ಹೊಸದಿಲ್ಲಿ : ಕಳೆದ ಆಗಸ್ಟ್ 25ರಂದು ಪಂಚಕುಲದಲ್ಲಿ ಡೇರಾ ಹಿಂಸೆಯನ್ನು ಪ್ರಚೋದಿಸಿದ ಆರೋಪಕ್ಕೆ ಗುರಿಯಾದ ಬಳಿಕ ಇಂದಿನ ವರೆಗೂ ತಲೆಮರೆಸಿಕೊಂಡಿರುವ ಹನಿಪ್ರೀತ್ ಇನ್ಸಾನ್ ಳ ಬಂಧನಕ್ಕೆ ಪೊಲೀಸರು ತಮ್ಮ ಕೈಯಲ್ಲಿ ಅರೆಸ್ಟ್ ವಾರಂಟ್ ಹಿಡಿದುಕೊಂಡು ಹುಡುಕಾಟ ನಡೆಸುತ್ತಿದ್ದು ಇಂದು ಮಂಗಳವಾರ ಅವರು ದಿಲ್ಲಿಯ ಗ್ರೇಟರ್ ಕೈಲಾಶ್‌ನಲ್ಲಿನ ಆಕೆಯ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ. ಆದರೆ ಅಲ್ಲಿಯೂ ಆಕೆ ಇಲ್ಲದಿರುವುದನ್ನು ಕಂಡು ನಿರಾಶರಾಗಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆ ಮಾಡಿರುವ ಟ್ವೀಟ್ ಪ್ರಕಾರ, ಪೊಲೀಸರು ಇಂದು ಅರೆಸ್ಟ್ ವಾರಂಟ್ ಹಿಡಿದುಕೊಂಡು ಎ-9 ಗ್ರೇಟರ್ ಕೈಲಾಶ್ ನಿವಾಸದ ಮೇಲೆ ದಾಳಿ ನಡೆಸಿದರಾದರೂ ಅಲ್ಲಿ ಹನಿಪ್ರೀತ್ ಪತ್ತೆಯಾಗದಿರವುದರಿಂದ ನಿರಾಶರಾದ ಎಂದು ತಿಳಿದು ಬಂದಿದೆ.
ಇದೇ ರೀತಿ ರಾಷ್ಟ್ರ ರಾಜಧಾನಿಯ ಚಿತ್ತರಂಜನ್ ಪಾರ್ಕ್ ಪ್ರದೇಶದಲ್ಲಿನ ಇನ್ನೊಂದು ನಿವಾಸದ ಮೇಲೂ ದಾಳಿ ನಡೆಸಿದ ಪೊಲೀಸರಿಗೆ ಅಲ್ಲಿಯೂ ಹನಿಪ್ರೀತ್ ಪತ್ತೆಯಾಗಲಿಲ್ಲ ಎಂದು ಇನ್ನೊಂದು ವರದಿ ಹೇಳಿದೆ.
ಈ ನಡುವೆ ಡೇರಾ ಅನುಯಾಯಿಗಳು ಹೇಳಿರುವ ಪ್ರಕಾರ ಡೇರಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್, ತನ್ನ ದತ್ತು ಪುತ್ರಿ ಹನಿಪ್ರೀತ್ ಮೇಲೂ ಈ ಹಿಂದೆ ಅತ್ಯಾಚಾರ ಎಸಗಿದ್ದು ಆಕೆಯಿಂದ ಗಂಡು ಮಗುವನ್ನು ಪಡೆದು ಅದನ್ನು ಡೇರಾ ಉತ್ತರಾಧಿಕಾರಿಯನ್ನಾಗಿ ಮಾಡುವ ಇರಾದೆ ಹೊಂದಿದ್ದ ಎಂದು ಹೇಳಿದ್ದಾರೆ.
ಹನಿಪ್ರೀತ್ ಮತ್ತು ಗುರ್ಮಿತ್ ನಡುವಿನ ಸಂಬಂಧವು ಅಪ್ಪ – ಮಗಳ ಸಂಬಂಧವಾಗಿರಲಿಲ್ಲ; ಆಕೆ ಆತನ ಪ್ರೇಯಸಿಯಾಗಿದ್ದಳು ಮತ್ತು ಅವರಿಬ್ಬರೂ ಒಂದು ಹಾಸಿಗೆಯನ್ನು ಹಂಚಿಕೊಂಡು ಮಲಗುತ್ತಿದ್ದರು ಎಂದು ಹನಿಪ್ರೀತ್‌ಳ ಮಾಜಿ ಪತಿ ಹೇಳಿದ್ದಾರೆ.
ಈ ನಡುವೆ ಹನಿಪ್ರೀತ್ ಳ ವಕೀಲ ಪ್ರದೀಪ್ ಆರ್ಯ ಅವರು ಕಳೆದ ಸೋಮವಾರ ಹನಿಪ್ರೀತ್ ನಿರೀಕ್ಷಣಾ ಜಾಮಿನು ಕೋರಿಕೆ ಅರ್ಜಿಗೆ ಸಹಿಹಾಕಲು ತನ್ನ ಕಚೇರಿ ಬಂದಿದ್ದಳು ಎಂದು ಹೇಳಿರುವುದು ಪೊಲೀಸರಿಗೆ ಅಚ್ಚರಿ ಉಂಟುಮಾಡಿದೆ.
ಇಂದು ಮಂಗಳವಾರ ಹನಿಪ್ರೀತ್ ಳ ಜಾಮೀನು ಕೋರಿಕೆ ಅರ್ಜಿಯ ವಿಚಾರಣೆ ದಿಲ್ಲಿ ಹೈ ಕೋರ್ಟಿನಲ್ಲಿ ನಡೆಯಲಿದೆ.
“ನಾವು ಇಂದು ಮಂಗಳವಾರ ದಿಲ್ಲಿ ಹೈಕೋರ್ಟಿನಲ್ಲಿ ಹನಿಪ್ರೀತ್ ಳ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಲಿದ್ದೇವೆ ಮತ್ತು ಅದರ ತುರ್ತು ವಿಚಾರಣೆಯನ್ನು ಕೋರಿಲಿದ್ದೇವೆ’ ಎಂದು ವಕೀಲ ಆರ್ಯ ಹೇಳಿದ್ದಾರೆ.