ಹೊನ್ನಾಳಿ: ಪಟ್ಟಣದಲ್ಲಿ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿದ್ದು ಇದರಿಂದ ಜನ, ಜಾನುವಾರು, ಪಶು ಪಕ್ಷಿಗಳು ತತ್ತರಿಸಿ ಹೋಗಿವೆ. ಬೆಳಗ್ಗೆ 8ರಿಂದಲೇ ಪ್ರಾರಂಭವಾಗುವ ಸೂರ್ಯನ ಬಿಸಿಲಿನ ಪ್ರತಾಪ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಝಳದಿಂದ ಜನರು ನೆರಳು ಹುಡುಕುವಂತೆ ಮಾಡುತ್ತಿದೆ. ಹಳ್ಳಿಗಳಿಂದ ಬಂದಂತಹ ಜನರು ಬೇಗನೆ ಕೆಲಸ ಮುಗಿಸಿಕೊಂಡು ಮಧ್ಯಾಹ್ನದ ಹೊತ್ತಿಗೆ ತಮ್ಮ ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ.
ಪಟ್ಟಣದಲ್ಲಿ ಸೋಮವಾರ ದಿನದ ಉಷ್ಣಾಂಶ 37ರಿಂದ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಏಪ್ರಿಲ್ ಮತ್ತು ಮೇ ತಿಂಗಳು ಇನ್ನು ಹೆಚ್ಚಾಗುವ ಸಂಭವವಿದ್ದು, ಉಷ್ಣಾಂಶ ಹೆಚ್ಚಾದರೆ ಬದುಕುವುದು ಹೇಗೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಬಿಸಿಲಿನ ತಾಪ ಕಡಿಮೆ ಮಾಡಿಕೊಳ್ಳಲು ಜನರು ಕಲ್ಲಂಗಡಿ ಹಣ್ಣು ಹಾಗೂ ವಿವಿಧ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಚಹಾದ ಅಂಗಡಿಗಳು ವ್ಯಾಪಾರವಿಲ್ಲದೆ ಬಿಕೋ ಎನ್ನುತ್ತಿದ್ದರೆ ಜ್ಯೂಸ್ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ.
ಜ್ಯೂಸ್ ಅಂಗಡಿಗಳು ಫುಲ್ ಬಿಜಿ: ಪಟ್ಟಣದ ಪ್ರಮುಖ ವೃತ್ತಗಳಾದ ಸಂಗೊಳ್ಳಿ ರಾಯಣ್ಣ ವೃತ್ತ, ಖಾಸಗಿ ಬಸ್ ನಿಲ್ದಾಣ, ಹಳೆ ಸರಕಾರಿ ಆಸ್ಪತ್ರೆ, ಜಯ ಚಾಮರಾಜೇಂದ್ರ ವೃತ್ತಗಳಲ್ಲಿರುವ ಕಲ್ಲಂಗಡಿ ಹಣ್ಣುಗಳ ರಾಶಿ ದಾರಿ ಹೋಕರ ದಾಹ ತಣಿಸಲು ಕೈಬೀಸಿ ಕರೆಯುತ್ತಿವೆ. ಬಿಸಿಲಿನ ಝಳಕ್ಕೆ ಬಸವಳಿದ ಜನರು ಎಳೆನೀರು, ಕಬ್ಬಿನ ಹಾಲು, ಮಜ್ಜಿಗೆ ಮತ್ತು ಹಣ್ಣಿನ ಜೂಸ್‌ಗಳಿಗೆ ಮೊರೆ ಹೋಗುತ್ತಿದ್ದಾರೆ.
