Advertisement

ಚಾಮರಾಜನಗರದ ಸೋಬಾನೆ ಪದದ ಹೊನ್ನಮ್ಮ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

06:09 PM Jan 04, 2021 | Team Udayavani |

ಚಾಮರಾಜನಗರ: ಅಪರೂಪಕ್ಕೆ ಬೆಂಗಳೂರಿನಿಂದ ಹೊರ ಜಿಲ್ಲೆಯಾದ ಜನಪದ ತವರು ಚಾಮರಾಜನಗರದಲ್ಲಿ ಪ್ರಕಟಿಸಲಾದ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿಗೆ ಚಾಮರಾಜನಗರ ರಾಮಸಮುದ್ರದ ಸೋಬಾನೆ ಕಲಾವಿದೆ ಹೊನ್ನಮ್ಮ ಸಹ ಆಯ್ಕೆಯಾಗಿದ್ದಾರೆ.

Advertisement

ಚಾಮರಾಜನಗರ ಪಟ್ಟಣದ ರಾಮಸಮುದ್ರದ ಬಡಾವಣೆಯ ನಿವಾಸಿಯಾದ ಬಿ.ಹೊನ್ನಮ್ಮ ಅವರು ಸೋಬಾನೆ ಹಾಡು ಹಾಡುವುದರಲ್ಲಿ ಪರಿಣಿತರು. ಈ ಕಲೆ ಅವರಿಗೆ 40 ವರ್ಷಗಳಿಂದ ಒಲಿದುಬಂದಿದೆ. ತಮ್ಮ ತಾಯಿ ಚಿಕ್ಕಸಿದ್ದಮ್ಮ, ದೊಡ್ಡಮ್ಮ ಹನುಮಮ್ಮ ಅವರ ಜತೆ ಹೊಲ ಗದ್ದೆಗಳಿಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅವರ ನೆರವಿನಿಂದ ಸೋಬಾನೆ ಹಾಡುಗಳನ್ನು ಕಲಿತು, ಅದನ್ನು ಸತತವಾಗಿ ಹಾಡುತ್ತಾ , ಇಂದಿನ ಪೀಳಿಗೆಗೂ ಕಲಿಸಿದ್ದಾರವರು.

ಹೊನ್ನಮ್ಮ ಅವರ ಬಾಯಲ್ಲಿ ಜನಪದಗಳು ನಿರರ್ಗಳವಾಗಿ ಮೂಡಿ ಬರುತ್ತವೆ. ಮೈದಾಳರಾಮ, ಬಿಳಿಗಿರಿರಂಗಸ್ವಾಮಿ, ಶಿವಶರಣೆಶಂಕಮ್ಮ, ಜೋಗುಳಹಾಡು, ಒಡಹುಟ್ಟಿದವರ ಹಾಡು, ತಾಯಮ್ಮನ ಹಾಡು, ಚಾಮುಂಡೇಶ್ವರಿ, ನಂಜುಂಡೇಶ್ವರರ ಕುರಿತ ಹಾಡು, ಬೀಸುವ ಕಲ್ಲಿನ ಪದಗಳು ಅವರ ನಾಲಿಗೆಯಲ್ಲಿ ಅದ್ಭುತವಾಗಿ ಮೂಡಿ ಬರುತ್ತವೆ.

ಇದನ್ನೂ ಓದಿ :2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

ಈ ಜಾನಪದ ಕಲೆ ನನಗೆ ಕೊನೆಯಾಗಬಾರದು, ಮುಂದಿನ ಪೀಳಿಗೆಗೂ ಇದರ ಅಗತ್ಯವಿದೆ ಎಂಬುದನ್ನರಿತ ಹೊನ್ನಮ್ಮ 10 ಮಂದಿಗೆ ಸೋಬಾನೆ ಕಲಿಸುತ್ತಿದ್ದಾರೆ.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹೊನ್ನಮ್ಮ ಅವರು, ಜಿಲ್ಲೆಯ ಬಿಳಿಗಿರಿರಂಗನಬೆಟ್ಟ, ಗುಂಡ್ಲುಪೇಟೆ ತಾಲೂಕಿನ ಹಂಗಳ, ಲಕ್ಕೂರು, ಮದ್ದೂರು, ಮುಡಿಗುಂಡ, ಮೈಸೂರಿನಲ್ಲಿ ಆಯೋಜಿಸಿದ್ದ ಧರೆಗೆ ದೊಡ್ಡವರ ಉತ್ಸವದಲ್ಲೂ ಪಾಲ್ಗೊಂಡು ತಮ್ಮ ಸೋಬಾನೆಪದದ ಸಾರವನ್ನು ಜನತೆಗೆ ಉಣಬಡಿಸಿದ್ದಾರೆ.

ಇವರ ಕಲೆಯನ್ನು ಗುರುತಿಸಿ ಚಾಮರಾಜನಗರ ದಸರಾಮಹೋತ್ಸವ, ಜಿಲ್ಲಾ ಕನ್ನಡ ಸಾಹಿತ್ಯಸಮ್ಮೇಳನ, ರಂಗತರಂಗ ಬೆಳ್ಳಿಹಬ್ಬ, ಜನಪರ ಉತ್ಸವ, ಮಹಿಳಾಸಂಸ್ಕೃತಿ ಉತ್ಸವ, 2004 ರಲ್ಲಿ ನಡೆದ ಕಲಾ ಪ್ರತಿಭೋತ್ಸವ, ಜಿಲ್ಲೆಯ ಕನ್ನಡಪರ ಸಂಘಟನೆಗಳು ಸನ್ಮಾನಿಸಿವೆ.

ನೂರಾರು ಮದುವೆ ಸಂದರ್ಭದಲ್ಲಿ ಇವರು ಭಾಗವಹಿಸಿ ತಮ್ಮ ಸೋಬಾನೆಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ನಾನು ಸೋಬಾನೆ ಹಾಡನ್ನು ಕಲಿಯಬೇಕಾದರೆ ನನಗೆ ಗುರುವಾಗಿ ಸಹಕಾರ ನೀಡಿದವರು ನಮ್ಮ ತಾಯಿ ಚಿಕ್ಕಸಿದ್ದಮ್ಮ ಎಂದು ಕೃತಜ್ಞತೆಯಿಂದ ನೆನೆಯುತ್ತಾರೆ ಹೊನ್ನಮ್ಮ

ಪ್ರಶಸ್ತಿಗಳ ಬಗ್ಗೆ ನಾನ್ಯಾವತ್ತೂ ಆಸೆ ಪಟ್ಟವಳಲ್ಲ. ನನ್ನ ಪಾಡಿಗೆ ಸೋಬಾನೆ ಹಾಡಿಕೊಂಡಿದ್ದೇನೆ. ಸರ್ಕಾರದವರು ನನಗೆ ಪ್ರಶಸ್ತಿ ನೀಡಿರುವ ವಿಷಯ ಗೊತ್ತಾಗಿ ಸಂತೋಷವಾಯಿತ. ಜನಪದ ಅಕಾಡೆಮಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದಕ್ಕೆಲ್ಲ ಕಾರಣರಾದ ನಮ್ಮವ್ವನಿಗೂ ಕೃತಜ್ಞಳಾಗಿದ್ದೇನ.ಎ
– ಹೊನ್ಮಮ್ಮ, ಜಾನಪದ ಆಕಾಡೆಮಿ ಪ್ರಶಸ್ತಿ ಪುರಸ್ಕೃತರು

Advertisement

Udayavani is now on Telegram. Click here to join our channel and stay updated with the latest news.

Next