
ಶಿವಾನಂದ ಬಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು. ಕರ್ನಾಟಕ ಸೇರಿದಂತೆ ಕೇರಳ, ಮಹಾರಾಷ್ಟ್ರ, ಗುಜರಾತ, ತಮಿಳನಾಡು, ಗೋವಾ, ನಾಗಪೂರ, ಪಂಜಾಬ ರಾಜ್ಯಗಳಿಂದ ನೂರಾರು ಕನ್ನಡಿಗರು ಆಗಮಿಸಿದ್ದರು.