ಬೀಜಿಂಗ್: ಹಾಂಗ್ ಕಾಂಗ್ ನ ಪ್ರಸಿದ್ಧ ಜಂಬೋ ಫ್ಲೋಟಿಂಗ್ (ತೇಲುವ) ರೆಸ್ಟೋರೆಂಟ್ ಪ್ರತಿಕೂಲ ಹವಾಮಾನದ ಪರಿಣಾಮ ಮುಳುಗಿ ಹೋಗಿರುವ ಘಟನೆ ಇತ್ತೀಚೆಗೆ ದಕ್ಷಿಣ ಚೀನಾದ ಸಮುದ್ರದಲ್ಲಿ ನಡೆದಿದ್ದು, ಇದರೊಂದಿಗೆ ಕಳೆದ 46 ವರ್ಷಗಳಿಂದ ಪ್ರವಾಸಿಗರ ಹಾಗೂ ಗಣ್ಯಾತೀಗಣ್ಯರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಜಂಬೋ ತೇಲುವ ರೆಸ್ಟೋರೆಂಟ್ ಇತಿಹಾಸದ ಪುಟ ಸೇರಿದಂತಾಗಿದೆ.
ಇದನ್ನೂ ಓದಿ:ಅಗ್ನಿಪಥ್ ಯೋಜನೆ ವಿರುದ್ಧ ಹೋರಾಟ: ರಾಜ್ಯ ಹಿರಿಯ ನಾಯಕರಿಗೆ ಕೈ ಹೈಕಮಾಂಡ್ ಬುಲಾವ್
ದುರ್ಘಟನೆಯಲ್ಲಿ ರೆಸ್ಟೋರೆಂಟ್ ನ ಯಾವುದೇ ಸಿಬ್ಬಂದಿ ಗಾಯಗೊಂಡಿಲ್ಲ ಎಂದು ಅಬೇರ್ಡೀನ್ ರೆಸ್ಟೋರೆಂಟ್ ಎಂಟರ್ ಪ್ರೈಸಸ್ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
Related Articles
ದಕ್ಷಿಣ ಚೀನಾ ಸಮುದ್ರದಲ್ಲಿ ಕ್ಸಿಶಾ ದ್ವೀಪ ಪ್ರದೇಶವನ್ನು ಹಾದು ಹೋಗುತ್ತಿದ್ದ ಸಂದರ್ಭದಲ್ಲಿ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ತೇಲುವ ರೆಸ್ಟೋರೆಂಟ್ ಮುಳುಗಿರುವುದಾಗಿ ವರದಿ ವಿವರಿಸಿದೆ. ಈ ತೇಲುವ ರೆಸ್ಟೋರೆಂಟ್ 1976ರಿಂದಲೂ ಅಬೇರ್ಡೀನ್ ಬಂದರು ಪ್ರದೇಶದಲ್ಲಿ ಕಾರ್ಯಾಚರಿಸುತ್ತಿತ್ತು.
ರೆಸ್ಟೋರೆಂಟ್ ಜವಾಬ್ದಾರಿ ಹೊತ್ತಿದ್ದ ಟೌಯಿಂಗ್ ಕಂಪನಿ ತೇಲುವ ಹಡಗಿನ ರೆಸ್ಟೋರೆಂಟ್ ಅನ್ನು ರಕ್ಷಿಸುವ ಪ್ರಯತ್ನ ವಿಫಲವಾಗಿತ್ತು. ಅಂದಾಜು ಒಂದು ಸಾವಿರ ಮೀಟರ್ ನಷ್ಟು ನೀರಿನ ಆಳವಿದ್ದು, ಇದೊಂದು ತುಂಬಾ ದುಃಖಕರ ಸಂಗತಿಯಾಗಿದೆ ಎಂದು ಕಂಪನಿ ತಿಳಿಸಿದೆ.
ಚೀನಿ ಸಾಮ್ರಾಜ್ಯಶಾಹಿ ಅರಮನೆಯಂತೆ ಹೋಲುವ ಈ ಹಡಗು 1976ರಿಂದ ಕಾರ್ಯಾಚರಿಸುತ್ತಿದ್ದು, ರಾಣಿ ಎಲಿಜಬೆತ್ || ಮತ್ತು ಟಾಮ್ ಕ್ರೂಸ್ ನಂತಹ ಪ್ರಸಿದ್ಧ ವ್ಯಕ್ತಿಗಳು ಭೇಟಿ ನೀಡಿದ್ದರು. 2020ರಲ್ಲಿ ಕೋವಿಡ್ ಸೋಂಕು ಹೆಚ್ಚಳವಾದ ಸಂದರ್ಭದಲ್ಲಿ ಜಂಬೋ ರೆಸ್ಟೋರೆಂಟ್ ಬಂದ್ ಆಗಿತ್ತು.
ಕೋವಿಡ್ ನಿರ್ಬಂಧಗಳನ್ನು ಸಡಿಲಿಕೆ ಮಾಡಿದ ಬಳಿಕ ಹೊಸ ಮಾಲೀಕರ ಹುಡುಕಾಟ ಹಾಗೂ ಹಡಗು, ಸಿಬ್ಬಂದಿ ನಿರ್ವಹಣೆಗೆ ಹಣಕಾಸು ನೆರವು ಪಡೆಯುವಲ್ಲಿ ಕಂಪನಿ ಅಸಮರ್ಥವಾಗಿತ್ತು ಎಂದು ವರದಿ ತಿಳಿಸಿದೆ.