ಹೊನ್ನಾಳಿ: ಬಂಜಾರ ಸಮಾಜದ ಗುರುಗಳಾದ ಸಂತ ಸೇವಾಲಾಲ್‌ರ 281ನೇ ಜಯಂತಿ ಕಾರ್ಯಕ್ರಮ ಅವರ ಜನ್ಮ ಸ್ಥಳವಾದ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದ ಭಾಯಗಡ್ ಪುಣ್ಯಸ್ಥಳದಲ್ಲಿ ಫೆ.14ರಂದು ನಡೆಯಲಿದೆ.
ರಾಜ್ಯ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಫೆ.13, 14 ಹಾಗೂ 15 ರಂದು ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಫೆ.13ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಫೆ.14ರಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಯಂತ್ಯುತ್ಸವ ಉದ್ಘಾಟನೆ ನೆರವೇರಿಸುವರು. ಸ್ಥಳೀಯ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎ.ಪಿ.ರೇಣುಕಾಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರು, ಶಾಸಕರು, ವಿವಿಧ ಹಂತದ ಜನಪ್ರತಿನಿಧಿಗಳು ಭಾಗವಹಿಸುವರು.
ಲಕ್ಷಾಂತರ ಜನರ ನಿರೀಕ್ಷೆ: ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲು ಬಂಜಾರ ಸಮಾಜದ ಲಕ್ಷಾಂತರ ಜನರು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಸೂರಗೊಂಡನಕೊಪ್ಪಕ್ಕೆ ಆಗಮಿಸುವ ನಿರೀಕ್ಷೆ ಇದೆ. ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ್, ಚಿತ್ರದುರ್ಗ, ಶಿವಮೊಗ್ಗ, ಚಕ್ಕಮಗಳೂರು ಜಿಲ್ಲೆಗಳ ವಿವಿಧ ಗ್ರಾಮ ಹಾಗೂ ತಾಂಡಾಗಳಿಂದ ಮಾಲಾಧಾರಿಗಳು ಬರಿಗಾಲಿನಲ್ಲಿ ಪಾದಯಾತ್ರೆಯ ಮೂಲಕ ಸಂತಸೇವಾಲಾಲ್‌ರ ಕ್ಷೇತ್ರಕ್ಕೆ ಬರುವುದು ವಿಶೇಷವಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಎಲ್ಲ ಭಕ್ತರಿಗೆ ಕುಡಿಯುವ ನೀರು, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.