ಹುಬ್ಬಳ್ಳಿ: ಬಸ್‌ನಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣ, ನಗದು ಸೇರಿದಂತೆ ಇತರೆ ವಸ್ತುಗಳನ್ನು ಸಂಬಂಧಿಸಿದವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗದ ಚಾಲಕ ಹಾಗೂ ನಿರ್ವಾಹಕರನ್ನು ಸಂಸ್ಥೆ ವತಿಯಿಂದ ಗುರುವಾರ ಸನ್ಮಾನಿಸಲಾಯಿತು.
ಗದಗ ಘಟಕದ ಚಾಲಕ ಬಿ.ವೈ. ಸಾಲಿ, ನಿರ್ವಾಹಕಿ ಲಕ್ಷ್ಮೀ ಕಾಳೆ ಅವರನ್ನು ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಬಿ. ನಾಯಕ ಸನ್ಮಾನಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ಗದಗ-ಬಳಗಾನೂರ ಮಾರ್ಗದಲ್ಲಿ ನ. 7ರಂದು ಡೋಣಿ ಗ್ರಾಮದ ಅನ್ನಪೂರ್ಣಾ ಭೋವಿ ಎಂಬವರು 5.1 ಗ್ರಾಂ ಚಿನ್ನಾಭರಣ, 9500 ನಗದು ಸೇರಿದಂತೆ ಇತರೆ ವಸ್ತುಗಳಿದ್ದ ಬ್ಯಾಗನ್ನು ಬಸ್‌ನಲ್ಲಿ ಮರೆತು ಬಿಟ್ಟು ಹೋಗಿದ್ದರು. ಬಸ್‌ನಲ್ಲಿದ್ದ ಬ್ಯಾಗ್ ನ್ನು ಪರಿಶೀಲಿಸಿದಾಗ ಬೆಲೆ ಬಾಳುವ ವಸ್ತುಗಳು ಇರುವುದು ಗಮನಕ್ಕೆ ಬಂದಿದೆ.
ಕೂಡಲೇ ಚಾಲಕ ಹಾಗೂ ನಿರ್ವಾಹಕಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬ್ಯಾಗ್‌ನಲ್ಲಿದ್ದ ಬ್ಯಾಂಕ್ ಪಾಸ್‌ಬುಕ್ ಸಹಾಯದಿಂದ ಸಂಬಂಧಿಸಿದವರ ವಿಳಾಸ ಪತ್ತೆ ಮಾಡಿ ಬಿಟ್ಟು ಹೋಗಿದ್ದ ವಸ್ತುಗಳನ್ನು ಪ್ರಯಾಣಿಕರಿಗೆ ತಲುಪಿಸುವಲ್ಲಿ ಚಾಲಕ ಹಾಗೂ ನಿರ್ವಾಹಕಿ ಪ್ರಾಮಾಣಿಕತೆ ಮೆರೆದಿದ್ದರು.
ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಬೆಲೆ ಬಾಳುವ ವಸ್ತುಗಳನ್ನು ಸಂಬಂಧಿಸಿದವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಎಸ್.ಕೆ. ಹಳ್ಳಿ, ಮುಖ್ಯ ಸಂಚಾರ ವ್ಯವಸ್ಥಾಪಕ ವೆಂಕಟೇಶ ರೆಡ್ಡಿ, ಮುಖ್ಯ ಲೆಕ್ಕಾಧಿಕಾರಿ ಶಾಂತಪ್ಪ ಗೋಟಖಂಡಕಿ, ಉಪಮುಖ್ಯ ಸಂಚಾರ ವ್ಯವಸ್ಥಾಪಕ ಬಸಲಿಂಗಪ್ಪ ಬೀಡಿ, ವಿಭಾಗೀಯ ಸಾರಿಗೆ ಅಧಿಕಾರಿ ಕೆ. ಎಲ್. ಡೇನ್ನನವರ ಇತರರಿದ್ದರು.