ಧಾರವಾಡ: ಬೇಸಿಗೆಯಲ್ಲಿ ಮಾವು ಮೇಳದ ಮೂಲಕ ಮಾವಿನ ಹಣ್ಣಿನ ರುಚಿ ಸವಿದಿರುವ ಧಾರವಾಡಿಗರಿಗೆ ಮಳೆಗಾಲ ಅಂತ್ಯದ ಬಳಿಕ ಜೇನು ಮೇಳವೂ ಲಭ್ಯವಾಗಲಿದೆ.
ಹೌದು. ಇಂತಹ ಮೇಳ ಆಯೋಜನೆಗೆ ಧಾರವಾಡದ ತೋಟಗಾರಿಕೆ ಇಲಾಖೆ ಮುಂದಾಗಿದೆ. ಪ್ರತಿ ವರ್ಷ ಮೇ ತಿಂಗಳಲ್ಲಿ ಮಾವು ಮೇಳ ಹಾಗೂ ಅದರ ಜತೆ ಸಸ್ಯಸಂತೆ ಕೈಗೊಂಡು ಯಶಸ್ಸು ಪಡೆದ ತೋಟಗಾರಿಕೆ ಇಲಾಖೆ, ಈಗ ಇದೇ ಮೊದಲ ಬಾರಿಗೆ ಜೇನು ಮೇಳ ಆಯೋಜನೆಗೆ ಚಿಂತನೆ ಕೈಗೊಂಡಿದೆ. ಅದಕ್ಕಾಗಿ ಈಗಿನಿಂದಲೇ ಒಂದಿಷ್ಟು ತಯಾರಿ ಮಾಡಿಕೊಳ್ಳುತ್ತಲಿದೆ. ದೇಸಿಯ ಜೇನು ತಳಿಗಳಲ್ಲಿ ವೈವಿಧ್ಯತೆಯಿದ್ದು, ಹೆಜ್ಜೇನು, ಕೋಲು ಜೇನು, ತುಡುವಿ ಜೇನು, ಮುಜೆಂಟಿ ಜೇನು ತಳಿಗಳನ್ನು ಗುರುತಿಸಲಾಗಿದೆ. ಇದರೊಂದಿಗೆ ವಿದೇಶಿ ತಳಿ ಎಪಿಸ್ ಮೆಲ್ಲಿಪೆರಾವನ್ನು ವ್ಯಾಪಕವಾಗಿ ಜೇನು ಸಾಕಾಣಿಕೆಯಲ್ಲಿ ಬಳಲಾಗುತ್ತಿದೆ. ಜೇನು ಸಾಕಾಣಿಕೆ ವಿಧಾನ, ಅದರ ಲಾಭಗಳು ಸೇರಿದಂತೆ ವಿವಿಧ ಮಾಹಿತಿಗಳು ಮೇಳದಲ್ಲಿ ಲಭ್ಯವಾಗಲಿದೆ.
ಏನಿದು ಜೇನು ಮೇಳ: ಜಿಲ್ಲೆಯಲ್ಲಿ ಜೇನು ಕೃಷಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ರೈತರು-ಸಾರ್ವಜನಿಕರಿಗೆ ಜಾಗೃತಿ ಮಾಡಿಸಲು ಮೇಳದ ಅವಶ್ಯಕತೆ ಅರಿತ ತೋಟಗಾರಿಕೆ ಇಲಾಖೆ ಇಂತಹದೊಂದು ಮೇಳ ಆಯೋಜನೆಯತ್ತ ಹೆಜ್ಜೆ ಹಾಕಿದೆ. ಜೇನು ತುಪ್ಪದ ಉತ್ಪಾದನೆಯ ಹೆಚ್ಚಳ ಜತೆ ಅದರ ಉಪ ಉತ್ಪನ್ನಗಳ ಉತ್ಪಾದನೆ, ಮಾರಾಟ ಬಗ್ಗೆ ಜಾಗೃತಿ ಹಾಗೂ ಅವುಗಳ ಮಾರಾಟಕ್ಕೆ ವೇದಿಕೆ ಕಲ್ಪಿಸುವ ಉದ್ದೇಶ ಈ ಮೇಳ ಹೊಂದಿದೆ. ಅದಕ್ಕಾಗಿ ಮೂರು ದಿನಗಳ ಕಾಲ ಮೇಳ ಆಯೋಜಿಸಲು ಚಿಂತಿಸಲಾಗಿದ್ದು, ಮಾವು ಮೇಳದಂತೆ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲೇ ಮಳಿಗೆಗಳನ್ನು ನಿರ್ಮಿಸಿ ಆ ಮೂಲಕ ಜೇನು ಕೃಷಿ ಬಗ್ಗೆ ಪ್ರಾತ್ಯಕ್ಷಿತೆ ನೀಡಲು ಯೋಚಿಸಲಾಗಿದೆ.