ಕಲ್ಲಂಗಡಿಗೆ ಭಾರೀ ಬೇಡಿಕೆ: ಕಲ್ಲಂಗಡಿ ಹಣ್ಣಿಗೂ ಬೇಡಿಕೆ ಹೆಚ್ಚಾಗಿದ್ದು ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆಗೆ ಹೊಂದಿಕೊಂಡಂತೆ ಖಾಲಿ ಜಾಗಗಳಲ್ಲಿ ಹಣ್ಣಿನ ರಾಶಿ ಹಾಕಿಕೊಂಡಿರುವ ಹಣ್ಣಿನ ವ್ಯಾಪಾರಿಗಳು ತಿಂಗಳುಗಟ್ಟಲೇ ಇಲ್ಲೇ ಬಿಡಾರ ಹೂಡಿ ವ್ಯಾಪಾರಕ್ಕೆ ಪ್ರಾರಂಭ ಮಾಡಿದ್ದಾರೆ. ಖಾಸಗಿ ಬಸ್‌ನಿಲ್ದಾಣ ಸೇರಿದಂತೆ ವಿವಿಧೆಡೆ ಕಲ್ಲಂಗಡಿ ಹಣ್ಣಿನ ಮಾರಾಟ ಜೋರಾಗಿ ನಡೆಯುತ್ತಿದೆ. ಕಲ್ಲಂಗಡಿ ಹಣ್ಣಿನ ವರ್ತಕರು ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ಕಲ್ಲಂಗಡಿ ಹಣ್ಣುಗಳನ್ನು ತಂದು ಇಲ್ಲಿ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ.
ಬೇಸಿಗೆಯಲ್ಲಿ ಕಲ್ಲಂಗಡಿ ಹೆಚ್ಚು ಖರೀದಿ: ಕೆಲವರು ಸ್ಥಳದಲ್ಲೇ ಕಲ್ಲಂಗಡಿ ಹಣ್ಣು ಜೊತೆ ಇತರೆ ಹಣ್ಣುಗಳ ಪೀಸ್ ಗಳೊಂದಿಗೆ ಉಪ್ಪು, ಖಾರ ಹಾಕಿಸಿಕೊಂಡು ತಿಂದರೆ ಇನ್ನು ಕೆಲವರು ಕತ್ತರಿಸಿದ ಕಲ್ಲಂಗಡಿ ಹಣ್ಣುಗಳನ್ನು ನೇರವಾಗಿ ತಿಂದು ತಮ್ಮ ದಾಹ ತೀರಿಸಿಕೊಳ್ಳುತ್ತಿದ್ದಾರೆ. ಮತ್ತೆ ಕೆಲ ಗ್ರಾಹಕರು ಹಣ್ಣುಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕಲ್ಲಂಗಡಿ ಹಣ್ಣಿನ ಗಾತ್ರಕ್ಕೆ ತಕ್ಕಂತೆ ರೂ.50 ರಿಂದ 150 ರವರೆಗೆ ಬೆಲೆಗೆ ಮಾರಾಟವಾಗುತ್ತಿವೆ.
ಹೊರರಾಜ್ಯದ ಕಲ್ಲಂಗಡಿಗೂ ಬೇಡಿಕೆ: ವರ್ಷವಿಡೀ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣು ಇರುತ್ತದೆ. ಆದರೆ ಬೇಸಿಗೆಯಲ್ಲಿ ಮಾರಾಟ ಹೆಚ್ಚು. 2 ರಿಂದ 4 ಕ್ವಿಂಟಲ್ ನಷ್ಟು ಕಲ್ಲಂಗಡಿ ಪ್ರತಿದಿನ ಮಾರಾಟವಾಗುತ್ತದೆ.
ಸಾಮಾನ್ಯ ದಿನಗಳಲ್ಲಿ 1 ರಿಂದ 2 ಕ್ವಿಂಟಲ್ ಮಾರಾಟವಾದರೆ ಹೆಚ್ಚು. ಬೇಸಿಗೆಯಲ್ಲೇ ಬಹುತೇಕ ಜನ
ಹೆಚ್ಚು ಖರೀದಿಸುತ್ತಾರೆ. ಮಾರುಕಟ್ಟೆಯಲ್ಲಿ ನಾಮದಾರಿ, ಸುಪ್ರೀತ್ ಎಂಬ ಎರಡು ತಳಿಗಳ ಕಲ್ಲಂಗಡಿ ಹಣ್ಣನ್ನು ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ತಂದು ಮಾರುತ್ತಿದ್ದಾರೆ.
ಎಂ.ಪಿ.ಎಂ. ವಿಜಯಾನಂದಸ್ವಾಮಿ.