Advertisement

ಹಾಪ್‌ಕಾಮ್ಸ್‌ನಂಥ ಸಹಕಾರಿ ವ್ಯವಸ್ಥೆ ಸಾಯಲು ಬಿಡಬೇಡಿ

12:32 AM Nov 10, 2022 | Team Udayavani |

ಸಮರ್ಥ ನಿರ್ವಹಣೆ ಮತ್ತು ಮೇಲ್ವಿಚಾರಣೆ ಇಲ್ಲದೆ ಇದ್ದರೆ ಸಂಸ್ಥೆ ಯೊಂದು ಹೇಗೆ ಅಧಃಪತನಕ್ಕೆ ಇಳಿಯುತ್ತದೆ ಎನ್ನುವುದಕ್ಕೆ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್‌ಕಾಮ್ಸ್‌) ತಾಜಾ ಉದಾಹರಣೆ. ಹಣ್ಣು ಮತ್ತು ತರಕಾರಿಗಳನ್ನು ರೈತರಿಂದ ನೇರವಾಗಿ ತಲುಪಿಸುವ ಉದ್ದೇಶದಿಂದ ರಚನೆಯಾದ ಹಾಪ್‌ಕಾಮ್ಸ್‌ ನಷ್ಟಕ್ಕೀಡಾ ಗಿದ್ದು, ಹೀಗಾಗಿ ಒಂದೊಂದೇ ಮಳಿಗೆಗಳು ಮುಚ್ಚಲ್ಪಡುತ್ತಿವೆ ಎಂದು ವರದಿಯಾಗಿದೆ. ಒಂದೇ ಹಂತದಲ್ಲಿ ಒಟ್ಟು 56 ಮಳಿಗೆಗಳನ್ನು ಮುಚ್ಚಲಾ ಗುತ್ತಿದೆ. 2,000ದಷ್ಟಿದ್ದ ಸಿಬಂದಿ 500ಕ್ಕೆ ಇಳಿದಿದೆ. ಹಣವಿಲ್ಲದೆ, ಅರ್ಧ ವೇತನ ನೀಡುವ ಸ್ಥಿತಿಗೆ ಬಂದಿದೆ.

Advertisement

ಅತ್ಯಂತ ಮಹತ್ವಾಕಾಂಕ್ಷೆಯೊಂದಿಗೆ ರೂಪಿಸಲಾಗಿರುವ ಹಾಪ್‌ಕಾಮ್ಸ್‌ ಒಂದು ಕಾಲದಲ್ಲಿ ಇಡೀ ರಾಜ್ಯವನ್ನು ವ್ಯಾಪಿಸುವ ಮಟ್ಟಕ್ಕೆ ಬೆಳೆದಿತ್ತು. ರಾಜ್ಯದಲ್ಲಿ 300ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಅತ್ತ ಬೆಳೆಗಾರ ರಿಗೂ ಇತ್ತ ಗ್ರಾಹಕರಿಗೂ ನ್ಯಾಯ ಒದಗಿಸುವ ಉದ್ದೇಶದೊಂದಿಗೆ ಹಾಪ್‌ಕಾಮ್ಸ್‌ ರೂಪಿಸಲಾಗಿತ್ತು. ಸಹಕಾರಿ ಪರಿಕಲ್ಪನೆಯಡಿ ರಚನೆಯಾಗಿರುವ ಹಾಪ್‌ಕಾಮ್ಸ್‌ನ ಮೂಲ ಉದ್ದೇಶವೇ ಗ್ರಾಹಕರಿಗೆ ತಾಜಾ ಗುಣ ಮಟ್ಟದಲ್ಲಿ ಮತ್ತು ಕಡಿಮೆ ಬೆಲೆಯಲ್ಲಿ ಹಣ್ಣು, ತರಕಾರಿಗಳನ್ನು ಪೂರೈಸು ವುದು ಜತೆಗೆ ಬೆಳೆಗಾರರಿಗೆ ಮಧ್ಯವರ್ತಿಗಳ ದಬ್ಟಾಳಿಕೆ ತಪ್ಪಿಸುವುದು ಆಗಿತ್ತು. ಆದರೆ ಬರುಬರುತ್ತಾ ಅತೀವ ಭ್ರಷ್ಟಾಚಾರ ಮತ್ತು ನಿರಾಸಕ್ತಿಯ ಫ‌ಲವಾಗಿ ಈ ಪರಿಕಲ್ಪನೆಯೇ ನುಚ್ಚುನೂರಾಯಿತು. ಖಾಸಗಿ ವ್ಯಾಪಾರಿ ಗಳ ಜತೆ ಹೊಂದಾಣಿಕೆ ಮಾಡಿಕೊಂಡು, ಹೆಚ್ಚಿನ ಬೆಲೆಯಲ್ಲಿ ಹಣ್ಣು ತರಕಾರಿಗಳನ್ನು ಮಾರಾಟ ಮಾಡುವುದರಿಂದ ಸಹಜವಾಗಿಯೇ ಗ್ರಾಹ ಕರು ಅತ್ತ ತಲೆ ಹಾಕದಂತೆ ಆಯಿತು.

