ಹೊನ್ನಾವರ: ಸಂಸ್ಕೃತ, ಯಕ್ಷಗಾನಗಳಿಗೆ ಪ್ರಸಿದ್ಧವಾಗಿದ್ದ ಉತ್ತರ ಕನ್ನಡದಲ್ಲಿ ಹಿಂದುಸ್ಥಾನಿ ಸಂಗೀತ ನೆಲೆಗೊಳಿಸಲು ಕಡತೋಕಾ ಎಸ್. ಶಂಭು ಭಟ್ ನೇತೃತ್ವದಲ್ಲಿ ಪಿ.ಡಿ. ಶಾನಭಾಗ, ವಿ.ವಿ. ಪೈ, ಜಿ.ಕೆ. ಚಂದಾವರಕರ, ದಿ| ಎಸ್.ಆರ್. ಉದ್ಯಾವರ, ಆರ್.ಡಿ. ಕಲ್ಯಾಣಪುರ, ದಿ| ವಿ.ಆರ್. ಪೈ, ಆರ್.ಎಂ. ಶಾನಭಾಗ, ಎಡ್ವೋಕೇಟ್ ವಿ.ಎಂ. ಭಂಡಾರಿ, ಬಾಳೇಗದ್ದೆ ಜಿ.ಆರ್. ಭಟ್ಟ, ಕರ್ಕಿಯ ರಾಜು ಹೆಬ್ಟಾರ, ಕವಲಕ್ಕಿ ಎಸ್.ಜಿ. ಭಟ್ಟ ಮೊದಲಾದವರು ಸೇರಿ ಆರಂಭಿಸಿದ ಕಲಾ ಸಂಗಮ ಸಂಸ್ಥೆ 35 ವರ್ಷಗಳಿಂದ ಸತತ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತ, ಸಂಗೀತ ಶಾಲೆ ತೆರೆಯುತ್ತ, ಪ್ರಸಿದ್ಧ ಕಲಾವಿದರನ್ನು ಗುರುಗಳಾಗಿ ಕರೆಸಿಕೊಂಡು ನಡೆಸಿದ ಸಂಗೀತ ಅಭಿಯಾನದಿಂದಾಗಿ ಇಂದು ಸಂಗೀತ ಶಾಲೆಗಳನ್ನು, ನೂರಾರು ಸಂಗೀತಗಾರರು, ಸಾವಿರಾರು ಶ್ರೋತೃಗಳನ್ನು ಎಲ್ಲ ತಾಲೂಕಿನಲ್ಲಿ ಕಾಣಬಹುದಾಗಿದೆ.
Advertisement
ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಸೂತ್ರಧಾರರಾಗಿ ಕಲಾಸಂಗಮಕ್ಕೆ ಕೋಳುಗಂಬವಾಗಿ ಬೆಳೆಸಿದ ಪ್ರೊ| ಎಸ್. ಶಂಭು ಭಟ್ಟರಿಗೆ ಈಗ 84ವರ್ಷ. ಅವರು ಬಾನ್ಸೂರಿ ಕಲಾವಿದರು, ವೇದ ವಿದ್ವಾಂಸರು, ನಿವೃತ್ತ ಪ್ರಾಂಶುಪಾಲರು, ಮಾದರಿ ಕೃಷಿಕರು. ಈಗಲೂ ಸಂಗೀತ ಕಾರ್ಯಕ್ರಮಗಳಿಗೆ ಓಡಾಡುತ್ತ, ಮಾರ್ಗದರ್ಶನ ಮಾಡುತ್ತ, ಪ್ರೋತ್ಸಾಹಿಸುತ್ತಿದ್ದಾರೆ. ಪ್ರಸಿದ್ಧ ಸಿತಾರ ವಾದಕ ಉಸ್ತಾದ್ ಬಾಲೇಖಾನ್, ಖ್ಯಾತ ಗಾಯಕ ಪಂ| ಬಸವರಾಜ ರಾಜಗುರು ಕಾರ್ಯಕ್ರಮಗಳನ್ನಿಟ್ಟು 1985ರಲ್ಲೇ ಕಲಾಸಂಗಮ ಉದ್ಘಾಟಿಸಲಾಯಿತು. ಪಂ.ಷಡಕ್ಷರೀ ಗವಾಯಿಗಳನ್ನು ಕರೆಸಿಕೊಂಡು 1986ರಲ್ಲಿ ಕಲಾಸಂಗಮ ಸಂಗೀತ ಶಾಲೆ ಆರಂಭಿಸಿ ಅನೇಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯಲು ವ್ಯವಸ್ಥೆ ಮಾಡಲಾಯಿತು.