Advertisement

Honnavar: ಮೂವರು ಯುವಕರ ಬಲಿ ತೆಗೆದುಕೊಂಡ ಭೀಕರ ರಸ್ತೆ ಅಪಘಾತ

04:04 PM Dec 31, 2024 | Team Udayavani |

ಹೊನ್ನಾವರ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಮೂವರು ಮೃತಪಟ್ಟ ಘಟನೆ ತಾಲೂಕಿನ ಶರಾವತಿ ಸೇತುವೆಯಲ್ಲಿ ಡಿ.31ರ ಮಂಗಳವಾರ ಮುಂಜಾನೆ ಸಂಭವಿಸಿದೆ.

Advertisement

ಮಾವಿನಕುರ್ವಾದ ರಾಘವೇಂದ್ರ ಗೌಡ, ಖರ್ವಾ ನಾಥಗೇರಿಯ ರಮೇಶ ರಾಮಚಂದ್ರ ನಾಯ್ಕ, ಸಂಶಿಯ ಗೌರೀಶ ಮಂಜುನಾಥ ನಾಯ್ಕ ಮೃತಪಟ್ಟವರು.

2024ನೇ ವರ್ಷದ ಕೊನೆಯ ದಿನವಾದ ಡಿ.31ರ ಮುಂಜಾನೆ ಹೊನ್ನಾವರ ತಾಲೂಕಿನಲ್ಲಿ ಘನಘೋರ ದುರಂತವೊಂದು ಸಂಭವಿಸಿದೆ. ಬಡ ಮಧ್ಯಮ ವರ್ಗಕ್ಕೆ ಸೇರಿದ ಮೂವರು ಯುವಕರು ದುಡಿಮೆಯ ಮೂಲಕ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದವರು.

ಕೂಲಿ ಕೆಲಸದ ಮೂಲಕ ತಮ್ಮ ಜೀವನ ನಡೆಸುತ್ತಿದ್ದ ಮೂವರು ಡಿ.31ರ ಮಂಗಳವಾರ ಮುಂಜಾನೆ ಕಾಸರಕೋಡ ಭಾಗದಿಂದ ಹೊನ್ನಾವರ ಕಡೆ ಬರುವಾಗ ಹೊನ್ನಾವರ ಕಡೆಯಿಂದ ಮಂಗಳೂರಿನ ಕಡೆ ಚಲಿಸುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಗೌರೀಶ ನಾಯ್ಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬಸ್ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಚಾಲಕ ವಸಂತ ಬೀಮಪ್ಪ ಚೌವಾಣ ವಿರುದ್ದ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಶವದ ಮರಣೊತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಸಾರ್ವಜನಿಕರ ಆರೋಪ:

ಸೇತುವೆ ಮೇಲೆ ದಾರಿದೀಪ ಅಳವಡಿಸಿ ತಿಂಗಳು ಕಳೆದರೂ ಅದನ್ನು ಬೆಳಗಿಸಲು ಇನ್ನೂ ಮೂಹೂರ್ತ ಸಿಕ್ಕಿಲ್ಲ. ಎರಡು ಸೇತುವೆಯಲ್ಲಿ ಸಂಚಾರವಿದ್ದರೆ, ಈ ಅಪಘಾತ ತಪ್ಪುತ್ತಿತ್ತು. ಕಳೆದ 5-6 ವರ್ಷದಿಂದ ಪ್ರತಿ ವರ್ಷ ಇಂತಹ ಪ್ರಕರಣಗಳು ಸಂಭವಿಸುತ್ತಿದೆ. ಅದಕ್ಕಾಗಿಯೇ ಈ ಅವಘಡ ಸಂಭವಿಸಲು ಐ.ಆರ್.ಬಿ ಕಂಪನಿಯವರ ಅವೈಜ್ಞಾನಿಕ ಕಾಮಗಾರಿ ಮತ್ತು ಅದರ ಮೇಲುಸ್ತುವಾರಿ ವಹಿಸಬೇಕಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನ ವಹಿಸಿರುವುದು ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ದರುಂತದಲ್ಲಿ ಮೃತರಾದ ಮೂವರು ಬಡ‌ ಕುಟುಂಬದವರಾಗಿದ್ದು, ದುಡಿಮೆಯ ಮೂಲಕ ಕುಟುಂಬ ನಿರ್ವಹಣೆಗೆ ನೆರವಾಗುತ್ತಿದ್ದರು. ಮಾವಿನಕುರ್ವಾದ ರಾಘವೇಂದ್ರ ಗೌಡ ವಿವಾಹವಾಗಿ ವರ್ಷವು ಕಳೆದಿರಲಿಲ್ಲ. ತಂದೆ ನಿಧನ ಬಳಿಕ, ಕುಟುಂಬ ನಿರ್ವಹಣೆಗೆ ಸಹೋದರನೊಂದಿಗೆ ನೆರವಾಗುತ್ತಿದ್ದ. ಕೆಲ ತಿಂಗಳ ಹಿಂದಷ್ಟೇ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರ ನಿಧನದಿಂದ ತಾಯಿ ಹಾಗೂ ಸಹೋದರ, ಪತ್ನಿ, ಅಪಾರ ಸಂಖ್ಯೆಯ ಸಂಬಂಧಿಕರು, ಸ್ನೇಹಿತರು ದುಃಖಕ್ಕೆ ಒಳಗಾಗಿದ್ದಾರೆ.

