Advertisement

ಬೇಸಿಗೆಯ ನೀರಿನ ಸಮಸ್ಯೆ ನೀಗಿಸಿದ ಮಳೆ!

11:26 AM Mar 14, 2020 | Naveen |

ಹೊನ್ನಾಳಿ: ಹೊನ್ನಾಳಿ ಮತ್ತು ನೂತನ ನ್ಯಾಮತಿ ತಾಲೂಕುಗಳಲ್ಲಿ ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಸಾಧ್ಯತೆಗಳು ತೀರಾ ಕಡಿಮೆ. ಕಳೆದ ವರ್ಷ ಆಗಸ್ಟ್‌ ತಿಂಗಳಿನಿಂದ ನವೆಂಬರ್‌ ತಿಂಗಳವರೆಗೆ ಸುರಿದ ಹಿಂಗಾರು ಮಳೆ ಈ ಬಾರಿಯ ಬೇಸಿಗೆ ನೀರಿನ ಸಮಸ್ಯೆಯನ್ನು ಸ್ವಲ್ಪ ತಗ್ಗಿಸಿದೆ ಎನ್ನಬಹುದು.

Advertisement

ತುಂಗಭದ್ರಾ ನದಿ ತಟದಲ್ಲಿರುವ ಅರೆ ಮಲೆನಾಡು ಹೊನ್ನಾಳಿ ತಾಲೂಕು ಯಾವತ್ತೂ ಭೀಕರ ಬರ ಅಥವಾ ನೀರಿನ ಸಮಸ್ಯೆ ಅನುಭವಿಸಿಲ್ಲ. ನ್ಯಾಮತಿ, ಸುರಹೊನ್ನೆ, ಫಲವನ್ನಹಳ್ಳಿ, ಸೋಗಿಲು, ಚಟ್ನಹಳ್ಳಿ ಸೇರಿದಂತೆ ಇತರ ಗ್ರಾಮಗಳು ನೀರಿನ ಬವಣೆ ಅನುಭವಿಸಿದ್ದವು. ಈ ಬಾರಿ ಸುರಿದ ಉತ್ತಮ ಮಳೆಗೆ ಕೆರೆ, ಕಟ್ಟೆಗಳು ತುಂಬಿವೆ. ಅಂತರ್ಜಲ ಮಟ್ಟವೂ ಹೆಚ್ಚಿದ್ದು, ಗ್ರಾಮಗಳ ಕೊಳವೆ ಬಾವಿಗಳಲ್ಲಿ ಸಮೃದ್ಧ ನೀರು ಬರುತ್ತಿದೆ.

ಕಳೆದ 15 ವರ್ಷಗಳಿಂದ ನೀರನ್ನೇ ಕಾಣದ ನ್ಯಾಮತಿ ತಾಲೂಕಿನ ಮಾದನಬಾವಿ ಕೆರೆಗೆ ಈ ಬಾರಿ ಹೆಚ್ಚು ನೀರು ಹರಿದು ಬಂದು ತುಂಬಿದ್ದು, ಈಗ ಪಕ್ಷಿಗಳಿಗೆ ಆಶ್ರಯವಾಗಿದೆ. ಕಳೆದ ವರ್ಷದ ಭಾರೀ ಮಳೆಗೆ ಸೌಳಂಗ ಮತ್ತು ಕತ್ತಿಗೆ ಕೆರೆಗಳು ಪೂರ್ಣ ತುಂಬಿ ಕೋಡಿ ಬಿದ್ದಿವೆ.

