ಮಂಗಳೂರು: ಅನನ್ಯ ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯ. ಇದು ಒಂದೆಡೆ ಸಾಧಕರಿಗೆ ಸಂತೃಪ್ತಿಯ ಭಾವ ನೀಡಿದರೆ, ಇನ್ನೊಂದೆಡೆ ಇನ್ನಷ್ಟು ಸಾಧಕರು ಮೂಡಿಬರಲು ಪ್ರೇರಣೆಯಾಗುತ್ತದೆ ಎಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶ ನ್ಯಾ| ಜಾನ್ ಮೈಕಲ್ ಡಿ’ಕುನ್ಹಾ ಹೇಳಿದರು.
ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಈ ಬಾರಿಯ ಸಂದೇಶ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.ಬಳ್ಳಾರಿ ಧರ್ಮಪ್ರಾಂತದ ಬಿಷಪ್ ರೈ| ರೆ| ಹೆನ್ರಿ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು.
ಸಂದೇಶ ಪ್ರಶಸ್ತಿ ಪ್ರದಾನ: ಖ್ಯಾತ ವಿಮರ್ಶಕ, ಸಾಹಿತಿ ಡಾ| ಗಿರಡ್ಡಿ ಗೋವಿಂದರಾಜ ಅವರಿಗೆ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ, ಖ್ಯಾತ ಕೊಂಕಣಿ ಸಾಹಿತಿ ಎಡಿ ನೆಟ್ಟೋ ಅವರಿಗೆ ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ, ಶಿಲ್ಪಿ ಅಶೋಕ್ ಗುಡಿಗಾರ್ ಅವರಿಗೆ ಸಂದೇಶ ಕಲಾ ಪ್ರಶಸ್ತಿ, ಉದಯವಾಣಿ ನಿವೃತ್ತ ಸಂಪಾದಕ ಎನ್. ಗುರುರಾಜ್ ಅವರಿಗೆ ಸಂದೇಶ ಮಾಧ್ಯಮ ಪ್ರಶಸ್ತಿ, ಶಿಕ್ಷಣದ ಜತೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಕೆ. ಗಾದಿಲಿಂಗಪ್ಪ ಅವರಿಗೆ ಸಂದೇಶ ಶಿಕ್ಷಣ ಪ್ರಶಸ್ತಿ, ಖ್ಯಾತ ಕೊಂಕಣಿ ಗಾಯಕ ವಿಲ್ಸನ್ ಒಲಿವೆರಾ ಅವರಿಗೆ ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ ಹಾಗೂ ಭಿಕ್ಷುಕರ, ಮಾನಸಿಕ ರೋಗಿಗಳ, ಅಂಗವಿಕಲರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಟಿ. ರಾಜ ಅವರಿಗೆ ಸಂದೇಶ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಅಭಿನಂದನ ಪತ್ರ, ಪ್ರಶಸ್ತಿ ಫಲಕ ಹಾಗೂ 25,000 ರೂ. ನಗದು ಪುರಸ್ಕಾರವನ್ನು ಹೊಂದಿದೆ. ಮಂಗಳೂರು ಕೆಥೋಲಿಕ್ ಧರ್ಮಪ್ರಾಂತದ ಪ್ರಧಾನ ಗುರುಗಳಾದ ಮೊ| ಡೆನ್ನಿಸ್ ಮೊರಾಸ್ ಪ್ರಭು, ಶಾಸಕ ಜೆ.ಆರ್. ಲೋಬೋ ಅತಿಥಿಯಾಗಿದ್ದರು. ಸಹ ನಿರ್ದೇಶಕ ಬ್ರ| ವಿಕ್ಟರ್ ಕ್ರಾಸ್ತಾ ಉಪಸ್ಥಿತರಿದ್ದರು.
ಪ್ರತಿಷ್ಠಾನದ ನಿರ್ದೇಶಕ ಫಾ| ವಿಕ್ಟರ್ ವಿಜಯ್ ಲೋಬೋ ಸ್ವಾಗತಿಸಿದರು. ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನಾ. ಡಿ’ಸೋಜಾ ಪ್ರಸ್ತಾವನೆಗೈದರು. ಚಂದ್ರಕಲಾ ನಂದಾವರ, ಐರಿನ್ ರೆಬೆಲ್ಲೊ, ಉಷಾ ಫೆರ್ನಾಂಡಿಸ್, ಕಾನ್ಸೆಪಾr ಆಳ್ವ, ಆréನಿ ಅಲ್ವಾರಿಸ್, ಟೈಟಸ್ ನೊರೊನ್ನಾ, ಸಿ| ಅನಿತಾ ಸಾಧಕ ರನ್ನು ಪರಿಚಯಿಸಿದರು. ಪ್ರತಿಷ್ಠಾನದ ವಿಶ್ವಸ್ತರಾದ ರೋಯ್ ಕ್ಯಾಸ್ಟಲಿನೋ ವಂದಿಸಿ, ಅರುಣ್ ಉಳ್ಳಾಲ ನಿರೂಪಿಸಿದರು.
ಮಾನವೀಯತೆಯ ಅನಾವರಣ ಸಂದೇಶ ವಿಶೇಷ ಪ್ರಶಸ್ತಿ ಪಡೆದ ಆಟೋರಾಜ ಅವರ ಸಾಧನೆಗಳ ಸಾಕ್ಷ್ಯಚಿತ್ರ ಮಾನವೀಯ ಸೇವೆಯ ಸಾಧ್ಯತೆಗಳ ಚಿತ್ರಣಗಳನ್ನು ಅನಾವರಣಗೊಳಿಸಿತು. ಮೂರನೇ ತರಗತಿ ಕಲಿತು ಮನೆಬಿಟ್ಟು ಓಡಿಹೋದ ಅಲೆಮಾರಿ ಹುಡುಗ ಆಟೋರಾಜ ಜೀವನದಲ್ಲಿ ಸಾಕಷ್ಟು ನೋವುಗಳು ಉಂಡ ಬಳಿಕ ಸಮಾಜಸೇವಕನಾಗಿ ಪರಿವರ್ತನೆಗೊಂಡು ಕಳೆದ 20 ವರ್ಷಗಳಲ್ಲಿ ಬೆಂಗಳೂರಿನ ಬೀದಿಗಳಲ್ಲಿದ್ದ ಸುಮಾರು ಹತ್ತು ಸಾವಿರ ಭಿಕ್ಷುಕರನ್ನು, ಮಾನಸಿಕ ರೋಗಿಗಳನ್ನು, ಅಂಗವಿಕಲರನ್ನು, ಅನಾಥರನ್ನು ರಕ್ಷಿಸಿದ್ದಾರೆ.