ಹರಿಹರ: ಈ ಬಾರಿಯ ಬಜೆಟ್‌ನಲ್ಲಿ ಹೊರರಾಜ್ಯದಲ್ಲಿರುವ ಶ್ರೀಶೈಲ, ಕಾಶಿ, ಮಂತ್ರಾಲಯ, ತಿರುಪತಿಗಳ ಕರ್ನಾಟಕ ಭವನಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ ಎಂದು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
ನಗರದ ಎಸ್‌ಜೆಪಿವಿ ವಿದ್ಯಾಪೀಠದಲ್ಲಿ ಲಿಂ| ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸ್ಮರಣಾರ್ಥ ನಡೆದ 2018ನೇ ಸಾಲಿನ ಸಮನ್ವಯ ಸಿರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲಿ ಹೋಗಿ ಬರುವ ಈ ನಾಲ್ಕು ಕ್ಷೇತ್ರಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಲೆಂದು ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ ಎಂದರು.
ಅಂಧರ, ದೀನ ದಲಿತರ, ವೃದ್ಧರ ಸೇವೆಯಲ್ಲಿಯೇ ದೇವರನ್ನು ಕಾಣುವ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳಿಗೆ ಸಮನ್ವಯ ಸಿರಿ ಪ್ರಶಸ್ತಿ ಲಭಿಸಿರುವುದು ಸೂಕ್ತವಾಗಿದೆ. ಯುವಜನತೆ ವಿನಯ ಮತ್ತು ಸಂಸ್ಕಾರವನ್ನು ರೂಢಿಸಿಕೊಂಡಲ್ಲಿ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದರು.
ಪ್ರಶಸ್ತಿ ಸ್ವೀಕರಿಸಿದ ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ ಮಾತನಾಡಿ, ಶ್ರೀಶೈಲ ಪೀಠದ ಲಿಂ| ವಾಗೀಶ ಪಂಡಿತಾರಾಧ್ಯರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಧರ್ಮದ ಉಳಿವಿಗಾಗಿ, ಸಮನ್ವಯತೆಯ ಬದುಕಿಗಾಗಿ ತಮ್ಮ ಪಾಂಡಿತ್ಯದಿಂದ ಪರಿಹಾರ ಸೂಚಿಸಿದವರಾಗಿದ್ದಾರೆ. ಆಯುರ್ವೇದ ಕ್ಷೇತ್ರದಲ್ಲೂ ಅವರದು ಅಪಾರ ಸಾಧನೆ ಎಂದರು.
ಸಾನ್ನಿಧ್ಯ ವಹಿಸಿದ್ದ ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ, ಚಂದ್ರಶೇಖರ ಶಿವಾಚಾರ್ಯ ಶ್ರೀಗಳಿಗೆ ಪ್ರಶಸ್ತಿ ಲಭಿಸಿದ್ದರಿಂದ ಪ್ರಶಸ್ತಿಯ ಮತ್ತು ಸಂಸ್ಥೆಯ ಕೀರ್ತಿ, ಗೌರವ ಹೆಚ್ಚಿದಂತಾಗಿದೆ. ಈ ಪ್ರಶಸ್ತಿ ಸ್ವೀಕರಿಸಿದ ಪ್ರಥಮ ಮಠಾಧೀಶರೆಂಬ ಹೆಗ್ಗಳಿಕೆಗೆ ಶ್ರೀಗಳು ಪಾತ್ರರಾಗಿದ್ದಾರೆ ಎಂದರು.
ಶಾಸಕ ಎಸ್. ರಾಮಪ್ಪ ಮಾತನಾಡಿ, ಶಾಸಕರ ಅನುದಾನದಲ್ಲಿ ಸಂಸ್ಥೆಯ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಲಾಗುವುದು ಎಂದರು.
ಮಾಜಿ ಶಾಸಕ ಬಿ.ಪಿ. ಹರೀಶ್, ಸಂಸ್ಥೆ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ, ನಗರಸಭೆ ಅಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ, ರಾಜ್ಯ ಕೃಷಿ ಇಲಾಖೆ ಅಪರ ನಿರ್ದೇಶಕ ಎಂ.ಎಸ್. ದಿವಾಕರ, ಆರ್.ಪಿ. ಮುದೇನೂರು ಮಠ, ಕೆ.ಎಂ. ಚನ್ನಬಸವಯ್ಯ, ಆರ್.ಸಿ. ಹಿರೇಮಠ, ಎನ್.ಎಚ್. ಪಾಟೀಲ, ಪ್ರೊ| ಸಿ.ವಿ. ಪಾಟೀಲ್, ಎಸ್.ಎಂ. ವೀರಯ್ಯ, ಪ್ರೊ| ಬಿ.ಆರ್. ಪಾಟೀಲ, ನಂದಿಗಾವಿ ತಿಪ್ಪೇಸ್ವಾಮಿ ಇತರರಿದ್ದರು.