ಇನ್ನು ಖರ್ವಾದ ರಮೇಶ ನಾಯ್ಕ ವಿದ್ಯಾಭ್ಯಾಸ ಮುಗಿಸಿ, ಓದಿಗೆ ತಕ್ಕ ನೌಕರಿ ಹುಡುಕುತ್ತಾ ಕುಟುಂಬ ನಿರ್ವಹಣೆಗೆ ಕೂಲಿ ಕೆಲಸಮಾಡುತ್ತಿದ್ದ. ಸೈನಿಕನಾಗಿ ದೇಶ ಸೇವೆ ಮಾಡಬೇಕು ಎಂದು ಆಗಾಗ ಸೇನಾ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ.

ಸಂಶಿಯ ಗೌರೀಶ ನಾಯ್ಕ, ಮೃತ ರಮೇಶ ನಾಯ್ಕ ಅವರ ಸಂಬಂಧಿಯಾಗಿದ್ದು, ತಂದೆಯ ನಿಧನದ ನಂತರ ಕುಟುಂಬದ ನಿರ್ವಹಣೆಗಾಗಿ ತಾಯಿಯೊಂದಿಗೆ ಕೆಲಸದಲ್ಲಿ ತೊಡಗಿಸಿಕೊಂಡು, ಸೇನೆಗೆ ಸೇರ್ಪಡೆಗಾಗಿ ದೇಶ ಸೇವೆಯಲ್ಲಿ ತೊಡಗಿಕೊಳ್ಳುವ ಆಸಕ್ತಿ ಹೊಂದಿದ್ದವರು ಯೌವನದಲ್ಲೇ ಇಹಲೋಕ ತ್ಯಜಿಸಿದರು.

ಸಂಚಾರಿ ನಿಯಮ ಪಾಲಿಸುವಂತೆ ಪಿ.ಎಸ್.ಐ ಮನವಿ

ಬೈಕ್ ಅಥವಾ ಯಾವುದೇ ವಾಹನವಿದ್ದರೂ ಪ್ರತಿಯೊರ್ವರು ಸಂಚಾರಿ ನಿಯಮ ಪಾಲಿಸಿರಿ. ಈ ದಿನದ ದುರಂತ ಬೇಸರ ಮೂಡಿಸುತ್ತದೆ. ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯ ಅಳವಡಿಸಿಕೊಂಡರೆ ತಲೆ ಭಾಗಕ್ಕೆ ಗಾಯ ತಪ್ಪುತ್ತದೆ. ಇದರಿಂದ ಜೀವ ಉಳಿಸಿಕೊಳ್ಳಬಹುದು. ಪೊಲೀಸರು ಹಿಡಿಯುತ್ತಾರೆ ಎಂದು ಆಗಷ್ಟೆ ಹೆಲ್ಮೆಟ್ ಧರಿಸದೇ ಪ್ರತಿ ಬಾರಿ ಹೆಲ್ಮೆಟ್ ಧರಿಸುವ ಜೊತೆ, ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಿ ವಾಹನವನ್ನು ನಿಧಾನವಾಗಿ ಚಲಾಯಿಸಿ ಸಂಚಾರಿ ನಿಯಮ ಪಾಲಿಸುವಂತೆ ಪಿ.ಎಸ್.ಐ ರಾಜಶೇಖರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next