Advertisement

ಕ್ಷೀರ ಮಳಿಗೆ ಮಾಲೀಕನಿಗೆ ಹನಿಟ್ರ್ಯಾಪ್‌: ಸೆರೆ

11:22 AM Nov 07, 2022 | Team Udayavani |

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಹನಿಟ್ರ್ಯಾಪ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಮಿಳುನಾಡು ಮೂಲದ ಹಾಲಿನ ವ್ಯಾಪಾರಿಗೆ ನಗರದ ಯುವತಿಯೊಬ್ಬಳು ಹನಿಟ್ರ್ಯಾಪ್‌ ಮಾಡಿ, ಇದೀಗ ತನ್ನ ಪ್ರಿಯಕರ ಸೇರಿ ಐವರ ಜತೆ ಸುದ್ದಗುಂಟೆಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

Advertisement

ಬಿಟಿಎಂ ಲೇಔಟ್‌ ನಿವಾಸಿ ಹಲೀಮಾ ಸಾದಿಯಾ ಅಲಿಯಾಸ್‌ ಪ್ರಿಯಾ(22), ಆಕೆಯ ಪ್ರಿಯಕರ ಜಾಹಿದ್‌ ಖುರೇಷಿ(30), ಈತನ ಸ್ನೇಹಿತರಾದ ಫ‌ರ್ಹಾನ್‌ ಖಾನ್‌(20), ಸೈಯದ್‌ ಮುತಾಹಿರ್‌ (20), ಇಸ್ಮಾಯಿಲ್‌(55) ಬಂಧಿತರು. ಆರೋಪಿಗಳು ತಮಿಳುನಾಡಿನ ಹೊಸೂರು ಸಮೀಪದ ತೆರುಪೇಟೆ ನಿವಾಸಿ ದಿಲೀಪ್‌ ಕುಮಾರ್‌(32)ಗೆ ಹನಿಟ್ರ್ಯಾಪ್‌ ಮಾಡಿ 50 ಸಾವಿರ ರೂ. ಸುಲಿಗೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯ ನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ದಿಲೀಪ್‌ ಕುಮಾರ್‌ ಹೊಸೂರಿನಲ್ಲಿ ಹಾಲಿನ ವ್ಯವಹಾರ ನಡೆಸುತ್ತಿದ್ದು, ಕಳೆದ ಅಕ್ಟೋಬರ್‌ನಲ್ಲಿ ವಾಟ್ಸ್‌ ಆ್ಯಪ್‌ ಮೂಲಕ ಅಪರಿಚಿತ ನಂಬರ್‌ನಿಂದ ಹಾಯ್‌ ಎಂದು ಸಂದೇಶ ಬಂದಿದ್ದು, ಪ್ರತಿಕ್ರಿಯಿಸಿ ಹೆಸರು, ವಿಳಾಸ ಕೇಳಿದಾಗ ಪ್ರಿಯಾ. ತಮಿಳುನಾಡು ಮೂಲದವಳು ಎಂದು ಹೇಳಿಕೊಂಡಿದ್ದಾಳೆ. ಸದ್ಯ ಬಿಟಿಎಂ ಲೇಔಟ್‌ನಲ್ಲಿ ವಾಸವಾಗಿದ್ದು, ಕೆಲಸ ಹುಡುಕುತ್ತಿದ್ದೇನೆ ಎಂದಿದ್ದಾಳೆ. ಅ.28ರಂದು ಬೆಳಗ್ಗೆಯೇ ಲೋಕೇಷನ್‌ ಕಳುಹಿಸಿದ ಪ್ರಿಯಾ, ಮನೆಯಲ್ಲಿ ಯಾರು ಇಲ್ಲ. ಬಂದರೆ ಭೇಟಿ ಆಗಬಹುದು ಎಂದು ಆಮಿಷವೊಡ್ಡಿದ್ದಾಳೆ. ಹೀಗಾಗಿ ಅದೇ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಕೆ ಮನೆಯೊಳಗೆ ದಿಲೀಪ್‌ ಹೋಗುತ್ತಿದ್ದಂತೆ ನಾಲ್ವರು ಆರೋಪಿಗಳು ಮನೆಗೆ ನುಗ್ಗಿ, ನೀನು ಯಾರೋ? ಏಕೆ ಬಂದಿದ್ದೀಯಾ?, ನಿನ್ನನ್ನು ಕರೆದಿರುವುದು ಯಾರು? ಎಂದೆಲ್ಲ ಕೇಳಿದ್ದಾರೆ. ಆಗ ಯುವತಿ ಆಹ್ವಾನ ನೀಡಿದ ಬಗ್ಗೆ ದಿಲೀಪ್‌ ವಿವರಿಸಿದ್ದಾನೆ. ನಂತರ ಆರೋಪಿಗಳು ನೀನು ಯಾವ ಕೆಲಸಕ್ಕೆ ಬಂದಿದ್ದೀಯ? ಎಂಬುದು ಗೊತ್ತು ಎಂದು ಬಟ್ಟೆ ಬಚ್ಚಿಸಿ ಯುವತಿಯ ಜತೆ ನಿಲ್ಲಿಸಿ ವಿಡಿಯೋ ಮತ್ತು ಫೋಟೋ ತೆಗೆದುಕೊಂಡಿದ್ದಾರೆ. ಅಲ್ಲದೆ, ದಿಲೀಪ್‌ ಜೇಬಿನಲ್ಲಿದ್ದ ಐಫೋನ್‌, ಕಾರಿನ ಕೀ, 26 ಸಾವಿರ ರೂ.ಕಸಿದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಬಳಿಕ ಒಂದು ಲಕ್ಷ ರೂ. ಕೊಡಬೇಕೆಂದು ಬೇಡಿಕೆ ಇಟ್ಟು, ಒಂದು ವೇಳೆ ಹಣ ಕೊಡದಿದ್ದರೆ ಈ ಪೋಟೋ, ವಿಡಿಯೋಗಳನ್ನು ಪತ್ನಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆಂದು ಬೆದರಿಸಿದ್ದಾರೆ. ಆಗ ದಿಲೀಪ್‌, ತನ್ನ ಸಹೋದರನಿಗೆ ಕರೆ ಮಾಡಿ 25 ಸಾವಿರ ರೂ. ಹಾಕಿಸಿಕೊಂಡು ಆರೋಪಿಗಳಿಗೆ ಕೊಟ್ಟಿದ್ದಾನೆ. ಆ ನಂತರ ಕಾರು ಕಸಿದುಕೊಂಡು ಬಾಕಿ 60 ಸಾವಿರ ರೂ. ಕೊಡಬೇಕು. ಕೊಟ್ಟ ನಂತರ ಕಾರು ಕೊಡುವುದಾಗಿ ಹೇಳಿ ಕಳುಹಿಸಿದ್ದರು. ಹಣಕ್ಕಾಗಿ ಆರೋಪಿಗಳು ನಿರಂತರವಾಗಿ ಕರೆ ಮಾಡುತ್ತಿದ್ದರಿಂತ ಬೇಸತ್ತ ದಿಲೀಪ್‌, ಸುದ್ದುಗುಂಟೆಪಾಳ್ಯ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ನಂಬರ್‌: ದಿಲೀಪ್‌ ಕುಮಾರ್‌ ಕೆಲ ವೆಬ್‌ಸೈಟ್‌ಗಳಲ್ಲಿ ಕೆಲ ಯುವತಿಯರ ಬಗ್ಗೆ ಶೋಧಿಸುತ್ತಿದ್ದ. ಆಗ ತನ್ನ ಮೊಬೈಲ್‌ ನಂಬರ್‌ ಅನ್ನು ಆ ವೆಬ್‌ಸೈಟ್‌ಗಳಲ್ಲಿ ಹಾಕಿದ್ದಾನೆ. ಅಲ್ಲದೆ, ವೆಬ್‌ಸೈಟ್‌ನಲ್ಲಿ ಸಿಗುವ ಯುವತಿಯರ ಜತೆ ಹೊರಗಡೆ ಹೋಗಿಬರುವ ಅಭ್ಯಾಸ ಇಟ್ಟುಕೊಂಡಿದ್ದ. ಇದೇ ವೇಳೆ ಪ್ರಿಯಾ ಹಾಗೂ ಆತನ ಪ್ರಿಯಕರ ಅಂತಹ ವೆಬ್‌ಸೈಟ್‌ನಲ್ಲಿ ಶೋಧಿಸಿದಾಗ ದಿಲೀಪ್‌ ಕುಮಾರ್‌ ನಂಬರ್‌ ಪಡೆದುಕೊಂಡು ಆತನನ್ನು ಹನಿಟ್ರ್ಯಾಪ್‌ ಖೆಡ್ಡಾಕ್ಕೆ ಬೀಳಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊಬೈಲ್‌ ನಂಬರ್‌ ಗಳನ್ನು ಹಾಕಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next