ಹೊನ್ನಾಳಿ: ಪ್ರತಿ ಚುನಾವಣೆಯಲ್ಲಿ ನಿಯಮಗಳು ಬದಲಾಗುತ್ತಿರುತ್ತವೆ. ಹೊಸ ಬದಲಾವಣೆಗೆ ಹೊಂದಿಕೊಂಡು ಮತಗಟ್ಟೆ ಕೇಂದ್ರದ ಪಿಆರ್‌ಒ ಮತ್ತು ಎಪಿಆರ್ ಒಗಳು ಕಾರ್ಯ ನಿರ್ವಹಿಸಬೇಕು ಎಂದು ದಾವಣಗೆರೆ ಲೋಕಸಭಾ ಚುನಾವಣಾ
ವ್ಯಾಪ್ತಿಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿ ಕಾರಿ ಸುರೇಶ್ ರೆಡ್ಡಿ ಹೇಳಿದರು.
ಪಟ್ಟಣದ ಗಂಗಮ್ಮ ವೀರಭದ್ರಶಾಸ್ತ್ರಿ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಮತಗಟ್ಟೆ ಕೇಂದ್ರಗಳ ಪಿಆರ್‌ಒ ಮತ್ತು ಎಪಿಆರ್‌ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೆಕ್ಟರ್ ಅಧಿಕಾರಿಗಳು ಇವಿಎಂ, ವಿವಿಪ್ಯಾಟ್ ಸೇರಿದಂತೆ ಮತದಾನ ಪ್ರಕ್ರಿಯೆ ಕುರಿತು ತರಬೇತಿ ನೀಡುವರು. ಏನೇ ಅನುಮಾನವಿದ್ದಲ್ಲಿ ಕೇಳಿ ಪರಿಹರಿಸಿಕೊಳ್ಳಬೇಕು ಎಂದರು.
ಪಿಆರ್‌ಒ ಮತ್ತು ಎಪಿಆರ್‌ಒಗಳಿಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗುತ್ತಿದೆ. ಮೊದಲನೆ ಹಂತ ತಾಲೂಕು ಕೇಂದ್ರದಲ್ಲಿ ಹಾಗೂ ಎರಡನೇ ಹಂತದ ತರಬೇತಿಯನ್ನು ಬೇರೆ ತಾಲೂಕಿನಲ್ಲಿ ನೀಡಲಾಗುವುದು. ಇದರಿಂದ ಮತಗಟ್ಟೆ ಕೇಂದ್ರದ ಎಲ್ಲಾ ಸಿಬ್ಬಂದಿ
ಪರಸ್ಪರ ಪರಿಚಯವಾಗುತ್ತದೆ ಎಂದು ಹೇಳಿದರು.
ತರಬೇತಿ 10ಗಂಟೆಗೆ ಎಂದು ತಿಳಿಸಿದ್ದರೂ ಮತಗಟ್ಟೆ ಪಿಆರ್‌ಒ ಹಾಗೂ ಎಪಿಆರ್ ಒಗಳು 11.30ರವರೆಗೂ ತರಬೇತಿ ಕೇಂದ್ರಕ್ಕೆ ಬರುವದನ್ನು ಕಂಡ ತಹಶೀಲ್ದಾರ್ ಮಲ್ಲಿಕಾರ್ಜುನ ಅವರ ಮೇಲೆ ರೇಗಾಡಿದ್ದೂ ನಡೆಯಿತು.
12 ಕೊಠಡಿಗಳಲ್ಲಿ 23 ಸೆಕ್ಟರ್ ಅಧಿಕಾರಿಗಳು ಪ್ರಾತ್ಯಕ್ಷಿಕೆ ತೋರಿಸಿ ತರಬೇತಿ ನೀಡಿದರು. ನ್ಯಾಮತಿ ತಹಶೀಲ್ದಾರ್ ರೇಣುಕಾ, ಉಪ ತಹಶೀಲ್ದಾರ್ ಎನ್.ನಾಗರಾಜಪ್ಪ, ಇತರ ಸಿಬ್ಬಂದಿ ಇದ್ದರು.