ನೂತನ ನ್ಯಾಮತಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಾಗೂ ತಾಲೂಕು ಕೇಂದ್ರ ನ್ಯಾಮತಿ ಪಟ್ಟಣಕ್ಕೆ ಹೊಂದಿಕೊಂಡಿರುವ ಸುರಹೊನ್ನೆ ಗ್ರಾಮದಲ್ಲಿ ನೀರಿನ ಸೆಲೆ ಸಾಕಷ್ಟು ಇಲ್ಲದ ಕಾರಣ ಪಟ್ಟಣ ಹಾಗೂ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸದಾ ಕಾಡುತ್ತಿತ್ತು. 2009ರಲ್ಲಿ ಅಂದಿನ ಬಿಜೆಪಿ ಸರ್ಕಾರ ಹೊನ್ನಾಳಿ ತುಂಗಭದ್ರಾ ನದಿಯಿಂದ ಗೋವಿನಕೋವಿ ಗ್ರಾಮದ ಮೂಲಕ ಸುಮಾರು 13 ಕಿಮೀ ದೂರದ ನ್ಯಾಮತಿ-ಸುರಹೊನ್ನೆ ಅವಳಿ ಗ್ರಾಮಗಳಿಗೆ 10.5ಕೋಟಿ ರೂ. ಅನುದಾನದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿತ್ತು. ನದಿ ತಟದಲ್ಲಿರುವ ಗೋವಿನಕೋವಿ ಗ್ರಾಮದ ಬಳಿ ಜಾಕ್‌ವೆಲ್‌ ನಿರ್ಮಿಸಿ ಅರೇಹಳ್ಳಿ ಗ್ರಾಮದ ಬಳಿ ನೀರು ಸಂಗ್ರಹ ತೊಟ್ಟಿ ನಿರ್ಮಿಸಿ ನ್ಯಾಮತಿ ಮತ್ತು ಸುರಹೊನ್ನೆ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಯಿತು.

ಇದರಿಂದ ಅವಳಿ ಗ್ರಾಮಗಳ ನೀರಿನ ಬವಣೆಯೂ ತಪ್ಪಿದೆ. ಹೊನ್ನಾಳಿ ತಾಲೂಕಿನ ದಿಡಗೂರು, ಹರಳಹಳ್ಳಿ, ಹೊನ್ನಾಳಿ, ಬಳ್ಳೇಶ್ವರ, ಕೊನಾಯ್ಕನಹಳ್ಳಿ ಸೇರಿದಂತೆ ಇತರ ಗ್ರಾಮಗಳು ನದಿ ಪಾತ್ರದಲ್ಲಿ ಇರುವುದರಿಂದ ನೀರಿನ ಕೊರತೆ ಇಲ್ಲ. ಬಿಸಿಲಿನ ಬೇಗೆ ಹೆಚ್ಚಾದರೆ ಏಪ್ರಿಲ್‌ ಕೊನೆ ವಾರದಿಂದ ಮೇ ತಿಂಗಳ ಅಂತ್ಯದವರೆಗೆ ನ್ಯಾಮತಿ ತಾಲೂಕಿನ ಜಿನಹಳ್ಳಿ, ಫಲವನಹಳ್ಳಿ, ಸುರಹೊನ್ನೆ, ರಾಮೇಶ್ವರ, ಶಾಂತಿನಗರ, ಚಟ್ನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬರಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ. ತಾಲೂಕಿನಲ್ಲಿ 26 ಚೆಕ್‌ ಡ್ಯಾಂಗಳ ನಿರ್ಮಾಣವಾಗಿದ್ದು ಎಲ್ಲಾ ಚೆಕ್‌ಡ್ಯಾಂಗಳು ಕಳೆದ ವರ್ಷದ ಮಳೆಗೆ ತುಂಬಿವೆ. ಇದರಿಂದ ಕೊಳವೆ ಬಾವಿಗಳು ಜಲಪೂರ್ಣವಾಗಿವೆ.

Advertisement

ಕಳೆದ ಬಾರಿಯ ಉತ್ತಮ ಮಳೆಗೆ ತಾಲೂಕಿನ ಬಹುತೇಕ ಕೆರೆಕಟ್ಟೆಗಳು ತುಂಬಿವೆ. ಹಾಗಂತ ಸುಮ್ಮನೆ ಕೂರಲು ಆಗುವುದಿಲ್ಲ. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಾಗುವುದು. ಇದರಿಂದ ಭೂಮಿಯಲ್ಲಿ ಜಲಪೂರ್ಣಗೊಳ್ಳುವುದಲ್ಲದೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿದಂತಾಗುತ್ತದೆ.
ಎಂ.ಪಿ.ರೇಣುಕಾಚಾರ್ಯ,
ಶಾಸಕರು, ಹೊನ್ನಾಳಿ ಕ್ಷೇತ್ರ.

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಸದ್ಯಕ್ಕೆ ನೀರಿನ ಕೊರತೆ ಇಲ್ಲ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಎದುರಾಗುವ ನೀರಿನ ಸಮಸ್ಯೆ ಬಗ್ಗೆ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಗಂಗಾಧರಮೂರ್ತಿ,
ತಾ.ಪಂ ಇಒ, ಹೊನ್ನಾಳಿ.

„ಎಂ.ಪಿ.ಎಂ. ವಿಜಯಾನಂದಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next