ಜೇನು ಉಪ ಉತ್ಪನ್ನಗಳ ಪ್ರದರ್ಶನ: ಜೇನು ಕೃಷಿ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಮೀಸಲಿರುವ ಐದು ಕೋಟಿ ಅನುದಾನದಲ್ಲಿ ಧಾರವಾಡ ಜಿಲ್ಲೆಗಾಗಿ 50 ಲಕ್ಷ ರೂ. ಅನುದಾನ ನೀಡಲಾಗಿದೆ. ಹೀಗಾಗಿ ಜೇನು ಕೃಷಿ ತರಬೇತಿ, ಜೇನು ಕುಟುಂಬ, ಪೆಟ್ಟಿಗೆ ಸಹಾಯಧನ ರೂಪದಲ್ಲಿ ಆಸಕ್ತ ರೈತರಿಗೆ ವಿತರಿಸುವ ಬಗ್ಗೆ ಜಾಗೃತಿ ಮೂಡಿಸಲು ಈ ಮೇಳವನ್ನು ಬಳಸಿಕೊಳ್ಳಲು ಮುಂದಾಗಿದೆ. ಇಷ್ಟೆ ಅಲ್ಲ ಜೇನಿನ ಉಪ ಉತ್ಪನ್ನಗಳಾದ ಪರಾಗ, ರಾಜಶಾಯಿ ರಸ, ಜೇನು ಮೇಣ ಸೇರಿದಂತೆ ಇತರೆ ಉತ್ಪನ್ನಗಳ ಬಗ್ಗೆ ಪ್ರದರ್ಶನ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಜೇನು ಕೃಷಿ ರೈತರು ಹಾಗೂ ಜೇನು ತುಪ್ಪ ತಯಾರಿಕಾ ಕಂಪನಿಗಳ ಜತೆ ಮಾತುಕತೆ ನಡೆಸಲಾಗಿದೆ. ಒಟ್ಟಿನಲ್ಲಿ ಜೇನು ಕೃಷಿ ಜತೆಗೆ ರುಚಿಗಟ್ಟಾದ ಜೇನು ತುಪ್ಪ ಸೇರಿದಂತೆ ಅದರ ಇನ್ನಿತರ ಉಪಉತ್ಪನ್ನಗಳು ಸಹ ಮೇಳದಲ್ಲಿ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲು ತಯಾರಿ ನಡೆದಿದೆ.
ಜಿಲ್ಲೆಯ ಅಳ್ನಾವರ, ನವಲೂರ, ಮಂಡಿಹಾಳ, ಕುಂದಗೋಳ ಸೇರಿದಂತೆ ಒಟ್ಟು 50 ಜನ ರೈತರು ಜೇನು ಕೃಷಿ ಮಾಡುತ್ತಿದ್ದಾರೆ. ಅವರಿಂದ ವರ್ಷಕ್ಕೆ 2 ರಿಂದ 4 ಕೆ.ಜಿ. ಜೇನು ತುಪ್ಪ ಉತ್ಪಾದನೆ ಆಗುತ್ತಿದೆ. ಆ ಪೈಕಿ ಅದು ಅವರವರ ಮನೆಗಾಗಿ ಬಳಕೆ ಆಗುತ್ತಿದ್ದರೆ ಕೆಲವೊಂದಿಷ್ಟು ಮಾರಾಟ ಆಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಜೇನು ಕೃಷಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಮೇಳ ಸಹಕಾರಿ ಆಗಲಿದ್ದು, ಈ ಮೇಳ ಯಶಸ್ಸು ಕಂಡರೆ ಪ್ರತಿ ವರ್ಷವೂ ಮಾಡುವ ಚಿಂತನೆ ತೋಟಗಾರಿಕೆ ಇಲಾಖೆಗೆ ಇದೆ.
• ಶಶಿಧರ್ ಬುದ್ನಿ