ಕೆಲವು ಅಧಿಕಾರಿಗಳು ಮತ್ತು ಸಿಬಂದಿಯ ಸ್ವಾರ್ಥ, ದೂರದೃಷ್ಟಿ ಕೊರತೆ ಫ‌ಲವಾಗಿ ಈ ಕಾಲಘಟ್ಟದಲ್ಲಿ ಮತ್ತಷ್ಟು ಉಜ್ವಲವಾಗಿ ಬೆಳೆಯಬೇಕಿದ್ದ ಪರಿಕಲ್ಪನೆಯೊಂದು ನಾಶ ವಾಗುವ ಹಂತದಲ್ಲಿದೆ. ಸಣ್ಣಪುಟ್ಟ ಅಂಗಡಿಗಳ ಜತೆ ಆನ್‌ಲೈನ್‌ ಮತ್ತು ಆಫ್ಲೈನ್‌ನಲ್ಲಿ ದೊಡ್ಡ ದೊಡ್ಡ ಕಂಪೆನಿಗಳು ಇಂದು ಹಣ್ಣು ಮತ್ತು ತರ ಕಾರಿಗಳನ್ನು ಮಾರುವ ಕಾಯಕಕ್ಕೆ ಇಳಿದು ಭರ್ಜರಿ ಲಾಭ ಮಾಡಿಕೊಳ್ಳು ತ್ತಿವೆ. ಗ್ರಾಹಕನಿಗೆ ಮನೆಯಲ್ಲೇ ಕುಳಿತು ತನಗೆ ಬೇಕಾದ ಹಣ್ಣು ಮತ್ತು ತರಕಾರಿಯನ್ನು ರೈತನಿಂದಲೇ ನೇರವಾಗಿ ತರಿಸಿಕೊಳ್ಳುವ ಆ್ಯಪ್‌ಗ್ಳು ಕಾರುಬಾರು ನಡೆಸುತ್ತಿವೆ. ಹಾಪ್‌ಕಾಮ್ಸ್‌ಗೆ ತನ್ನ ವ್ಯಾಪಾರ ವಹಿವಾಟನ್ನು ಆನ್‌ಲೈನ್‌ ಮಾರ್ಗದಲ್ಲೂ ವಿಸ್ತರಿಸುವ ಅವಕಾಶ ಇತ್ತು. ರಾಜ್ಯದೆಲ್ಲೆಡೆ ತನ್ನ ಮಳಿಗೆಗಳನ್ನು ವಿಸ್ತರಿಸಿ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಳ್ಳುವ ಅವಕಾಶ ಇತ್ತು. ಇದರಿಂದ ಕಾರ್ಪೋರೆಟ್‌ ಕಂಪೆನಿಗಳು ಬೇಕಾಬಿಟ್ಟಿ ಬೆಲೆ ವಿಧಿಸಿ ಗ್ರಾಹಕರಿಗೂ ಬೆಳಗಾರರಿಗೂ ಮೋಸ ಮಾಡುತ್ತಿರುವುದನ್ನು ನೋಡಿ ಸುಮ್ಮನಿರಬೇಕಾಗಿದೆ. ಸಹಕಾರಿ ಸಂಸ್ಥೆ ಎಂದಾಕ್ಷಣ ಜನರಿಗೆ ಸಹಜವಾಗಿಯೇ ವಿಶ್ವಾಸಾರ್ಹತೆ ಹೆಚ್ಚುವುದರಲ್ಲಿ ಅನುಮಾನ ಇಲ್ಲ. ಆದರೆ ಇಂಥ ಅವಕಾಶಗಳನ್ನು ಕೈ ಚೆಲ್ಲಿ ನಷ್ಟಕ್ಕೆ ಕಾರಣವಾದ ಬಗ್ಗೆ ಪರಾಮರ್ಶೆ ನಡೆಯಬೇಕು.

ಈ ಸಂಘಕ್ಕೆ ಸರಕಾರ ಸಮರ್ಥ ಆಡಳಿತಾಧಿಕಾರಿ ನೇಮಿಸಿ, ಪುನರುತ್ಥಾನಕ್ಕೆ ಕೈ ಹಾಕಬೇಕಾಗಿದೆ. ಆಸಕ್ತಿ ಇರುವ ಮತ್ತು ಸಮರ್ಥ ಸಿಬಂದಿಯನ್ನು ನೇಮಿಸಿ ಖಾಸಗಿಯವರಿಗೆ ಸಡ್ಡು ಹೊಡೆಯಬೇಕು. ರೈತರಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸಿ, ಅವುಗಳನ್ನು ಆನ್‌ಲೈನ್‌ ಮತ್ತು ಆಫ್ಲೈನ್‌ ಮೂಲಕ ಗ್ರಾಹಕರಿಗೆ ತಲುಪಿಸುವ ಸ್ಪರ್ಧಾತ್ಮಕ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next