ಬೆಂಗಳೂರು: ಟೆಲಿಗ್ರಾಂನಲ್ಲಿ ಪರಿಚಯವಾದ ಮಹಿಳೆಯ ಮಾತಿನ ಮೋಡಿಗೆ ಮರುಳಾದ ಉದ್ಯಮಿಯೊಬ್ಬ ಹನಿಟ್ರ್ಯಾಪ್ ಬಲೆಗೆ ಸಿಲುಕಿ ಇದೀಗ ನ್ಯಾಯಕ್ಕಾಗಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ವೈಟ್‌ಫೀಲ್ಡ್ ನಿವಾಸಿ 27 ವರ್ಷದ ಯುವ ಉದ್ಯಮಿ ಇತ್ತೀಚೆಗೆ ಟೆಲಿಗ್ರಾಂ ನಲ್ಲಿ ಮೆಹರ್ ಎಂಬ ಮಹಿಳೆಯ ಪರಿಚಯ ವಾಗಿತ್ತು. ಇಬ್ಬರೂ ಚಾಟ್‌ಮಾಡಿಕೊಂಡು ಮೊಬೈಲ್ ನಂಬರ್ ವಿನಿಮಯ ಮಾಡಿಸಿ ಕೊಂಡಿದ್ದರು. ಇತ್ತ ಮಹಿಳೆ ಯು ನನ್ನ ಗಂಡ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ನಾನು ಸೆಕ್ಸ್‌ಗಾಗಿ ಸಂಗಾತಿಯ ಹುಡುಕಾಟದಲ್ಲಿದ್ದೇನೆ ಎಂದು ಹೇಳಿದ್ದಳು. ಮಾ.3ರಂದು ಫೋಟೋ ಹಾಗೂ ತಾನಿರುವ ಲೊಕೇಶನ್ ಕಳುಹಿಸಿ ದೂರುದಾರ ಉದ್ಯಮಿಯನ್ನು ಜೆ.ಪಿ.ನಗರ 5ನೇ ಹಂತದಲ್ಲಿರುವ ಅಮಿನಾಮಂಜಿಲ್ ಕಟ್ಟಡಕ್ಕೆ ಕರೆಸಿಕೊಂಡಿದ್ದಾಳೆ.
ದೂರುದಾರ ಮನೆಗೆ ಪ್ರವೇಶಿಸುತ್ತಿದ್ದಂತೆ ಬೆಡ್ ರೂಮಿನಲ್ಲಿ ಕುಳಿತಿರುವಂತೆ ಮಹಿಳೆ ಸೂಚಿಸಿದ್ದಳು. ಇವರು ಬೆಡ್‌ರೂಂನಲ್ಲಿ ಕೆಲ ಹೊತ್ತು ಕುಳಿತಿದ್ದಾಗ ಏಕಾಏಕಿ ಬಂದ ಮೂವರು ಅಪರಿಚಿತ ಯುವಕರು ‘ಯಾರು ನೀನು ? ಇಲ್ಲಿಗೆ ಏಕೆ ಬಂದಿದ್ದೀಯಾ ಎಂದು ಬೆದರಿಸಿ ಉದ್ಯಮಿಯ ಮುಖಕ್ಕೆ ಗುದ್ದಿ ಹಲ್ಲೆ ಮಾಡಿದ್ದರು. ಬಳಿಕ ‘ನಿನ್ನನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಓಡಾಡಿಸುತ್ತೇವೆ, ಮಸೀದಿಗೆ ಕರೆದೊಯ್ದು ಮುಂಜಿ ಮಾಡಿಸಿ ಮೆಹರ್ ಜತೆಗೆ ವಿವಾಹ ಮಾಡಿಸುತ್ತೇವೆ. 3 ಲಕ್ಷ ರೂ ಕೊಟ್ಟರೆ ಬಿಟ್ಟು ಕಳಿಸುವುದಾಗಿ ಬೆದರಿದ್ದರು. ಬಳಿಕ ಉದ್ಯಮಿಯ ಮೊಬೈಲ್ ಕಸಿದುಕೊಂಡು ಫೋನ್ ಪೇ ಮೂಲಕ 21,500 ರೂ. ಅನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದರು. ರಾತ್ರಿ 8ರವರೆಗೂ ಜತೆಯಲ್ಲಿರಿಸಿಕೊಂಡ ಬಳಿಕ 2.5 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಕ್ರೆಡಿಟ್ ಕಾರ್ಡ್ ಮನೆಯಲ್ಲಿದೆ ಎಂದು ಉದ್ಯಮಿ ಹೇಳಿದ್ದರು. ನಿಮ್ಮ ಮನೆಗೆ ಹೋಗಿಯೇ ಕ್ರೆಡಿಟ್ ಕಾರ್ಡ್ ತರೋಣವೆಂದು ಆರೋಪಿಗಳು ಕಟ್ಟಡದ ಹೊರಗಡೆ ಕರೆತಂದಾಗ ಉದ್ಯಮಿ ತಪ್ಪಿಸಿಕೊಂಡು ಬಂದಿದ್ದರು. ಇತ್ತ ಉದ್ಯಮಿಯು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.