Advertisement

ಉಗ್ರರ ನಿಗ್ರಹದಲ್ಲಿ ಸಹಕಾರದ ಆಶಾವಾದ

09:45 AM Aug 05, 2017 | Karthik A |

ಚೀನ ಅಡ್ಡಗಾಲಿಗೆ ಭಾರತದ ತೀವ್ರ ಅಸಮಾಧಾನ

Advertisement

ಹೊಸದಿಲ್ಲಿ: ಪಾಕಿಸ್ಥಾನ ಮೂಲದ ಉಗ್ರ ಸಂಘಟನೆ, ಜೈಶ್‌ ಎ ಮೊಹಮ್ಮದ್‌ನ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಯತ್ನಕ್ಕೆ ಚೀನ ಮತ್ತೆ ಅಡ್ಡಗಾಲು ಹಾಕಿದ ಬೆನ್ನಲ್ಲೇ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಸೂದ್‌ ಅಜರ್‌ ಭಾರತದ ವಿರುದ್ಧ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂಬುದು ಗೊತ್ತಿರುವ ವಿಚಾರವೇ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಭಯೋತ್ಪಾದನೆ ನಿಗ್ರಹಕ್ಕೆ ದೇಶಗಳು ಸಹಕಾರ ನೀಡುತ್ತವೆ ಎಂಬ ಆಶಾವಾದವಷ್ಟೇ ನಮ್ಮದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ಗೋಪಾಲ್‌ ಬಗ್ಲೆ ಹೇಳಿದ್ದಾರೆ.

ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಈಗಾಗಲೇ ನಿಷೇಧಿತ ಭಯೋತ್ಪಾದಕ ಸಂಘಟನೆ ಪಟ್ಟಿಯಲ್ಲಿದ್ದು, ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವುದಕ್ಕೆ ಪಾಕ್‌ನ ಪರಮಾಪ್ತ ಗೆಳೆಯ, ಭದ್ರತಾ ಮಂಡಳಿ ಖಾಯಂ ಸದಸ್ಯ ರಾಷ್ಟ್ರ ಚೀನ ಮಾತ್ರ ವಿಶ್ವಸಂಸ್ಥೆಯಲ್ಲಿ ತನ್ನ ವಿಟೋ ಹಕ್ಕು ಬಳಸಿ ತಡೆಯೊಡ್ಡುತ್ತಿದೆ. ಆ.2ರಂದು ಚೀನ ಈ ಹಿಂದೆ ನೀಡಿದ್ದ ತಡೆಯ ಅವಧಿ ಮುಕ್ತಾಯಗೊಂಡಿದ್ದು, ಮತ್ತೆ ಅಡ್ಡಗಾಲು ಹಾಕಿತ್ತು. ಇದರೊಂದಿಗೆ ಡೋಕ್ಲಾಂ ವಿಚಾರದಲ್ಲಿ ಚೀನದೊಂದಿಗೆ ಮಾತುಕತೆ ಮುಂದುವರಿದಿದ್ದು, ಭೂತಾನ್‌ ಜೊತೆ ಸಹಕಾರ ನೀಡುತ್ತಿದ್ದೇವೆ ಎಂದು ಬಗ್ಲೆ ಹೇಳಿದ್ದಾರೆ.

ಅರುಣಾಚಲ ಪ್ರದೇಶ ನಮ್ಮದು ಎನ್ನುವುದಕ್ಕೆ ಅರ್ಥವೇ ಇಲ್ಲ 
ಅರುಣಾಚಲ ಪ್ರದೇಶ ನಮ್ಮದು ಎಂದು ಚೀನ ಹೇಳಿಕೊಳ್ಳುವುದಕ್ಕೆ ಏನೂ ಅರ್ಥವಿಲ್ಲ ಅದರಿಂದ ಏನೂ ಪ್ರಯೋಜನವಿಲ್ಲ. ಅದು ಕೋಳಿಯ ಪಕ್ಕೆಲುಬಿನಂತೆ. ದೇಶಕ್ಕೆ ಅದು ಆಸ್ತಿಯಾಗಲಾರದು ಎಂದು ಚೀನದ ವ್ಯೂಹಾತ್ಮಕ ತಜ್ಞ ವಾಂಗ್‌ ತಾವೋ ಹೇಳಿದ್ದಾರೆ. ಚೀನ ದಕ್ಷಿಣ ಟಿಬೆಟ್‌ ಎಂದು ಅರುಣಾಚಲ ಪ್ರದೇಶವನ್ನು ಹೇಳುತ್ತಿದ್ದು, ಟಿಬೆಟ್‌ನ ಭಾಗ, ಭಾರತ ಅತಿಕ್ರಮಿಸಿದೆ ಎನ್ನುತ್ತಿದೆ. ಆದರೆ ಇದರಿಂದ ಪ್ರಯೋಜನವಾಗಲಾರದು ಎಂದಿದ್ದಾರೆ.

ಡೋಕ್ಲಾಂ ವಿಚಾರದಲ್ಲಿ ಸಂಯಮಕ್ಕೂ ಕೊನೆಯಿದೆ!
ಡೋಕ್ಲಾಂನಲ್ಲಿ ಚೀನ ಭೂಭಾಗವನ್ನು ಭಾರತ ಅತಿಕ್ರಮಿಸಿಕೊಂಡಿದ್ದರೂ, ನಾವು ಅತ್ಯಂತ ಸಂಯಮ ವಹಿಸಿದ್ದೇವೆ. ಆದರೂ ಅದಕ್ಕೊಂದು ಕೊನೆಯಿದೆ ಎಂದು ಚೀನ ರಕ್ಷಣಾ ಇಲಾಖೆ ವಿತಂಡ ಹೇಳಿಕೆಗಳನ್ನು ಮುಂದುವರಿಸಿದೆ. ಡೋಕ್ಲಾಂ ವಿವಾದ ಉದ್ಭವವಾದ ಬಳಿಕ ನಾವು ವಿದೇಶಾಂಗ ಇಲಾಖೆ ಮೂಲಕ ಸಮಸ್ಯೆ ಪರಿಹಾರಕ್ಕೆ ಯತ್ನಿಸಿದ್ದೇವೆ. ಪ್ರಾದೇಶಿಕ ಶಾಂತಿಯನ್ನು ಗಮನದಲ್ಲಿರಿಸಿ ಚೀನ ಸಶಸ್ತ್ರ ಪಡೆಗಳು ಅತೀವ ಸಂಯಮ ವಹಿಸಿದೆ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next