ಉದಯವಾಣಿ ಸಮಾಚಾರ
ಹೊನ್ನಾಳಿ: ಪಟ್ಟಣದ ದೊಡ್ಡಕೇರಿ ಶ್ರೀ ಬೀರಲಿಂಗೇಶ್ವರ ದೇವರ ಕಾರ್ತೀಕೋತ್ಸವದ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಯ ಮೂರನೇ ದಿನ ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದ ಪೈಲ್ವಾನರು ಭಾಗವಹಿಸಿ ಪಂದ್ಯಾವಳಿ ಕಳೆಗಟ್ಟುವಂತೆ ಮಾಡಿದರು.
ಪ್ರಮುಖವಾಗಿ ಮಹಾರಾಷ್ಟ್ರದ ಚಾಂಪಿಯನ್ ಲೋಕತ್ ಪವಾರ್ ಹಾಗೂ ‘ಕರ್ನಾಟಕ ಕುಮಾರ’ ಪ್ರಶಸ್ತಿ ವಿಜೇತ ಮಹೇಶ್ ಅಥಣಿ ನಡೆವೆ ನಡೆದ ಕುಸ್ತಿ ಪ್ರೇಕ್ಷಕರ ಗಮನ ಸೆಳೆಯಿತು. ಇವರ ಜೊತೆಗೆ ಹೊರ ರಾಜ್ಯಗಳಿಂದ ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಕುಸ್ತಿ ಆಡಲು ಬಂದಿದ್ದು ವಿಶೇಷವಾಗಿತ್ತು. ಇದಕ್ಕೆ ಕಾರಣ ಡಿಸೆಂಬರ್ ತಿಂಗಳಿನಿಂದ ಹಿಡಿದು ಜನವರಿ ತಿಂಗಳಲ್ಲಿ ಕಾರ್ತಿಕೋತ್ಸವದ ಅಂಗವಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಸೇರಿದಂತೆ ಅನೇಕ ತಾಲೂಕುಗಳಲ್ಲಿ ಕುಸ್ತಿ ಪಂದ್ಯಗಳನ್ನು ಆಯೋಜಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಪೈಲ್ವಾನರು ಒಂದೊಂದು ಭಾಗದಲ್ಲಿ ಕುಸ್ತಿ ಪಂದ್ಯಗಳನ್ನು ಆಡುತ್ತಿರುವುದು
ಕುಸ್ತಿಪ್ರಿಯರಿಗೆ ಮುದ ನೀಡುತ್ತಿದೆ.
ಕುಸ್ತಿ ಕಮಿಟಿಯವರು ಮೂರನೇ ದಿನದಲ್ಲಿ 1 ಸಾವಿರ ರೂ.ದಿಂದ ಹಿಡಿದು ಎಂಟು ಸಾವಿರ ರೂ.ದವರೆಗೆ ಹಾಗೂ ಹೆಸರಾಂತ ಇಬ್ಬರು ಪೈಲ್ವಾನರಿಗೆ 30 ಸಾವಿರ ರೂ.ವರೆಗೆ ಬಹುಮಾನ ಘೋಷಿಸಿದರು.ಪೈಲ್ವಾನರ ಖ್ಯಾತಿಗೆ ತಕ್ಕಂತೆ ನಗದು ಬಹುಮಾನ ಹಾಗೂ ಬೆಳ್ಳಿ ಗದೆ ನೀಡಿ ಗೌರವಿಸಲಾಯಿತು.
ನಗದು ಬಹುಮಾನಕ್ಕೆ ದೇಣಿಗೆ ನೀಡಿದ ದಾನಿಗಳಿಗೆ, ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ದೇವರ ಗಣಮಕ್ಕಳಾದ ಅಣ್ಣಪ್ಪಸ್ವಾಮಿ, ಪ್ರಭುಸ್ವಾಮಿ, ಕುಸ್ತಿ ಲೈಸೆನ್ಸ್ ದಾರರಾದ ಎಚ್.ಬಿ. ಗಿಡ್ಡಪ್ಪ, ತೆಂಗಿನಮರದ ಮಾದಪ್ಪ, ಪರಸಣ್ಣಾರ ನರಸಿಂಹಪ್ಪ, ಗೌಡ್ರು ನರಸಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪುರಸಭೆ ಸದಸ್ಯ ಧರ್ಮಪ್ಪ, ಕರವೇ ಅಧ್ಯಕ್ಷ ವಿನಯ್ ವಗ್ಗರ್, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಮುಖಂಡ ಟಿ.ಜಿ. ರಮೇಶ ಗೌಡ, ಡಾ| ಜಗನ್ನಾಥಬಾಬು, ಮಾಜಿ ಸೈನಿಕ ಎಂ. ವಾಸಪ್ಪ, ಕುಸ್ತಿ ಕಮಿಟಿ ಅಧ್ಯಕ್ಷ ಎಚ್.ಬಿ. ಅಣ್ಣಪ್ಪ, ಗೌರವಾಧ್ಯಕ್ಷ ಎನ್.ಕೆ. ಆಂಜನೇಯ, ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ರವಿ ಗಾಳಿ, ಖಜಾಂಚಿ ಕಾಳಿಂಗಪ್ಪ, ಕತ್ತಿಗೆ ನಾಗರಾಜ್, ಎಚ್.ಡಿ. ವಿಜೇಂದ್ರಪ್ಪ, ಕಾಟ್ಯಾ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.